ಒಲಿಂಪಿಯನ್ ಸಿಂಧುಗಿಂದು ಜನ್ಮದಿನದ ಸಂಭ್ರಮ; ಮಹಾರಾಷ್ಟ್ರದ ಕಿಚ್ಚನ ಫ್ಯಾನ್ಸ್ ಶುಭ ಹಾರೈಕೆ
* 26ನೇ ವಸಂತಕ್ಕೆ ಕಾಲಿರಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ಹೈದರಾಬಾದ್ ಮೂಲದ ಆಟಗಾರ್ತಿ.
* ಮಹಾರಾಷ್ಟ್ರ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಸಿಂಧುಗೆ ಶುಭ ಹಾರೈಕೆ
ಬೆಂಗಳೂರು(ಜು.05): ಮುಂಬರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಬೇಟೆಯಾಡುವತ್ತ ಚಿತ್ತ ನೆಟ್ಟಿರುವ ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಇಂದು ತಮ್ಮ 26ನೇ ವಸಂತಕ್ಕೆ ಕಾಲಿರಿಸಿದ್ದಾರೆ.
ಸದ್ಯ ಬ್ಯಾಡ್ಮಿಂಟನ್ ಕ್ಷೇತ್ರದ ಹೃದಯಬಡಿತ ಎನಿಸಿಕೊಂಡಿರುವ ಹೈದರಾಬಾದ್ ಮೂಲದ ಆಟಗಾರ್ತಿ ಪಿ.ವಿ. ಸಿಂಧುಗೆ ದೇಶಾದ್ಯಂತ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡಿರುವ ಸಿಂಧು, 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಚಾರಿತ್ರಿಕ ಸಾಧನೆ ಮಾಡಿದ್ದರು. ರಿಯೋ ಒಲಿಂಪಿಕ್ಸ್ ಫೈನಲ್‌ನಲ್ಲಿ ಕರೋಲಿನಾ ಮರಿನ್ ಎದುರು ಮುಗ್ಗರಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಗೌರವಕ್ಕೂ ಸಿಂಧು ಭಾಜನರಾಗಿದ್ದರು.
ಇನ್ನು ಸಿಂಧು ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಅದರಲ್ಲೂ ಮಹಾರಾಷ್ಟ್ರ ಕಿಚ್ಚ ಸುದೀಪ್ ಅಭಿಮಾನಿಗಳು, 2019ರಲ್ಲಿ ಪಿ.ವಿ.ಸಿಂಧು ಹಾಗೂ ಸ್ಯಾಂಡಲ್‌ವುಡ್ ದಿಗ್ಗಜ ನಟ ಕಿಚ್ಚ ಸುದೀಪ್ ಭೇಟಿಯಾದ ಫೋಟೋವನ್ನು ಹಂಚಿಕೊಂಡು, ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಆದ ಮೊದಲ ಭಾರತೀಯ ಆಟಗಾರ್ತಿ, ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಪಿ.ವಿ. ಸಿಂಧು ಅವರಿಗೆ ಕಿಚ್ಚ ಸುದೀಪ್ ಬಾಸ್ ಅಭಿಮಾನಿಗಳ ಪರವಾಗಿ ಜನ್ಮದಿನದ ಶುಭಾಶಯಗಳು ಎಂದು ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಸೈನಾ ನೆಹ್ವಾಲ್ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಎರಡನೇ ಆಟಗಾರ್ತಿ ಎನ್ನುವ ಹೆಗ್ಗಳಿಕೆ ಪಿ.ವಿ. ಸಿಂಧು ಅವರದ್ದು. ಸೈನಾ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರೆ, ಸಿಂಧು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು.
ಪಿ.ವಿ. ಸಿಂಧು ಮುಂಬರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಲ್ಲ ನೆಚ್ಚಿನ ಭಾರತೀಯ ಅಥ್ಲೀಟ್‌ಗಳಲ್ಲಿ ಒಬ್ಬರೆನಿಸಿದ್ದಾರೆ. ಸಿಂಧು ಮಾತ್ರವಲ್ಲದೇ ಈ ಬಾರಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬಿ. ಸಾಯಿ ಪ್ರಣಿತ್, ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಟೋಕಿಯೋ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದ್ದು, ಈ ಬಾರಿ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಸಿಂಧು ಚಿನ್ನದ ಪದಕ ಗೆಲ್ಲಲಿ ಎನ್ನುವುದು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಸೇರಿದಂತೆ ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ.