ಫ್ರೆಂಚ್ ಓಪನ್ ಟೆನಿಸ್: ಜೋಕೋವಿಚ್, ನಡಾಲ್ ಶುಭಾರಂಭ
* ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಜೋಕೋವಿಚ್, ನಡಾಲ್
* ಫ್ರೆಂಚ್ ಓಪನ್‌ನಲ್ಲಿ 101ನೇ ಗೆಲುವು ದಾಖಲಿಸಿದ ನಡಾಲ್
* 19ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೋಕೋವಿಚ್
ಪ್ಯಾರಿಸ್(ಜೂ.02): ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ರಾಫೆಲ್ ನಡಾಲ್ ಮತ್ತು ವಿಶ್ವ ನಂ.1 ಶ್ರೇಯಾಂಕಿತ ಟೆನಿಸಿಗ ಸರ್ಬಿಯಾದ ನೊವಾಕ್ ಜೋಕೋವಿಚ್ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಿರೀಕ್ಷೆಯಂತೆಯೇ ಭರ್ಜರಿಯಾಗಿಯೇ ಶುಭಾರಂಭ ಮಾಡಿದ್ದಾರೆ.
19ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೋಕೋವಿಚ್ 6-2, 6-4, 6-2 ನೇರ ಸೆಟ್‌ಗಳಲ್ಲಿ ಟೆನ್ಸ್ ಸಾಂಡ್‌ಗ್ರೀನ್ ಎದುರು ಅನಾಯಾಸದ ಗೆಲುವು ದಾಖಲಿಸಿದರು. ಇನ್ನು 13ನೇ ಫ್ರೆಂಚ್ ಓಪನ್ ಹಾಗೂ ಒಟ್ಟಾರೆ 21ನೇ ಗ್ರ್ಯಾನ್‌ಸ್ಲಾಂ ಕನವರಿಯಲ್ಲಿರುವ ರಾಫೆಲ್ ನಡಾಲ್ 6-3, 6-2, 7-6(7/3) ಸೆಟ್‌ಗಳ ಅಂತರದಲ್ಲಿ ಆಸ್ಟ್ರೇಲಿಯಾದ ಅಲೆಕ್ಸಿಯನ್ನು ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಫ್ರೆಂಚ್ ಓಪನ್‌ನಲ್ಲಿ ತನ್ನದೇ ಆದ ಖದರ್ ಮೂಡಿಸಿರುವ ನಡಾಲ್ ಈ ಗೆಲುವಿನೊಂದಿಗೆ ಆವೆ ಮಣ್ಣಿನ ಅಂಕಣದಲ್ಲಿ 101 ಜಯ ದಾಖಲಿಸಿದರು. ನಿಮಗೆ ತಿಳಿದಿರಲಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್ ಎಡಗೈ ಆಟಗಾರ ನಡಾಲ್ ಕೇವಲ ಎರಡು ಬಾರಿ ಮಾತ್ರ ಸೋಲಿನ ಕಹಿಯುಂಡಿದ್ದಾರೆ.
ತಾಯಿಯಾದ ಬಳಿಕ ಮೊದಲ ಗ್ರ್ಯಾನ್ ಸ್ಲಾಂ ಗೆಲ್ಲಲು ಹೋರಾಟ ನಡೆಸುತ್ತಿರುವ ಅಮೆರಿಕದ ದಿಗ್ಗಜ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್, ಫ್ರೆಂಚ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಸೋಮವಾರ ತಡರಾತ್ರಿ ನಡೆದ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ, ರೊಮೇನಿಯಾದ ಇರಿನಾ ಬೆಗು ವಿರುದ್ಧ 7-6, 6-2 ಸೆಟ್‌ಗಳಲ್ಲಿ ಜಯಗಳಿಸಿದರು.
ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದ ನವೊಮಿ ಒಸಾಕ..!
ಮೊದಲ ಸುತ್ತಿನ ಪಂದ್ಯದ ವೇಳೆ ಸೆರೆನಾ ಧರಿಸಿದ್ದ ಶೂ ಎಲ್ಲರ ಗಮನ ಸೆಳೆಯಿತು. ಶೂ ಮೇಲೆ ಫ್ರೆಂಚ್‌ನಲ್ಲಿ ‘ನಾನು ನಿಲ್ಲುವುದಿಲ್ಲ’ ಎಂಬುವ ಸಂದೇಶದೊಂದಿಗೆ ತಾವು ಸದ್ಯಕ್ಕೆ ನಿವೃತ್ತಿಯಾಗುವುದಿಲ್ಲ ಎನ್ನುವುದನ್ನು ಸೆರೆನಾ ಸ್ಪಷ್ಟಪಡಿಸಿದರು. ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಕ್ರೊವೇಷಿಯಾದ ಫ್ರಾಂಕೊ ಸ್ಕುಗೊರ್ ಜೊತೆ ಕಣಕ್ಕಿಳಿದಿರುವ ಭಾರತದ ರೋಹನ್ ಬೋಪಣ್ಣ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.