ನಾಳೆಯಿಂದ ಕಲಬುರಗಿಯಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟ
ಕ್ರಿಡಾಕೂಟದಲ್ಲಿ ಭಾಗವಹಿಸುವ ನೌಕರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಇಲಾಖೆಯ ಗುರುತಿನ ಚೀಟಿ ತರಬೇಕೆಂದು ಆಯೋಜಕರು ತಿಳಿಸಿದ್ದಾರೆ.
ಕಲಬುರಗಿ(ಡಿ.29): ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಫರ್ಧೆ ಇದೇ ಡಿ.30 ಮತ್ತು 31 ರಂದು ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ 2 ದಿನಗಳ ಕಾಲ ನಡೆಯಲಿದೆ. ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆಯುವ ಕ್ರಿಡಾಕೂಟಕ್ಕೆ ಡಿ.30 ರಂದು ಬೆಳಿಗ್ಗೆ 10 ಗಂಟೆಗೆ ಚಂಪಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಗುತ್ತದೆ.
ಕ್ರೀಡಕೂಟವನ್ನು ಶಿಷ್ಟಾಚಾರದಂತೆ ಜಿಲ್ಲೆಯ ಜನಪ್ರತಿನಿಧಿಗಳು ಉದ್ಘಾಟಿಸಲಿದ್ದು, ಜಿಲ್ಲೆಯ ಇನ್ನಿತರ ಚುನಾಯಿತ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಕ್ರೀಡಾಕೂಟಗಳ ವಿವರ:
ಡಿ.30 ರಂದು ಆಟೋಟ, ಫುಟ್ಬಾಲ್, ವಾಲಿಬಾಲ್, ಬಾಸ್ಕೆಟ್ ಬಾಲ್, ಬಾಲ್ ಬ್ಯಾಡ್ಮಿಂಟನ್, ಬ್ಯಾಡ್ಮಿಂಟನ್, ಕಬ್ಬಡ್ಡಿ, ಹಾಕಿ, ಕೇರಂ, ಕ್ರಿಕೇಟ್, ಟೇಬಲ್ ಟೆನಿಸ್, ಲಾನ್ ಟೆನಿಸ್, ಥ್ರೋಬಾಲ್, ಟೆನಿಕ್ಪಾಟ್, ಭಾರ ಎತ್ತುವ ಸ್ಪರ್ಧೆ, ಪವರ ಲಿಫ್ಟಿಂಗ್, ಚೆಸ್, ಈಜು, ಕುಸ್ತಿ ಹಾಗೂ ದೇಹದಾರ್ಢ್ಯತೆ ಸ್ಪರ್ಧೆ ನಡೆಯಲಿವೆ.
BIG 3: ಅಂಗನವಾಡಿ ಕಂದಮ್ಮಗಳಿಗೆ ಜಾಗವಿಲ್ಲ: ಇಡೀ ಊರ ಜನರಿಗೆ ಆ 'ಭಯ'
ಅದೇ ರೀತಿ ಡಿ.31 ರಂದು ಹಿಂದುಸ್ತಾನಿ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ, ಜಾನಪದ ಗೀತೆ(ವೈಯಕ್ತಿಕ/ ತಂಡ), ಕಥಕ್, ಮಣಿಪೂರಿ, ಕೂಚೂಪುಡಿ, ಕಥಕಳಿ, ಓಡಿಸ್ಸಿ, ಭರತನಾಟ್ಯ, ಜಾನಪದ ನೃತ್ಯ (ತಂಡ), ಸ್ಕ್ರೀಂಗ್ ವಾದ್ಯ, ಹಿಂದುಸ್ತಾನಿ, ವಿಂಡ ವಾದ್ಯಗಳು, ಪರಕೇಷನ ವಾದ್ಯಗಳು, ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಕಿರುನಾಟಕ ಪ್ರದರ್ಶನವಾಗಲಿದೆ.
ಮಾಸ್ಕ್, ಗುರುತಿನ ಚೀಟಿ ಕಡ್ಡಾಯ:
ಕ್ರಿಡಾಕೂಟದಲ್ಲಿ ಭಾಗವಹಿಸುವ ನೌಕರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಇಲಾಖೆಯ ಗುರುತಿನ ಚೀಟಿ ತರಬೇಕೆಂದು ಆಯೋಜಕರು ತಿಳಿಸಿದ್ದಾರೆ.