Asianet Suvarna News Asianet Suvarna News

Chitradurga : ಕುರಿ ಕಾಯುವ ಹುಡುಗಿಯಿಂದ ಮಲೇಷ್ಯಾದಲ್ಲಿ ಚಿನ್ನದ ಬೇಟೆ: ಸಾಧನೆಗೆ ಪಟ್ಟಪಾಡು ಅಷ್ಟಿಷ್ಟಲ್ಲ

* ಬಡ ಕುಟುಂಬದಲ್ಲಿ ಬೆಳೆದ ಹಳ್ಳಿ ಪ್ರತಿಭೆಗೆ ಮಲೇಷಿಯಾದಲ್ಲಿ ಬಂಗಾರದ ಗರಿ.
* ಅಂತಾರಾಷ್ಟ್ರೀಯ ಥ್ರೋ ಬಾಲ್‌ ಪಂದ್ಯಾವಾಳಿಯಲ್ಲಿ ಭಾರತ ತಂಡ ಪ್ರತಿನಿಧಿಸಿದ ವೈಶಾಲಿ.
* ಪಂದ್ಯವಾಡಲು ಹೋಗುವುದಕ್ಕೆ ಆರ್ಥಿಕ ಸಮಸ್ಯೆ ಎದುರಾಗಿತ್ತು.

Gold hunting in Malaysia by a shepherd girl: achievement is not so much sat
Author
First Published Dec 25, 2022, 4:50 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿತ್ರದುರ್ಗ (ಡಿ.25): ಅದು ಬಡತನದ ಕುಟುಂಬ. ಶಾಲೆ ಕಲಿಯಲು ಸಹ ಆ ಕುಟುಂಬದ ಮಕ್ಕಳು ಪರದಾಡಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿಯೇ ಕೃಷಿ ಕೆಲಸ, ಕುರಿ ಮತ್ತು ದನಗಳನ್ನು ಮೇಯಿಸಿಕೊಂಡು ಅದರೊಟ್ಟಿಗೆ ಥ್ರೋ ಬಾಲ್ ಅಭ್ಯಾಸ ಮಾಡಿದ್ದ ಬಡ ಕುಟುಂಬದ ಹುಡುಗಿ ಇಂದು ಅಂತರಾಷ್ಟ್ರೀಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿರುವ ಭಾರತ ತಂಡದ ಭಾಗವಾಗಿದ್ದಾಳೆ.

ಸಣ್ಣ ಮನೆ, ಶಾಲೆ ಮೆಟ್ಟಿಲು ಹತ್ತದ ತಂದೆ-ತಾಯಿ. ಮಲೇಷ್ಯಾದಲ್ಲಿ ಬಂಗಾರದ ಪದಕ ಗೆದ್ದು ಬಂದ ಮಗಳು. ಮನೆಯ ಚಿಕ್ಕವಳ ಸಾಧನೆಗೆ ಸಂತಸ ಗೊಂಡಿರೋ ಕುಟುಂಬಸ್ಥರು. ಇಂತಹ ಸಂತಸದ ದೃಶ್ಯದಲ್ಲಿರುವ ಯುವತಿಯೇ ಜಿ. ವೈಶಾಲಿ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಯುವತಿ. ಗುರುಪ್ರಕಾಶ ಹಾಗೂ ಲಕ್ಷಿದೇವಿಯವರ ಕೊನೆಯ ಮಗಳು. ಸದ್ಯ ತುಮಕೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಕಡು ಬಡತನದಲ್ಲೇ ಬೆಳೆದ ಈ ಯುವತಿಗೆ ಥ್ರೋ ಬಾಲ್, ಅಥ್ಲೆಟಿಕ್ಸ್ ಕ್ರೀಡೆಗಳೆಂದರೆ ಅಚ್ಚುಮೆಚ್ಚು. ಇತ್ತೀಚೆಗೆ ಮಲೇಶಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಸೀನಿಯರ್ ವಿಭಾಗದ ಥ್ರೋಬಾಲ್ ಪಂದ್ಯಾವಳಿಯಲ್ಲಿ  ಭಾರತ ತಂಡ ಪ್ರಥಮ ಸ್ಥಾನ ಗಳಿಸಿದೆ. ಈ ತಂಡದ ಆಡುವ ಏಳು ಜನರ ಬಳಗದಲ್ಲಿ ಚಿತ್ರದುರ್ಗದ ವೈಶಾಲಿ ಸಹ ಆಟಗಾರ್ತಿ‌ ಆಗಿದ್ದಳು ಎನ್ನುವುದು ಸಂತಸದ ವಿಚಾರವಾಗಿದೆ.

Invention: ಹಳ್ಳಿ ಹುಡುಗನಿಂದ ಗಣಿತದ ಮೂಲಕ್ರಿಯೆ ತೋರಿಸುವ ಲೈಟಿಂಗ್‌ ಡಿವೈಸ್ ಆವಿಷ್ಕಾರ

ಆರ್ಥಿಕ ನೆರವು ನೀಡಿದ್ದ ಶಾಸಕಿ ಪೂರ್ಣಿಮಾ: ಮಲೇಷ್ಯಾದಲ್ಲಿ ನಡೆದ ಟೂರ್ನಿಯಲ್ಲಿ ಆಡಿ ಗೆದ್ದು ಬಂದಿದ್ದು ಖುಷಿ. ಆದರೆ ಈ ಟೂರ್ನಿಗೆ ದೆಹಲಿಯಲ್ಲಿ ಆಯ್ಕೆಯಾದಾಗ ಮಲೇಷ್ಯಾಗೆ ಹೋಗಲು ಹಣಕಾಸಿನ ಅಡಚಣೆಯಾಗಿತ್ತು. ಬಹಳಷ್ಟು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಜೊತೆಗೆ ಕುಟುಂಬದವರ ಸಹಕಾರದಿಂದ ಬಂಗಾರದ ಪದಕ ಗೆಲ್ಲಲು ಸಾಧ್ಯವಾಯಿತು. ಮುಂದೆ ಇನ್ನಷ್ಟು ಸಾಧಿಸುವ ಗುರಿ ಬಹಳಷ್ಟಿದೆ ಎಂಬುದು ಬಂಗಾರ ಗೆದ್ದು ವಾಪಸಾದ ವೈಶಾಲಿಯ ಅನಿಸಿಕೆಯಾಗಿದೆ.

ರಜಾ ಸಮಯದಲ್ಲಿ ಪಶುಪಾಲನೆ: ವೈಶಾಲಿ ಪೋಷಕರ ಬಡತನ ವದ್ದೀಕೆರೆ ಗ್ರಾಮದವರಿಗೆ ಗೊತ್ತು. ಜೊತೆಗೆ ಹೈಸ್ಕೂಲು ಹಂತದಿಂದಲೇ ಬೆಳೆದ ಥ್ರೋಬಾಲ್ ಆಟದ ಮೇಲಿನ ವ್ಯಾಮೋಹವನ್ನು ವೈಶಾಲಿ ಹೊಲದಲ್ಲಿ ಕೆಲಸ ಮಾಡುತ್ತಲೇ, ಕುರಿ ಜಾನುವಾರು ಮೇಯಿಸಿಕೊಂಡೇ ತರಬೇತಿ ನಡೆಸಿದ್ದಳು. ಇದೇ ವೇಳೆ ಚಿದಾನಂದ ಸ್ವಾಮಿ ಎಂಬುವ ಶಿಕ್ಷಕರ ತರಬೇತಿ ಆಟದ ಚುರುಕನ್ನು ಹೆಚ್ಚಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಹಕಾರಿಯಾಗಿದೆ. ಬಡ ಕುಟುಂಬದಲ್ಲಿ ಹುಟ್ಟಿ, ಕಷ್ಟಪಟ್ಟು ಓದಿ, ಹೀಗೆ ಸಾಧನೆ ಮಾಡಿರುವುದು ಬರೀ ವದ್ದಿಕೆರೆ ಗ್ರಾಮಕ್ಕಲ್ಲ. ಚಿತ್ರದುರ್ಗ ಜಿಲ್ಲೆಗೆ ಬಹುದೊಡ್ಡ ಹೆಮ್ಮೆ. ಇಂತಹ ಹಳ್ಳಿಯ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಕ್ಕರೆ ಬೆಳೆಯುವುದರಲ್ಲಿ ಅನುಮಾನವಿಲ್ಲ. ಅದಕ್ಕೆ ನಮ್ಮ ಗ್ರಾಮದ ವೈಶಾಲಿಯ ಸಾಧನೆಯೇ ಸಾಕ್ಷಿ ಎಂಬುದು ಗ್ರಾಮಸ್ಥರ ಹೆಮ್ಮೆಯ ಮಾತು ಆಗಿದೆ.

 

Sub Inspector Exam: ಅಮ್ಮ-ಮಗಳೂ ಇಬ್ಬರೂ ಪಾಸ್, ಸಾಧನೆ ಅಂದ್ರೆ ಇದು!

ಊರಿಗೆ ಊರೇ ಸಂಭ್ರಮಿಸಿದೆ: ಕಷ್ಟಪಟ್ಟು, ಮನೆಯವರ ಸಹಕಾರದಿಂದ ಅಂತರಾಷ್ಟ್ರೀಯ ಮಟ್ಟದ ಟೂರ್ನಿಗೆ ಹಣಕಾಸಿನ ಅಡಚಣೆ ಮೆಟ್ಟಿ ಹೋದ ವೈಶಾಲಿ ಬಂಗಾರದ ಪದಕ ಗೆದ್ದು ವಾಪಸಾದಾಗ ಇಡೀ ಊರಿಗೆ ಊರೇ ಸಂಭ್ರಮಿಸಿದೆ. ಊರಿನ ತುಂಬಾ ಕಟೌಟ್ ಹಾಕಿ ಗ್ರಾಮಸ್ಥರು ಖುಷಿ ಪಟ್ಟಿದ್ದಾರೆ. ಸೂಕ್ತ ಪ್ರೋತ್ಸಾಹದ ಜೊತೆಗೆ ತರಬೇತಿ ಸಿಕ್ಕರೆ ಹಳ್ಳಿಗಾಡಿನ ಇಂತಹ ಪ್ರತಿಭೆಗಳು ಮತ್ತಷ್ಟು ಎತ್ತರಕ್ಕೇರುವುದರಲ್ಲಿ ಅನುಮಾನವಿಲ್ಲ.

Follow Us:
Download App:
  • android
  • ios