'ಧೋನಿಯ ರೀತಿ ನಾನೂ ಟಿಕೆಟ್ ಕಲೆಕ್ಟರ್..' ಕಂಚಿಗೆ ಶೂಟ್ ಮಾಡಿದ ಸ್ವಪ್ನಿಲ್‌ಗೆ ಸ್ಪೂರ್ತಿಯಾಗಿದ್ದು ಎಂಎಸ್‌ಡಿ!
Swapnil Kusale ತನ್ನ ಮೊಟ್ಟಮೊದಲ ಒಲಿಂಪಿಕ್ಸ್ ಕೂಟದಲ್ಲಿಯೇ ಕಂಚಿನ ಪದಕಕ್ಕೆ ಗುರಿ ಇಟ್ಟ ಮಹಾರಾಷ್ಟ್ರ ಮೂಲದ ಸ್ವಪ್ನಿಲ್ ಕುಸಾಲೆಗೆ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿಯೇ ಸ್ಫೂರ್ತಿ.
ಬೆಂಗಳೂರು (ಆ.1): ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೂರನೇ ಸಂಭ್ರಮ ಸಿಕ್ಕಿದೆ. ಶೂಟಿಂಗ್‌ನಲ್ಲಿ ಭಾರತದ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಜಯಿಸಿದ್ದಾರೆ. ಆ ಮೂಲಕ ಮನು ಭಾಕರ್ ಬಳಿಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ 2ನೇ ಅಥ್ಲೀಟ್ ಎನಿಸಿದ್ದಾರೆ. 2024ರ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ ಸ್ವಪ್ನಿಲ್ ಕುಸಾಲೆಗೆ ಇದು ಮೊಟ್ಟಮೊದಲ ಒಲಿಂಪಿಕ್ಸ್. ಮೊದಲ ಒಲಿಂಪಿಕ್ಸ್‌ನಲ್ಲಿಯೇ ಅವರು ಪದಕ ಸಾಧನೆ ಮಾಡಿದ್ದಾರೆ. ನಿಮಗೆ ಗೊತ್ತಿಲ್ಲದ ವಿಚಾರವೇನೆಂದರೆ, ಶೂಟರ್ ಸ್ವಪ್ನಿಲ್ ಕುಸಾಲೆ ಹಾಗೂ ಎಂಎಸ್ ಧೋನಿ ನಡುವೆ ಕೊಂಚ ಲಿಂಕ್ ಇದೆ. ತಮ್ಮ ಕ್ರೀಡಾ ಬದುಕಿಗೆ ಎಂಎಸ್ ಧೋನಿಯೇ ಸ್ಫೂರ್ತಿ ಎಂದು ಸ್ವಪ್ನಿಲ್ ಕುಸಾಲೆ ಹೇಳಿದ್ದಾರೆ. ಏಕೆಂದರೆ, ಎಂಎಸ್ ಧೋನಿ ಕೂಡ ಒಂದು ಕಾಲದಲ್ಲಿ ರೈಲ್ವೇಸ್‌ನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದವರು. ಅದೇ ರೀತಿ ಸ್ವಪ್ನಿಲ್ ಕುಸಾಲೆ ಕೂಡ ಪುಣೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದುಕೊಂಡೇ ಶೂಟಿಂಗ್ ಅಭ್ಯಾಸ ಮಾಡಿದ್ದರು.
ಗುರುವಾರ ನಡೆದ 50 ಮೀಟರ್ 3 ಪೊಸಿಷನ್ ರೈಫಲ್ ಶೂಟಿಂಗ್‌ನ ಫೈನಲ್‌ನಲ್ಲಿ ಸ್ವಪ್ನಿಲ್ ಕುಸಾಲೆ 451 ಅಂಕ ಸಂಪಾದಿಸಿ ಚೊಚ್ಚಲ ಒಲಿಂಪಿಕ್ಸ್ ಪದಕ ಜಯಿಸಿದರು. ತಮ್ಮ ಕ್ರೀಡಾ ಬದುಕಿಗೆ ಎಂಎಸ್ ಧೋನಿಯೇ ಸ್ಫೂರ್ತಿ ಎಂದಿರುವ ಅವರು, ಶೂಟಿಂಗ್‌ಅನ್ನು ವೃತ್ತಿಪರವಾಗಿ ಆಯ್ಕೆ ಮಾಡಿಕೊಳ್ಳುವ ನಿರ್ಧಾರ ಮಾಡುವ ಮುನ್ನ ನಾನು ಟಿಕೆಟ್ ಕಲೆಕ್ಟರ್ ಆಗಿದ್ದೆ ಎಂದಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ಸಮೀಪದ ಕಂಬಳವಾಡಿ ಗ್ರಾಮದ 29 ವರ್ಷದ ಸ್ವಪ್ನಿಲ್ ಕುಸಾಲೆ 2012ರಿಂದ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರೂ, ತಮ್ಮ ಮೊಟ್ಟಮೊದಲ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸಲುವಾಗಿ 12 ವರ್ಷ ಕಾಯಬೆಕಾಯಿತು. ಶಾಂತ ಮತ್ತು ತಾಳ್ಮೆಯು ಶೂಟರ್‌ಗೆ ಇರಲೇಬೇಕಾದ ಗುಣ. ಆ ಎರಡು ಗುಣಲಕ್ಷಣಗಳು ಧೋನಿಯ ವ್ಯಕ್ತಿತ್ವದ ವಿಶಿಷ್ಟ ಲಕ್ಷಣಗಳಾಗಿವೆ. ಆದ್ದರಿಂದ ಕುಸಾಲೆ ಧೋನಿಯ ಜೀವನ ಕಥೆಗೆ ಸಂಬಂಧಿಸಿರುವುದು ಆಶ್ಚರ್ಯವೇನಿಲ್ಲ.
2011ರ ಏಕದಿನ ವಿಶ್ವಕಪ್ ಗೆದ್ದ ಎಂಎಸ್ ಧೋನಿ ಅವರ ಬಯೋಪಿಕ್‌ಅನ್ನು ನಾನು ಹಲವು ಬಾರಿ ನೋಡಿದ್ದೇನೆ. ಅದರಿಂದಲೇ ನನ್ನ ಕ್ರೀಡಾ ಜೀವನಕ್ಕೆ ಸ್ಫೂರ್ತಿ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ' ನಾನು ಶೂಟಿಂಗ್ ಜಗತ್ತಿನಲ್ಲಿ ಯಾರೇ ಒಬ್ಬ ಅಥ್ಲೀಟ್‌ಅನ್ನು ನಾನು ಅನುಕರಣೆ ಮಾಡೋದಿಲ್ಲ. ಅದರ ಹೊರತಾಗಿ ನಾನು ಧೋನಿಯನ್ನು ಬಹಳ ಇಷ್ಟಪಡುತ್ತೇನೆ. ನನ್ನ ಕ್ರೀಡೆಯು ಮೈದಾನದಲ್ಲಿ ಧೋನಿ ಅವರಂತೆ ಶಾಂತವಾಗಿ ಮತ್ತು ತಾಳ್ಮೆಯಿಂದಿರಬೇಕು ಎನ್ನುವುದನ್ನು ಬಯಸುತ್ತದೆ. ನಾನು ಅವರಂತೆಯೇ ಟಿಕೆಟ್ ಕಲೆಕ್ಟರ್ ಆಗಿರುವುದರಿಂದ ನಾನು ಅವರ ಕಥೆಯೊಂದಿಗೆ ಸಂಬಂಧ ಹೊಂದಿದ್ದೇನೆ ಎನಿಸುತ್ತದೆ' ಎಂಸು ಸ್ವಪ್ನಿಲ್ ಕುಸಾಲೆ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದ ವೇಳೆ ಹೇಳಿದ್ದರು.
ಕಂಚಿನ ಪದಕ ಬೇಟೆಯಾಡಿದ ಸ್ವಪ್ನಿಲ್ ಕುಶಾಲೆ; ಭಾರತಕ್ಕೆ ಒಲಿದ ಮೂರನೇ ಒಲಿಂಪಿಕ್ ಪದಕ
2015 ರಿಂದ ಸ್ವಪ್ನಿಲ್ ಕುಸಲೆ ಕೇಂದ್ರ ರೈಲ್ವೇಸ್‌ನಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕ್ರೀಡಾ ಪ್ರಬೋಧಿನಿ ಸ್ಕೀಮ್ ಮೂಲಕ ಕ್ರೀಡಾಪಟುವಾಗಿ ಬದಲಾದವರು. ಈಗ ಅವರ ಹೆಸರಿಗೆ ಸೇರಿದ ಹೊಸ ದಾಖಲೆ ಏನೆಂದರೆ, ಒಲಿಂಪಿಕ್‌ನ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಸ್ಫೂರ್ತಿಗಾಗಿ ಕುಸಾಲೆ ಬೇರೆಲ್ಲೂ ನೋಡಬೇಕಾಗಿಲ್ಲ. ಅವರ ತಂದೆ ಮತ್ತು ಸಹೋದರ ಜಿಲ್ಲಾ ಶಾಲೆಯಲ್ಲಿ ಶಿಕ್ಷಕರಾಗಿದ್ದರೆ, ತಾಯಿ ಕಂಬಲವಾಡಿ ಗ್ರಾಮದ ಸರಪಂಚ್ ಆಗಿದ್ದಾರೆ.
ಕ್ವಾರ್ಟರ್‌ಗೆ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್, ಒಲಿಂಪಿಕ್ ಪದಕಕ್ಕೆ ಇನ್ನೊಂದೇ ಪಂಚ್ ಬಾಕಿ!