ಫ್ರೆಂಚ್ ಓಪನ್ ಸಾಮ್ರಾಟ ನಡಾಲ್ ಮಣಿಸಿ ಫೈನಲ್‌ಗೇರಿದ ಜೋಕೋವಿಚ್..!
* ಫ್ರೆಂಚ್ ಓಪನ್‌ನಲ್ಲಿ ನಡಾಲ್‌ಗೆ ಸೋಲಿನ ಶಾಕ್ ಕೊಟ್ಟ ಜೋಕೋವಿಚ್
* ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಮೊದಲ ಬಾರಿಗೆ ಸೋಲುಂಡ ನಡಾಲ್
* ಫೈನಲ್‌ನಲ್ಲಿ ಜೋಕೋ ಗ್ರೀಕ್ ಆಟಗಾರನ ಎದುರು ಸೆಣಸಾಟ
ಪ್ಯಾರಿಸ್(ಜೂ.12): 13 ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಒಡೆಯ, ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ರಾಫೆಲ್ ನಡಾಲ್ ಅವರನ್ನು ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಮಣಿಸಿದ ಸರ್ಬಿಯಾದ ನೊವಾಕ್ ಜೋಕೋವಿಚ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಶುಕ್ರವಾರ(ಜೂ.11) ತಡರಾತ್ರಿ ನಡೆದ ಅತಿರೋಚಕ ಕಾದಾಟದಲ್ಲಿ ವಿಶ್ವ ನಂ.1 ಶ್ರೇಯಾಂಕಿತ ಜೋಕೋವಿಚ್ ಕೈ ಮೇಲಾಗಿದೆ. ಇದರೊಂದಿಗೆ ಸರ್ಬಿಯಾದ ಆಟಗಾರ ಆರನೇ ಬಾರಿಗೆ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ್ದಾರೆ.
ಕಳೆದ 16 ವರ್ಷಗಳಲ್ಲಿ 108 ಫ್ರೆಂಚ್ ಓಪನ್ ಟೆನಿಸ್ ಪಂದ್ಯವನ್ನಾಡಿರುವ ಸ್ಪೇನ್‌ನ ರಾಫೆಲ್ ನಡಾಲ್ ಕೇವಲ ಮೂರನೇ ಬಾರಿಗೆ ಸೋಲಿನ ಆಘಾತ ಅನುಭವಿಸಿದ್ದಾರೆ. ಬರೋಬ್ಬರಿ 4 ಗಂಟೆ 11 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಗೆಲುವು ಸರ್ಬಿಯಾ ಆಟಗಾರನ ಪಾಲಾಗಿದೆ. ಮೊದಲ ಸೆಟ್‌ನಲ್ಲಿ ಗೆಲುವು ಸಾಧಿಸಿದ್ದ ನಡಾಲ್ ಆ ಬಳಿಕ ತಮ್ಮ ಹಿಡಿತವನ್ನು ಕಾಪಾಡಿಕೊಳ್ಳಲು ವಿಫಲರಾದರು. ಪರಿಣಾಮ 3-6, 6-3, 7-6(7/4), 6-2 ಸೆಟ್‌ಗಳಿಂದ ಜೋಕೋವಿಚ್ ಗೆಲುವಿನ ನಗೆ ಬೀರಿದರು. ಇದೀಗ 19ನೇ ಗ್ರ್ಯಾನ್‌ಸ್ಲಾಂ ಮೇಲೆ ಜೋಕೋ ತಮ್ಮ ಚಿತ್ತ ನೆಟ್ಟಿದ್ದಾರೆ. ಇದಷ್ಟೇ ಅಲ್ಲದೇ ಕಳೆದ 50 ವರ್ಷಗಳ ಟೆನಿಸ್ ಇತಿಹಾಸದಲ್ಲಿ ಎರಡು ಬಾರಿ ನಾಲ್ಕೂ ಗ್ರ್ಯಾನ್‌ಸ್ಲಾಂಗಳನ್ನು ಗೆದ್ದ ಮೊದಲ ಆಟಗಾರ ಎನಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಫೆಂಚ್ ಓಪನ್ ಸೆಮೀಸ್: ಪಂದ್ಯದಲ್ಲಿ ನಡಾಲ್-ಜೋಕೋವಿಕ್ ಸೆಣಸು
2016ರ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ನೊವಾಕ್ ಜೋಕೋವಿಚ್, 2015ರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಡಾಲ್‌ಗೆ ಜೋಕೋವಿಚ್ ಸೋಲಿನ ರುಚಿ ತೋರಿಸಿದ್ದರು. ಇದೀಗ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಡಾಲ್ ಮೊದಲ ಬಾರಿಗೆ ಸೆಮಿಫೈನಲ್‌ನಲ್ಲಿ ಸೋಲಿನ ಶಾಕ್ ಅನುಭವಿಸಿದ್ದಾರೆ. ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಡಾಲ್‌ಗೆ ಎರಡು ಬಾರಿ ಸೋಲುಣಿಸಿದ ಏಕೈಕ ಆಟಗಾರ ಎನ್ನುವ ದಾಖಲೆಯು ಜೋಕೋ ಪಾಲಾಗಿದೆ.
ಜೂನ್ 13ರಂದು ನಡೆಯಲಿರುವ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ವಿಶ್ವ ನಂ.1 ಶ್ರೇಯಾಂಕಿತ ನೊವಾಕ್ ಜೋಕೋವಿಚ್, ಗ್ರೀಕ್ ಪ್ರತಿಭಾನ್ವಿತ ಆಟಗಾರ ಸ್ಟೆಫಾನೋ ಟಿಟ್ಸಿಪಾಸ್ ಅವರನ್ನು ಎದುರಿಸಲಿದ್ದಾರೆ.
ಬಾರ್ಬೊರಾ vs ಅನಸ್ತಾಸಿಯಾ ಫ್ರೆಂಚ್ ಓಪನ್ ಫೈನಲ್
ಪ್ಯಾರಿಸ್: ಚೊಚ್ಚಲ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ಯುವ ಟೆನಿಸ್ ಆಟಗಾರ್ತಿಯರಾದ ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ ಹಾಗೂ ರಷ್ಯಾದ ಅನಸ್ತಾಸಿಯಾ ಪಾವ್ಲುಚೆಂಕೋವಾ, ಶನಿವಾರ ನಡೆಯಲಿರುವ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಈ ಇಬ್ಬರು ತಮ್ಮ ವೃತ್ತಿಬದುಕಿನಲ್ಲಿ ಇದೇ ಮೊದಲ ಬಾರಿಗೆ ಎದುರಾಗುತ್ತಿದ್ದಾರೆ ಎನ್ನುವುದು ವಿಶೇಷ.