ಆಸ್ಪ್ರೇಲಿಯನ್ ಓಪನ್: ಶರಪೋವಾಗೆ ಮೊದಲ ಸುತ್ತಲ್ಲೇ ಶಾಕ್!
ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ರಷ್ಯಾದ ಮರಿಯಾ ಶರಪೋವಾ ಆರಂಭದಲ್ಲೇ ಮುಗ್ಗರಿಸಿದ್ದಾರೆ. 2014ರ ಬಳಿಕ ಗ್ರ್ಯಾಂಡ್ ಸ್ಲಾಂ ಫೈನಲ್ ತಲುಪುವಲ್ಲಿ ವಿಫಲರಾಗಿರುವ ಶರಪೋವಾ ಇದೀಗ ತೀವ್ರ ನಿರಾಸೆ ಅನುಭವಿಸಿದ್ದಾರೆ.
ಮೆಲ್ಬರ್ನ್(ಜ.22): ರಷ್ಯಾದ ಟೆನಿಸ್ ತಾರೆ ಮರಿಯಾ ಶರಪೋವಾ, ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂನ ಮೊದಲ ಸುತ್ತಿನಲ್ಲೇ ಸೋಲುಂಡು ಹೊರಬಿದ್ದಿದ್ದಾರೆ. ಈ ಸೋಲಿನಿಂದಾಗಿ ಅವರು ವಿಶ್ವ ರಾರಯಂಕಿಂಗ್‌ನಲ್ಲಿ 366ನೇ ಸ್ಥಾನಕ್ಕೆ ಕುಸಿದಿದ್ದು, ಮುಂದಿನ ವರ್ಷ ಆಸ್ಪ್ರೇಲಿಯನ್ ಓಪನ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜತೆಗೆ ವೃತ್ತಿಬದುಕಿಗೂ ಸದ್ಯದಲ್ಲೇ ವಿದಾಯ ಹೇಳುವ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ಆಸ್ಪ್ರೇಲಿಯನ್ ಓಪನ್: 2ನೇ ಸುತ್ತಿಗೆ ಫೆಡರರ್, ಸೆರೆನಾ
ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದ ಶರಪೋವಾ, ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ 19ನೇ ಶ್ರೇಯಾಂಕಿತೆ, ಕ್ರೊವೇಷಿಯಾದ ಡೊನ್ನಾ ವೆಕಿಚ್ ವಿರುದ್ಧ 3-6, 4-6 ನೇರ ಸೆಟ್‌ಗಳಲ್ಲಿ ಪರಾಭವಗೊಂಡರು. ತಮ್ಮ ಟೆನಿಸ್ ವೃತ್ತಿಬದುಕಿನಲ್ಲಿ ಶರಪೋವಾ, ಸತತ 3 ಗ್ರ್ಯಾಂಡ್‌ಸ್ಲಾಂಗಳ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದು ಇದೇ ಮೊದಲ ಬಾರಿ.
ಇದನ್ನೂ ಓದಿ: ಟೆನಿಸ್: ಸಾನಿಯಾ ಮಿರ್ಜಾ ಭರ್ಜರಿ ಪುನರಾಗಮನ
2008ರಲ್ಲಿ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದ ಶರಪೋವಾ, 2014ರಲ್ಲಿ ಫ್ರೆಂಚ್ ಓಪನ್ ಜಯಿಸಿದ್ದರು. ಆ ಬಳಿಕ ಅವರು ಗ್ರ್ಯಾಂಡ್‌ಸ್ಲಾಂ ಫೈನಲ್ ತಲುಪಿಲ್ಲ.
ನಡಾಲ್, ಹಾಲೆಪ್‌ಗೆ ಮುನ್ನಡೆ: ವಿಶ್ವ ನಂ.1 ರಾಫೆಲ್ ನಡಾಲ್, ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದರು. ಬೊಲಿವಿಯಾದ ಹ್ಯುಗೊ ಡೆಲಿಯನ್ ವಿರುದ್ಧ 6-2, 6-3, 6-0 ಸೆಟ್‌ಗಳಲ್ಲಿ ಜಯ ಗಳಿಸಿದರು. 4ನೇ ಶ್ರೇಯಾಂಕಿತ ಡಾನಿಲ್ ಮೆಡ್ವೆಡೆವ್ ಸಹ 2ನೇ ಸುತ್ತಿಗೆ ಪ್ರವೇಶಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ 2ನೇ ಶ್ರೇಯಾಂಕಿತೆ ಕ್ಯಾರೋಲಿನಾ ಪ್ಲಿಸ್ಕೋವಾ, 4ನೇ ಶ್ರೇಯಾಂಕಿತೆ ಸಿಮೋನಾ ಹಾಲೆಪ್, 5ನೇ ಶ್ರೇಯಾಂಕಿತೆ ಎಲೆನಾ ಸ್ವಿಟೋಲಿನಾ ಸುಲಭ ಗೆಲುವು ಪಡೆದು 2ನೇ ಸುತ್ತಿಗೇರಿದರು.
ಪ್ರಜ್ನೇಶ್‌ಗೆ ಸೋಲು
ಸಿಂಗಲ್ಸ್ ವಿಭಾಗದಲ್ಲಿ ಪ್ರಧಾನ ಸುತ್ತಿಗೆ ಪ್ರವೇಶ ಪಡೆದಿದ್ದ ಭಾರತದ ಏಕೈಕ ಆಟಗಾರ ಪ್ರಜ್ನೇಶ್ ಗುಣೇಶ್ವರನ್ ಮೊದಲ ಸುತ್ತಿನಲ್ಲೇ ಸೋಲುಂಡರು. ಮಂಗಳವಾರ ನಡೆದ ಪಂದ್ಯದಲ್ಲಿ ಜಪಾನ್‌ನ ತಟ್ಸುಮಾ ಇಟೊ ವಿರುದ್ಧ 4-2, 2-6, 5-7 ಸೆಟ್‌ಗಳಲ್ಲಿ ಪರಾಭಗೊಂಡರು. ಪ್ರಜ್ನೇಶ್ ಗೆದ್ದಿದ್ದರೆ 2ನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಚ್ ವಿರುದ್ಧ ಆಡುವ ಅವಕಾಶ ಸಿಗುತ್ತಿತ್ತು.