ಪ್ಯಾರಿಸ್(ಜೂ.01)‌:  ಮೊದಲ ಸುತ್ತಿನ ಪಂದ್ಯದ ಬಳಿಕ ಸುದ್ದಿಗೋಷ್ಠಿಗೆ ಗೈರಾಗಿದ್ದಕ್ಕೆ ವಿಶ್ವ ನಂ.2 ಶ್ರೇಯಾಂಕಿತ ಆಟಗಾರ್ತಿ ಜಪಾನ್‌ನ ನವೊಮಿ ಒಸಾಕಗೆ 15,000 ಅಮೆರಿಕನ್‌ ಡಾಲರ್‌ (ಅಂದಾಜು 10.88 ಲಕ್ಷ ರು) ದಂಡ ವಿಧಿಸಲಾಗಿದೆ. ಇದರಿಂದ ಬೇಸರಕೊಂಡಿರುವ ಒಸಾಕ, ಫ್ರೆಂಚ್ ಓಪನ್‌ ಗ್ರ್ಯಾನ್‌ಸ್ಲಾಂನಿಂದ  ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ.

ಗ್ರ್ಯಾನ್‌ ಸ್ಲಾಂ ನಿಯಮದ ಪ್ರಕಾರ, ಆಯೋಜಕರು ಸೂಚಿಸುವ ಟೆನಿಸಿಗರು ಸುದ್ದಿಗೋಷ್ಠಿಗೆ ಹಾಜರಾಗಬೇಕು. ಆದರೆ ಮೊದಲ ಸುತ್ತಿನ ಪಂದ್ಯದ ಬಳಿಕ ಒಸಾಕ ಸುದ್ದಿಗೋಷ್ಠಿಗೆ ಗೈರಾಗುವ ಮೂಲಕ ವಿವಾದ ಸೃಷ್ಟಿಸಿದ್ದರು. ಒಸಾಕ ಮತ್ತೊಮ್ಮೆ ನಿಯಮ ಉಲ್ಲಂಘಿಸಿದರೆ ಟೂರ್ನಿಯಿಂದಲೇ ಬ್ಯಾನ್‌ ಆಗುವ ಸಾಧ್ಯತೆ ಇದೆ.

ಎರಡನೇ ಸುತ್ತಿಗೇರಿದ ಫೆಡರರ್: ಪುರುಷರ ಸಿಂಗಲ್ಸ್‌ನಲ್ಲಿ ದಿಗ್ಗಜ ಟೆನಿಸಿಗ ರೋಜರ್ ಫೆಡರರ್, ವಿಶ್ವ ನಂ.5 ಗ್ರೀಸ್‌ನ ಯುವ ಆಟಗಾರ ಸ್ಟೆಫಾನೋಸ್‌ ಸಿಟ್ಸಿಪಾಸ್‌ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. 

ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಜೆರಿಮಿ ಚಾರ್ಡಿ ವಿರುದ್ಧ ಸ್ಟೆಫಾನೋಸ್‌ ಸಿಟ್ಸಿಪಾಸ್‌ 7-6, 6-3, 6-1 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಇನ್ನು ಸ್ವಿಸ್ ಟೆನಿಸ್ ದಂತಕಥೆ ರೋಜರ್‌ ಫೆಡರರ್ ಉಜ್ಬೇಕಿಸ್ತಾನದ ಡೆನಿಸ್ ಇಸ್ಟೋಮಿನ್ ವಿರುದ್ಧ 6-2, 6-4, 6-3 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದ್ದರು.