ಕಜ​ಕ​ಸ್ತಾ​ನ(ನ.30): ಏಷ್ಯಾ/ ಓಷಿ​ಯಾ​ನಿಯಾ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಗಳ ಮೊದಲ ದಿನದಾಟದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸಿಂಗಲ್ಸ್‌ ವಿಭಾಗದ 2 ಪಂದ್ಯಗಳಲ್ಲಿ ಭಾರತದ ಟೆನಿಸ್‌ ಆಟಗಾರರು ಪ್ರಾಬಲ್ಯ ಮೆರೆದಿದ್ದು 2-0 ಮುನ್ನಡೆ ಪಡೆದಿದ್ದಾರೆ.

ಡೇವಿಸ್‌ ಕಪ್‌: ಇಂದಿನಿಂದ ಭಾರತ-ಪಾಕ್‌ ಫೈಟ್‌

ಶುಕ್ರ​ವಾರ ಇಲ್ಲಿನ ರಾಷ್ಟ್ರೀಯ ಟೆನಿಸ್‌ ಸೆಂಟ​ರ್‌​ನಲ್ಲಿ ನಡೆದ ಹಣಾ​ಹ​ಣಿ​ಯಲ್ಲಿ ನಿರೀ​ಕ್ಷೆ​ಯಂತೆಯೇ ಭಾರ​ತೀ​ಯರು ಅದ್ಭುತ ಆಟವಾಡಿದರು. ಮೊದಲ ಸಿಂಗ​ಲ್ಸ್‌ನಲ್ಲಿ ಭಾರತದ ರಾಮ್‌​ಕು​ಮಾರ್‌ ರಾಮನಾಥನ್‌, 17 ವರ್ಷ ವಯಸ್ಸಿನ ಪಾಕಿಸ್ತಾನದ ಮೊಹ​ಮದ್‌ ಶೋಯೆಬ್‌ ವಿರುದ್ಧ 6-0, 6-0 ನೇರ ಸೆಟ್‌​ಗ​ಳಲ್ಲಿ ಜಯಿ​ಸಿ​ದರು. ಕೇವಲ 42 ನಿಮಿಷಗಳ ಆಟದಲ್ಲಿ ರಾಮ್‌ಕುಮಾರ್‌ ಎದುರಾಳಿ ಆಟಗಾರನನ್ನು ಮಣಿಸಿದರು. 2ನೇ ಸೆಟ್‌​ನ 6ನೇ ಗೇಮ್‌​ನಲ್ಲಿ 2 ಬಾರಿ ಅಂಕ​ಗಳು 40-40 ಸಮ​ವಾಗಿದ್ದು ಹೊರತುಪಡಿಸಿದರೆ, ಉಳಿದಂತೆ ರಾಮ್‌​ಕು​ಮಾರ್‌, ಪಾಕ್‌ ಆಟಗಾರನ ಎದುರು ಸಂಪೂರ್ಣ ಪ್ರಾಬಲ್ಯ ಸಾಧಿ​ಸಿ​ದರು.

ಡೇವಿಸ್‌ ಕಪ್‌: ಪಾಕ್‌ ಟೀಂನಲ್ಲಿ 17ರ ಟೆನಿ​ಸಿ​ಗ​ರು!

ಮತ್ತೊಂದು ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಭಾರತದ ಸುಮಿತ್‌ ನಗಾಲ್‌, ಪಾಕಿಸ್ತಾನದ ಹುಫೈಜ್‌ ಮೊಹಮದ್‌ ರಹಮನ್‌ ವಿರುದ್ಧ 6-0, 6-2 ನೇರ ಸೆಟ್‌ಗಳಿಂದ ಗೆಲುವು ಪಡೆದರು. ಇದರೊಂದಿಗೆ ಸುಮಿತ್‌ ಡೇವಿಸ್‌ ಕಪ್‌ನಲ್ಲಿ ಮೊಟ್ಟಮೊದಲ ಗೆಲುವು ದಾಖಲಿಸಿದರು. 64 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸುಮಿತ್‌ ಅವರ ಅತ್ಯದ್ಭುತ ಹೊಡೆತಗಳಿಗೆ ಪಾಕ್‌ನ ಟೆನಿಸಿಗ ಮೊಹಮದ್‌ ರಹಮನ್‌ ಅವರ ಬಳಿ ಉತ್ತರವಿರಲಿಲ್ಲ.

ಭಾರತ ಹಾಗೂ ಪಾಕ್‌ ಪಂದ್ಯ​ವ​ನ್ನು ತಟಸ್ಥ ಸ್ಥಳ​ದಲ್ಲಿ ನಡೆ​ಸುವ ಅಂತಾ​ರಾ​ಷ್ಟ್ರೀಯ ಟೆನಿಸ್‌ ಸಂಸ್ಥೆ (ಐಟಿ​ಎ​ಫ್‌) ನಿರ್ಧಾರ​ವ​ನ್ನು ಪಾಕ್‌ ಹಿರಿಯ ಆಟ​ಗಾ​ರರು ವಿರೋ​ಧಿಸಿ​ದ್ದು, ಪಾಕಿ​ಸ್ಥಾನ ಟೆನಿಸ್‌ ತಂಡಕ್ಕೆ ದೊಡ್ಡ ನಷ್ಟ​ವಾಗಿ ಪರಿ​ಣ​ಮಿ​ಸಿ​ತು. ಹಿರಿಯ ಆಟ​ಗಾ​ರರು ಅನು​ಪ​ಸ್ಥಿ​ತಿ​ಯಲ್ಲಿ ಪಾಕಿ​ಸ್ತಾನ ದೊಡ್ಡ ಹೋರಾಟ ಪ್ರದ​ರ್ಶಿ​ಸಿ​ಲ್ಲ. ಶುಕ್ರ​ವಾರ ನಡೆದ ಎರಡೂ ಸಿಂಗ​ಲ್ಸ್‌​ನಲ್ಲಿ ಭಾರತ ಜಯಿ​ಸಿದೆ. ಎರ​ಡನೇ ದಿನ​ವಾದ ಶನಿ​ವಾರ ಒಟ್ಟು 3 ಪಂದ್ಯ​ಗಳು ನಡೆ​ಯ​ಲಿ​ವೆ. ಡಬ​ಲ್ಸ್‌​ನಲ್ಲಿ ಹುಫೈಜಾ ಹಾಗೂ ಶೋಯೆ​ಬ್‌​ರನ್ನು ಅನು​ಭವಿಯಾದ ಲಿಯಾಂಡರ್‌ ಪೇಸ್‌- ಜೀವನ್‌ ನೆಡುಂಚಿಯಾನ್‌ ಜೋಡಿ ಎದು​ರಿ​ಸ​ಲಿ​ದೆ. ದಾಖ​ಲೆಯ 44ನೇ ಗೆಲು​ವಿಗೆ ಪೇಸ್‌ ಎದುರು ನೋಡು​ತ್ತಿ​ದ್ದಾ​ರೆ. ಇನ್ನೆ​ರಡು ಸಿಂಗಲ್ಸ್‌ನಲ್ಲಿ ಶೋಯೆ​ಬ್‌​ರನ್ನು ನಗಾಲ್‌ ಹಾಗೂ ಹುಫೈ​ಜಾ​ರನ್ನು ರಾಮ್‌​ಕು​ಮಾರ್‌ ಎದುರಿಸಲಿದ್ದಾರೆ.

ಕ್ರೊವೇ​ಶಿ​ಯಾಗೆ ಭಾರತ ತಂಡ?

ಡೇವಿಸ್‌ ಕಪ್‌ ಟೆನಿಸ್‌ ಇತಿ​ಹಾ​ಸ​ದಲ್ಲಿ 6 ಬಾರಿ ಪಾಕಿ​ಸ್ತಾ​ನ​ವನ್ನು ಎದು​ರಿ​ಸಿದ ಭಾರತ ಇದು​ವ​ರೆಗೆ ಸೋಲು ಕಂಡಿಲ್ಲ. ಈ ಬಾರಿ ಪಾಕಿ​ಸ್ತಾ​ನ​ವನ್ನು ಸೋಲಿ​ಸು​ವುದು ಇನ್ನಷ್ಟು ಸುಲ​ಭ​ವಾ​ಗಿದೆ. ಪಾಕಿ​ಸ್ತಾನ ಆಟ​ಗಾ​ರರು ಪದಾ​ರ್ಪಣಾ ಡೇವಿಸ್‌ ಕಪ್‌ ಆಡು​ತ್ತಿ​ದ್ದಾರೆ. ಶನಿ​ವಾ​ರವೂ ಎಲ್ಲಾ 3 ಪಂದ್ಯ​ಗ​ಳನ್ನು ಜಯಿ​ಸುವ ಮೂಲಕ 5-0ರಲ್ಲಿ ಭಾರತ ವಿಶ್ವ ಗುಂಪಿನ ಅರ್ಹತಾ ಸುತ್ತು ಪ್ರವೇ​ಶಿ​ಸುವ ನಿರೀ​ಕ್ಷೆ​ಯಿ​ದೆ. ಮುಂದಿನ ವರ್ಷ ಮಾ.6-7ರಂದು ಕ್ರೊವೇ​ಶಿ​ಯಾ​ದಲ್ಲಿ ವಿಶ್ವ ಗುಂಪಿನ ಅರ್ಹತಾ ಪಂದ್ಯ​ಗಳು ನಡೆ​ಯ​ಲಿ​ವೆ.