ಬೆಂಗಳೂರು(ಫೆ.10): ದೇಶದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಮಿನಿ ಒಲಿಂಪಿಕ್ಸ್‌ಗೆ ಭಾನುವಾರ ತೆರೆ ಎಳೆಯಲಾಯಿತು. ಅಂಡರ್‌ 14 ವಯೋಮಿತಿಯಲ್ಲಿ 7 ದಿನಗಳ ಕಾಲ ನಡೆದ ಕೂಟದಲ್ಲಿ 18 ಕ್ರೀಡೆಗಳಲ್ಲಿ ರಾಜ್ಯದ ಸುಮಾರು 3500 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಸೇರಿದಂತೆ 6 ಕ್ರೀಡಾಂಗಣದಲ್ಲಿ ಯುವ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಉಪಮುಖ್ಯಮಂತ್ರಿ ಅಶ್ವತ್‌್ಥ ನಾರಾಯಣ, ‘ಸಮಾಜದಲ್ಲಿ ಮಕ್ಕಳು ಶಿಕ್ಷಣಕ್ಕೆ ಎಷ್ಟುಆದ್ಯತೆ ನೀಡುತ್ತಾರೋ ಅಷ್ಟೇ ಒತ್ತು ಕ್ರೀಡೆಗೂ ನೀಡಬೇಕು. ದೈಹಿಕವಾಗಿ ಯಾವುದೇ ಸಮಸ್ಯೆಗಳಿದ್ದರೂ ಕ್ರೀಡೆ ಅದಕ್ಕೆ ಪರಿಹಾರವಾಗಿದೆ. ಕ್ರೀಡೆಯಲ್ಲಿ ಸಕ್ರಿಯರಾಗಿದ್ದರೆ ದಿನಪೂರ್ತಿ ಚಟುವಟಿಕೆಯಿಂದ ಇರಬಹುದು. ಹೀಗಾಗಿ ಮಕ್ಕಳು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.

ಮಿನಿ ಒಲಿಂಪಿಕ್ಸ್‌ ಈಜು: ವಿದಿತ್‌ಗೆ ಡಬಲ್‌ ಚಿನ್ನ

ಈ ವೇಳೆ ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್‌, ಕೂಟದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿದ ಕ್ರೀಡಾಪಟುಗಳಿಗೆ ರಾಜ್ಯ ಕ್ರೀಡಾ ಇಲಾಖೆಯ ಹಾಸ್ಟೆಲ್‌ಗಳಲ್ಲಿ ರಿಯಾಯಿತಿ ನೀಡಲಾಗುವುದು. ಕ್ರೀಡೆಯ ಅಭಿವೃದ್ಧಿಗಾಗಿ, ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡರೆ ಶೇ.5 ರಷ್ಟುಹಾಗೂ ಅಂ.ರಾ. ಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿದರೆ ಶೇ.10 ರಷ್ಟುಗ್ರೇಸ್‌ ಮಾರ್ಕ್ಸ್‌ ನೀಡಬೇಕು. ಜಿಲ್ಲಾ ಕ್ರೀಡಾಂಗಣಗಳಲ್ಲಿ ಮೂಲಭೂತ ಸೌಕರ‍್ಯ ಕಲ್ಪಿಸಬೇಕು. ಕ್ರೀಡಾಪಟುಗಳಿಗೆ ಪೊಲೀಸ್‌ ಇಲಾಖೆಯ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಅರಣ್ಯ ಇಲಾಖೆಯಲ್ಲಿ ಇನ್ನು ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳ ನೇಮಕಕ್ಕೆ ಸರ್ಕಾರ ಮುಂದಾಗಬೇಕು ಎಂದರು. ಗೋವಿಂದರಾಜ್‌ ಸಲ್ಲಿಸಿದ ಎಲ್ಲಾ ಮನವಿಗಳನ್ನು ರಾಜ್ಯ ಸರ್ಕಾರದಿಂದ ಶೀಘ್ರವೇ ಜಾರಿಗೆ ತರುವಂತಹ ಕೆಲಸ ಮಾಡಲಿದ್ದೇವೆ ಎಂದು ಅಶ್ವತ್‌್ಥ ನಾರಾಯಣ ಭರವಸೆ ನೀಡಿದರು.

ಕೂಟದಲ್ಲಿನ ಆಯಾ ಕ್ರೀಡೆಗಳಲ್ಲಿ ಚಾಂಪಿಯನ್‌ ಹಾಗೂ ರನ್ನರ್‌ ಅಪ್‌ ಆದ ತಂಡಗಳಿಗೆ ಪ್ರಶಸ್ತಿ ವಿತರಣೆ ನಡೆಸಲಾಯಿತು. ಅಥ್ಲೆಟಿಕ್ಸ್‌ನ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡದ ಕುಲ್ದೀಪ್‌ ಕುಮಾರ್‌ ಹಾಗೂ ಬಾಲಕಿಯರ ವಿಭಾಗದಲ್ಲಿ ಧಾರವಾಡದ ಪ್ರಿಯಾಂಕ ಒಲೇಕರ್‌ ಉತ್ತಮ ಅಥ್ಲೀಟ್‌ ಪ್ರಶಸ್ತಿಗೆ ಪಾತ್ರರಾದರು. ಸಮಾರಂಭದಲ್ಲಿ ಶಾಸಕ ರಿಜ್ವಾನ್‌ ಅರ್ಷಾದ್‌, ನಾರಾಯಣಸ್ವಾಮಿ, ರಾಜ್ಯದ ಮೊದಲ ಒಲಿಂಪಿಯನ್‌ ಕೆನೆತ್‌ ಪೊವೆಲ್‌, ಮಾಜಿ ಹಾಕಿ ಆಟಗಾರರಾದ ದಿಲೀಪ್‌ ಟರ್ಕಿ, ಆಶೀಶ್‌ ಬಲ್ಲಾಳ್‌ ಉಪಸ್ಥಿತರಿದ್ದರು.