ಶೂಟಿಂಗ್‌ನಲ್ಲಿ ಭಾರತ ಮೂರನೇ ಒಲಿಂಪಿಕ್ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪುರುಷರ 50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಸ್ವಪ್ನಿಲ್ ಕುಶಾಲೆ ಕಂಚಿನ ಪದಕ ಜಯಿಸಿದ್ದಾರೆ
ಪ್ಯಾರಿಸ್: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ 50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಸ್ವಪ್ನಿಲ್ ಕುಶಾಲೆ ಕಂಚಿನ ಪದಕ ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವಪ್ನಿಲ್ ಕುಶಾಲೆ ಮಂಡಿಯೂರಿ ಶೂಟ್ ಮಾಡುವ ವಿಭಾಗದಲ್ಲಿ 153.03 (50.8, 50.9, 51.6) ಆರನೇ ಸ್ಥಾನದಲ್ಲಿದ್ದರು. ಇದಾದ ಬಳಿಕ ಪ್ರೋನ್ ಅಂದರೆ ನೆಲದ ಮೇಲೆ ಮಲಗಿ ಶೂಟ್ ಮಾಡುವ ವಿಭಾಗದಲ್ಲಿ 310.1 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಜಿಗಿದರು. ಇದಾದ ಬಳಿಕ ನಿಂತುಕೊಂಡು ಶೂಟ್ ಮಾಡುವ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರಿದ ಸ್ವಪ್ನಿಲ್ ಕುಶಾಲೆ 451.4 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾದರು.
ಪುರುಷರ 50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಇದುವರೆಗೂ ಯಾವೊಬ್ಬ ಭಾರತೀಯ ಶೂಟರ್ ಫೈನಲ್ ಪ್ರವೇಶಿಸಿರಲಿಲ್ಲ. ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್ 7ನೇ ಸ್ಥಾನ ಪಡೆದರು. ಒಟ್ಟು 44 ಶೂಟರ್‌ಗಳ ಪೈಕಿ ಅಗ್ರ-8 ಸ್ಥಾನ ಪಡೆದವರು ಫೈನಲ್‌ಗೇರಿದ್ದರು. ಇದೀಗ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಹಾಗೂ ವಿಶ್ವದಾಖಲೆ ಹೊಂದಿರುವ ಶೂಟರ್‌ಗಳ ನಡುವೆ ಪದಕಕ್ಕೆ ಗುರಿ ಯಿಡುವಲ್ಲಿ ಸ್ವಪ್ನಿಲ್ ಯಶಸ್ವಿಯಾದರು.
ಪ್ಯಾರಿಸ್ ಒಲಿಂಪಿಕ್ಸ್: ಶೂಟಿಂಗ್‌ನಲ್ಲಿ ಇಂದು ಮತ್ತೊಂದು ಪದಕ ನಿರೀಕ್ಷೆ!
ಭಾರತಕ್ಕೆ ಒಲಿದ ಮೂರನೇ ಪದಕ: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದೀಗ ಮೂರನೇ ಕಂಚಿನ ಪದಕ ಒಲಿದಿದೆ. ಈ ಮೊದಲು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಪದಕದ ಖಾತೆ ತೆರೆದಿದ್ದರು. ಇದಾದ ಬಳಿಕ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಜೋಡಿ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಈ ಸಾಲಿಗೆ ಸ್ವಪ್ನಿಲ್ ಕುಶಾಲೆ ಸೇರ್ಪಡೆಯಾಗಿದ್ದಾರೆ.
