ಕುಸ್ತಿಪಟು ಸಾವು ಬಳಿಕ 18 ದಿನ 7 ರಾಜ್ಯ ಸುತ್ತಿದ್ದ ಸುಶೀಲ್ ಕುಮಾರ್!
* ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಡೆಲ್ಲಿ ಯುವ ಕುಸ್ತಿ ಪಟುವಿನ ಕೊಲೆ ಪ್ರಕರಣ
* ಸಾಗರ್ ರಾಣಾ ಹತ್ಯೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಪ್ರಮುಖ ಆರೋಪಿ
* ತಲೆ ಮರೆಸಿಕೊಂಡಿದ್ದ ಸುಶೀಲ್ ಅವರನ್ನು ಬಂಧಿಸಿದ್ದ ಡೆಲ್ಲಿ ಪೊಲೀಸರು.
ನವದೆಹಲಿ(ಜೂ.01): ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ 2 ಬಾರಿ ಒಲಿಂಪಿಕ್ ಪದಕ ವಿಜೇತ, ದಿಗ್ಗಜ ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಮತ್ತಷ್ಟು ಸಾಕ್ಷ್ಯ ಸಂಗ್ರಹಕ್ಕೆ ದೆಹಲಿ ಪೊಲೀಸರು ಯತ್ನಿಸಿದ್ದಾರೆ.
ಕೊಲೆ ಬಳಿಕ ಅವರು ಎಲ್ಲೆಲ್ಲಿ ಅಡಗಿದ್ದರು ಎನ್ನುವುದನ್ನು ಪತ್ತೆ ಹಚ್ಚುವ ಕಾರ್ಯ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ ಸುಶೀಲ್ ಪಂಜಾಬ್‌ನಲ್ಲಿ ಬಂಧನಕ್ಕೊಳಗಾಗುವ ಮೊದಲು 18 ದಿನಗಳ ಕಾಲ 7 ರಾಜ್ಯಗಳನ್ನು ಸುತ್ತಿದ್ದರು ಎನ್ನಲಾಗಿದೆ. ಕೊಲೆ ಬಳಿಕ ಸುಶೀಲ್ ದೆಹಲಿಯಿಂದ ಮೊದಲು ಹರಿದ್ವಾರಕ್ಕೆ ಹೋಗಿದ್ದರು ಎನ್ನಲಾಗಿದ್ದು, ಸೋಮವಾರ ಸುಶೀಲ್‌ರನ್ನು ಕರೆದುಕೊಂಡು ಹರಿದ್ವಾರಕ್ಕೆ ತೆರಳಿದ್ದರು. ಸುಶೀಲ್ ತಮ್ಮ ಮೊಬೈಲ್ ಅನ್ನು ಹರಿದ್ವಾರದಲ್ಲೇ ಎಸೆದಿದ್ದರು ಎನ್ನುವ ಶಂಕೆಯೂ ಇದೆ. ಅವರು ಪದೇ ಪದೇ ಸಿಮ್ ಬದಲಿಸಿದ್ದರು ಎಂದು ಮೂಲಗಳು ತಿಳಿಸಿವೆ. ಅಲ್ಲದೇ, ಕೊಲೆ ನಡೆದ ವೇಳೆ ಅವರು ಧರಿಸಿದ್ದ ಬಟ್ಟೆ ಸಹ ಇನ್ನೂ ಪತ್ತೆಯಾಗಿಲ್ಲ.
ಕುಸ್ತಿಪಟು ಸುಶೀಲ್ ಕುಮಾರ್ ನಡೆಸಿದ್ದ ಹಲ್ಲೆಯ ಫೋಟೋಗಳು ವೈರಲ್..!
ಮೇ.04ರಂದು ನವದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಜೂನಿಯರ್ ನ್ಯಾಷನಲ್ ಕುಸ್ತಿ ಚಾಂಪಿಯನ್ ಸಾಗರ್ ರಾಣಾ ಹಾಗೂ ಮತ್ತವನ ಸ್ನೇಹಿತರ ಮೇಲೆ ಸುಶೀಲ್ ಕುಮಾರ್ ಹಾಗೂ ಸಹಚರರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಇದೆ. ಈ ಘಟನೆಯಾದ ಮರು ದಿನವೇ ಸಾಗರ್ ರಾಣಾ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ಘಟನೆ ಬಳಿಕ ಸುಶೀಲ್ ಕುಮಾರ್ ಹಾಗೂ ಮತ್ತವನ ಸಹಚರರು ತಲೆಮರೆಸಿಕೊಂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡೆಲ್ಲಿ ಪೊಲೀಸರು ಆರೋಪಿಗಳನ್ನು 18 ದಿನಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಸುಶೀಲ್ ಕುಮಾರ್ ಅವರನ್ನು ಡೆಲ್ಲಿಯ ರೋಹಿಣಿ ಕೋರ್ಟ್ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.