ರಾಜ್ಯದ ಕ್ರೀಡಾಪಟುಗಳಿಗೆ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ
* ರಾಜ್ಯದ ಕ್ರೀಡಾಪಟುಗಳಿಗೆ ಲಸಿಕಾ ಅಭಿಯಾನಕ್ಕೆ ಕೆಒಎ ಚಾಲನೆ
* ಕಂಠೀರವ ಕ್ರೀಡಾಂಗಣದಲ್ಲಿ ಲಸಿಕಾ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ
* ಮೊದಲ ದಿನವೇ ರಾಜ್ಯದಾದ್ಯಂತ 3,500 ಮಂದಿ ಲಸಿಕೆ ಪಡೆಯುವ ನಿರೀಕ್ಷೆ
ಬೆಂಗಳೂರು(ಜೂ.10): ರಾಜ್ಯದ ಕ್ರೀಡಾಪಟುಗಳಿಗೆ ಉಚಿತವಾಗಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಇಂದು(ಜೂ.10) ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಹಲವಾರು ಕ್ರೀಡಾಪಟುಗಳು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.
ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್(ಕೆಒಎ) ಸಹಭಾಗಿತ್ವದಲ್ಲಿ ಲಸಿಕಾ ಮಹಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಲಸಿಕೆಯಿಂದ ಮಾತ್ರವೇ ಕೋವಿಡ್ ಗುಣಪಡಿಸಲು ಸಾಧ್ಯ. ಲಸಿಕೆ ಅಭಿಯಾನ ಆಯೋಜಿಸಿರುವ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‌ಗೆ ಅನಂತ ಧನ್ಯವಾದಗಳು ಎಂದು ಮಾಜಿ ಬ್ಯಾಡ್ಮಿಂಟನ್ ಆಟಗಾರ ಅನುಪ್ ಶ್ರೀಧರ್ ಹೇಳಿದ್ದಾರೆ.
ಕ್ರೀಡಾಪಟುಗಳು, ಕೋಚ್, ಸಹಾಯಕ ಸಿಬ್ಬಂದಿ ಸೇರಿದಂತೆ ರಾಜ್ಯಾದ್ಯಂತ ಈಗಾಗಲೇ 2,200 ಮಂದಿ ಕೋವಿಡ್ ಲಸಿಕೆ ಪಡೆಯಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆಂದು ಕ್ರೀಡಾಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.
ಜೂನ್ 10, 11ರಂದು ಕರ್ನಾಟಕ ರಾಜ್ಯದ ಕ್ರೀಡಾಪಟುಗಳಿಗೆ ಕೊರೋನಾ ಲಸಿಕೆ
ಎಲ್ಲಾ ಕ್ರೀಡಾಪಟುಗಳಿಗೆ, ಸಹಾಯಕ ಸಿಬ್ಬಂದಿಗಳಿಗೆ, ಕೋಚ್‌ಗಳಿಗೆ ಕೊರೋನಾ ಲಸಿಕೆ ಒದಗಿಸಬೇಕು ಎಂದು 20 ದಿನಗಳ ಹಿಂದೆ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರಬರೆದಿದ್ದೆ. ಅವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಬೆಂಗಳೂರಿನಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಇಂದು 3,500 ಮಂದಿ ಲಸಿಕೆ ಪಡೆಯಲಿದ್ದಾರೆ ಎಂದು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ . ಗೋವಿಂದರಾಜು ತಿಳಿಸಿದ್ದಾರೆ.
ಗುರುವಾರ ಮತ್ತು ಶುಕ್ರವಾರ(ಜೂನ್ 10& ಜೂನ್ 11) ಬೆಂಗಳೂರು ಮಾತ್ರವಲ್ಲದೇ ರಾಜ್ಯದಾದ್ಯಂತ ಇರುವ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕ್ರೀಡಾ ಕೇಂದ್ರಗಳಲ್ಲಿ ರಾಜ್ಯದ ಕ್ರೀಡಾಪಟುಗಳಿಗೆ ಕೋವಿಡ್ ಲಸಿಕೆ ನೀಡಲು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕೆಒಎ ಮುಂದಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona