ಕುಸ್ತಿಯಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಪ್ರಿಯಾ ಮಲಿಕ್..!
* ಅಂತರಾಷ್ಟ್ರೀಯ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ಪ್ರಿಯಾ ಮಲಿಕ್
* ಕೆಡೆಟ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಿಯಾ ಮಲಿಕ್‌ಗೆ ಒಲಿದ ಚಿನ್ನ
* ಒಲಿಂಪಿಕ್ಸ್‌ನಲ್ಲಿ ಭಾರತ ಪ್ರತಿನಿಧಿಸುವ ಕನಸು ಕಾಣುತ್ತಿರುವ ಪ್ರಿಯಾ
ಹಂಗೇರಿ(ಜು.25): ಒಂದು ಕಡೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದಾರೆ. ಇಂದು ಭಾರತದ ಮತ್ತೊಬ್ಬ ಕುಸ್ತಿ ತಾರೆ ಪ್ರಿಯಾ ಮಲಿಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಹೌದು, ಹಂಗೇರಿಯಾದಲ್ಲಿ ನಡೆಯುತ್ತಿರುವ ಕೆಡೆಟ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಮಹಿಳಾ ಕುಸ್ತಿಪಟು ಪ್ರಿಯಾ ಮಲಿಕ್ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರವಷ್ಟೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು 49 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 202 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು. ಇದೀಗ ದಿನ ಬೆಳಗಾಗುವಷ್ಟರಲ್ಲಿ ಪ್ರಿಯಾ ಮಲಿಕ್ ಕುಸ್ತಿ ಅಖಾಡದಲ್ಲಿ ಭಾರತದ ಬಾವುಟ ಮಿನುಗುವಂತೆ ಮಾಡಿದ್ದಾರೆ.
ಟೋಕಿಯೋ 2020: ಬಲಿಷ್ಠ ಪಂಚ್‌ಗಳ ಮೂಲಕ ಶುಭಾರಂಭ ಮಾಡಿದ ಬಾಕ್ಸರ್ ಮೇರಿ ಕೋಮ್
73 ಕೆ.ಜಿ ವಿಭಾಗದ ಕುಸ್ತಿ ಫೈನಲ್‌ನಲ್ಲಿ ಪ್ರಿಯಾ ಮಲಿಕ್ 5-0 ಬೌಟ್ ಅಂಕಗಳ ಅಂತರದಲ್ಲಿ ಕ್ಸಿನಿಯಾ ಪಟಪೋವಿಚ್ ಅವರನ್ನು ಮಣಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ದಿದ್ದಾರೆ. ಹರ್ಯಾಣದ ಜಿಂದ್ ಜಿಲ್ಲೆಯ ಕುಸ್ತಿಪಟುವಾಗಿರುವ ಪ್ರಿಯಾ ಮಲಿಕ್ ಚೌಧರಿ ಭಾರತ ಸಿಂಹ ಮೆಮೊರಿಯಲ್ ಕ್ರೀಡಾಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಕನಸು ಕಾಣುತ್ತಿದ್ದಾರೆ ಪ್ರಿಯಾ ಮಲಿಕ್.
ಭಾರತದ ಭವಿಷ್ಯದ ಕುಸ್ತಿ ತಾರೆ ಪ್ರಿಯಾ ಮಲಿಕ್ ಅವರ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ.