ಆಸ್ಪ್ರೇಲಿಯನ್ ಓಪನ್: 2ನೇ ಸುತ್ತಿಗೆ ಫೆಡರರ್, ಸೆರೆನಾ
ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರೋಜರ್ ಫೆಡರರ್, ಸೆರೆನಾ ವಿಲಿಯಮ್ಸ್ ನಿರೀಕ್ಷೆಯಂತೆಯೇ ಶುಭಾರಂಭ ಮಾಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಮೆಲ್ಬರ್ನ್(ಜ.21): ಹಾಲಿ ಚಾಂಪಿಯನ್‌ಗಳಾದ ನೋವಾಕ್ ಜೋಕೋವಿಚ್ ಹಾಗೂ ನವೊಮಿ ಒಸಾಕ ಸೋಮವಾರ ಇಲ್ಲಿ ಆರಂಭಗೊಂಡ 2020ರ ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ತಾರಾ ಟೆನಿಸಿಗರಾದ ರೋಜರ್ ಫೆಡರರ್ ಹಾಗೂ ಸೆರೆನಾ ವಿಲಿಯಮ್ಸ್ ಸಹ ಗೆಲುವಿನ ಅರಂಭ ಪಡೆದು, 2ನೇ ಸುತ್ತಿಗೆ ಪ್ರವೇಶಿಸಿದರು.
ಇಂದಿನಿಂದ ಆಸ್ಪ್ರೇಲಿಯನ್ ಓಪನ್ ಟೆನಿಸ್
ಜೋಕೋವಿಚ್‌ಗೆ ಮೊದಲ ಸುತ್ತಿನಲ್ಲೇ ಪ್ರಬಲ ಸ್ಪರ್ಧೆ ಎದುರಾಯಿತು. ಜರ್ಮನಿಯ ಜಾನ್ ಲೆನ್ನಾರ್ಡ್ ಸ್ಟ್ರಫ್ ವಿರುದ್ಧ 7-6, 6-2, 2-6, 6-1 ಸೆಟ್‌ಗಳಲ್ಲಿ ಜಯಗಳಿಸಿದರು. ರೋಜರ್ ಫೆಡರರ್‌ಗೆ ಮೊದಲ ಸುತ್ತಿನಲ್ಲಿ ಅಮೆರಿಕದ ಸ್ಟೀವ್ ಜಾನ್ಸನ್ ಎದುರಾದರು. 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಫೆಡರರ್ 6-3, 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. 6ನೇ ಶ್ರೇಯಾಂಕಿತ ಗ್ರೀನ್‌ನ ಸ್ಟೆಫಾನೋ ಟಿಟ್ಸಿಪಾಸ್, ಇಟಲಿಯ ಸಾಲ್ವೊ ಕರುಸೊ ವಿರುದ್ಧ 6-0, 6-2, 6-3 ಸೆಟ್‌ಗಳಲ್ಲಿ ಗೆದ್ದು 2ನೇ ಸುತ್ತಿಗೇರಿದರು.
ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಒಸಾಕ, ಚೆಕ್ ಗಣರಾಜ್ಯದ ಮಾರಿ ಬೊಜ್ಕೋವಾ ವಿರುದ್ಧ 6-2, 6-4 ಸೆಟ್‌ಗಳಲ್ಲಿ ಗೆದ್ದರೆ, ಸೆರೆನಾ ವಿಲಿಯಮ್ಸ್ ರಷ್ಯಾದ ಅನಸ್ತಾಸಿಯಾ ಪೊಟಪೊವಾ ವಿರುದ್ಧ 6-0, 6-3 ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು.
ವಿಶ್ವ ನಂ.1, ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ಮೊದಲ ಸುತ್ತಲ್ಲೇ ಸೋಲುವ ಭೀತಿಗೆ ಸಿಲುಕಿದ್ದರು. ಉಕ್ರೇನ್‌ನ ಲೆಸಿಯಾ ಸುರೆನ್ಕೋ ವಿರುದ್ಧದ ಪಂದ್ಯದ ಮೊದಲ ಸೆಟ್ ಅನ್ನು 5-7ರಲ್ಲಿ ಸೋತು ಹಿನ್ನಡೆ ಅನುಭವಿಸಿದರು. ಆದರೆ ನಂತರದ 2 ಸೆಟ್‌ಗಳನ್ನು 6-1, 6-1ರಲ್ಲಿ ಗೆದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಭಾರೀ ಮಳೆ: 17 ಪಂದ್ಯಗಳು ಸ್ಥಗಿತ
ಟೂರ್ನಿ ಆರಂಭಕ್ಕೂ ಮ್ನುನ ದಟ್ಟಹೊಗೆಯ ಸಮಸ್ಯೆ ಎದುರಾಗಿತ್ತು. ಆದರೆ ಸೋಮವಾರ ಭಾರೀ ಮಳೆ ಸುರಿಯಿತು. ಇದರಿಂದಾಗಿ ನಿಗದಿಯಾಗಿದ್ದ 64 ಪಂದ್ಯಗಳ ಪೈಕಿ 17 ಪಂದ್ಯಗಳನ್ನು ಸ್ಥಗಿತಗೊಳಿಸಲಾಯಿತು. ಪಂದ್ಯಗಳು ಮಂಗಳವಾರ ಮುಂದುವರಿಯಲಿವೆ. ಭಾರತದ ಪ್ರಜ್ನೇಶ್ ಗುಣೇಶ್ವರನ್‌ರ ಮೊದಲ ಸುತ್ತಿನ ಪಂದ್ಯ ಸಹ ಮಂಗಳವಾರಕ್ಕೆ ಮುಂದೂಡಲ್ಪಟ್ಟಿತು.