ಫ್ರೆಂಚ್ ಓಪನ್ 2021: 2 ದಿನದಲ್ಲಿ 2 ಗ್ರ್ಯಾನ್‌ಸ್ಲಾಂ ಜಯಿಸಿದ ಕ್ರೆಜಿಕೋವಾ
* ಫ್ರೆಂಚ್ ಓಪನ್ ಟೂರ್ನಿಯಲ್ಲಿ 2 ಗ್ರ್ಯಾನ್‌ಸ್ಲಾಂ ಗೆದ್ದ ಬಾರ್ಬೊರಾ ಕ್ರೇಜಿಕೋವಾ
* ಕೇವಲ 2 ದಿನಗಳ ಅಂತರದಲ್ಲಿ 2 ಫ್ರೆಂಚ್ ಓಪನ್ ಟ್ರೋಫಿಗೆ ಮುತ್ತಿಕ್ಕಿದ ಚೆಕ್ ಗಣರಾಜ್ಯದ ಆಟಗಾರ್ತಿ
* ಫ್ರೆಂಚ್ ಓಪನ್ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಚಾಂಪಿಯನ್ ಆದ ಕ್ರೇಜಿಕೋವಾ
ಪ್ಯಾರಿಸ್(ಜೂ.14): ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೇಜಿಕೋವಾ 2 ದಿನಗಳಲ್ಲಿ 2ನೇ ಗ್ರ್ಯಾನ್ ಸ್ಲಾಂ ಟ್ರೋಫಿ ಗೆದ್ದಿದ್ದಾರೆ. ಶನಿವಾರ ಮಹಿಳಾ ಸಿಂಗಲ್ಸ್‌ನಲ್ಲಿ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದ ಕ್ರೇಜಿಕೋವಾ, ಭಾನುವಾರ ಮಹಿಳಾ ಡಬಲ್ಸ್‌ನಲ್ಲಿ ಟ್ರೋಫಿ ಜಯಿಸಿದರು.
ಚೆಕ್ ಗಣರಾಜ್ಯದವರೇ ಆದ ಕ್ಯಾಥರೀನಾ ಸಿನಿಯಾಕೋವಾ ಜೊತೆ ಕಳೆದ ವರ್ಷದ ಸಿಂಗಲ್ಸ್ ಚಾಂಪಿಯನ್ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಹಾಗೂ ಅಮೆರಿಕದ ಬೆಥಾನಿ ಮಟೆಕ್-ಸ್ಯಾಂಡ್ಸ್ ಜೋಡಿ ವಿರುದ್ಧ 6-4, 6-2 ಸೆಟ್‌ಗಳಲ್ಲಿ ಜಯಗಳಿಸಿದರು.
2000ರಲ್ಲಿ ಫ್ರ್ಯಾನ್ಸ್‌ನ ಮೇರಿ ಪಿಯರ್ಸ್ ಬಳಿಕ ಒಂದೇ ಟೂರ್ನಿಯಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ಎರಡೂ ಪ್ರಶಸ್ತಿಗಳನ್ನು ಗೆದ್ದ ಮೊದಲ ಆಟಗಾರ್ತಿ ಎನ್ನುವ ದಾಖಲೆಯನ್ನು ಕ್ರೇಜಿಕೋವಾ ಬರೆದಿದ್ದಾರೆ. ಸೋಮವಾರ ನೂತನವಾಗಿ ಬಿಡುಗಡೆಯಾಗಲಿರುವ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕ್ರೇಜಿಕೋವಾ ಸಿಂಗಲ್ಸ್‌ನಲ್ಲಿ 15, ಡಬಲ್ಸ್‌ನಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.
ಬಾರ್ಬೊರಾ ಕ್ರೆಜ್ಸಿಕೋವಾ ಫ್ರೆಂಚ್ ರಾಣಿ:
ಚೆಕ್ ರಿಪಬ್ಲಿಕ್‌ನ ಬಾರ್ಬೊರಾ ಕ್ರೆಜ್ಸಿಕೋವಾ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್‌ನ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಫ್ರೆಂಚ್ ಓಪನ್ ಸಾಮ್ರಾಟ ನಡಾಲ್ ಮಣಿಸಿ ಫೈನಲ್‌ಗೇರಿದ ಜೋಕೋವಿಚ್..!
ಶನಿವಾರ ಸುಮಾರು 2 ತಾಸುಗಳ ಕಾಲ ನಡೆದ ಫೈನಲ್ ಹಣಾಹಣಿಯಲ್ಲಿ ವಿಶ್ವದ ನಂ.33 ಶ್ರೇಯಾಂಕಿತೆ ಕ್ರೆಜ್ಸಿಕೋವಾ ಅವರು 6-1, 2-6, 6-4ರಿಂದ ವಿಶ್ವದ ನಂ.31 ಶ್ರೇಯಾಂಕಿತೆ, ರಷ್ಯಾದ ಅನಸ್ತೇಸಿಯಾ ಪಾವ್ಲುಚೆಂಕೋವಾ ಅವರನ್ನು ಮಣಿಸಿ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುದಷ್ಟೇ ಅಲ್ಲದೆ, ಇದೇ ಮೊದಲ ಬಾರಿಗೆ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯೊಂದನ್ನು ಮುಡಿಗೇರಿಸಿಕೊಂಡರು. ಈ ಮೂಲಕ 1981ರಲ್ಲಿ ಹಾನಾ ಮಂದ್ಲಿಕೋವಾ ಬಳಿಕ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಜೆಕ್‌ನ ಮೊದಲ ಮಹಿಳಾ ಟೆನಿಸ್ ಆಟಗಾರ್ತಿ ಎನಿಸಿಕೊಂಡರು.
ಖುಷಿಯಿಂದ ಆಡು. ಗ್ರ್ಯಾನ್‌ಸ್ಲಾಂ ಗೆಲ್ಲಲು ಪ್ರಯತ್ನಿಸು ಅಂತ ಕೋಚ್ ಯಾನಾ ನೊವೋತ್ನಾ ಅವರು 2017ರಲ್ಲಿ ಕ್ಯಾನ್ಸರ್‌ಗೆ ಬಲಿಯಾಗುವ ಮುನ್ನ ಹೇಳಿದ್ದು ಪದೇ ಪದೇ ಕಾಡುತ್ತಿತ್ತು. ಆಕೆಯ ನಿಧನ ನಂತರ ಬಹಳ ಕಷ್ಟಪಟ್ಟಿದ್ದೆ. ಕಡೆಗೂ ಗ್ರ್ಯಾನ್‌ಸ್ಲಾಂ ಗೆದ್ದಿದ್ದೇನೆಂದರೆ ನನಗೆ ನಂಬಲೇ ಆಗುತ್ತಿಲ್ಲ. ಈ ಗೆಲುವಿಗೆ ಆಕೆಯೇ ಸ್ಫೂರ್ತಿ. ಇದು ಆಕೆಗೇ ಅರ್ಪಣೆ. - ಬಾರ್ಬೊರಾ ಕ್ರೆಜ್ಸಿಕೋವಾ, ಫ್ರೆಂಚ್ ಓಪನ್ ಚಾಂಪಿಯನ್