US Open ಜೋಕೋಗೆ ಸೋಲಿನ ಶಾಕ್, ಡೇನಿಲ್ ಮೆಡ್ವೆಡೆವ್ ಚಾಂಪಿಯನ್..!
* ಯುಎಸ್ ಓಪನ್ ಫೈನಲ್‌ನಲ್ಲಿ ಜೋಕೋ ಗೆಲುವಿನ ನಾಗಾಲೋಟಕ್ಕೆ ಬ್ರೇಕ್
* ಕ್ಯಾಲೆಂಡರ್ ಗ್ರ್ಯಾನ್ ಗೆಲ್ಲುವ ಜೋಕೋವಿಚ್ ಕನಸು ಭಗ್ನ
* ರಷ್ಯಾದ ಡೇನಿಲ್ ಮೆಡ್ವೆಡೆವ್ ಯುಎಸ್ ಓಪನ್ ನೂತನ್ ಚಾಂಪಿಯನ್
ನ್ಯೂಯಾರ್ಕ್(ಸೆ.13): ಪುರುಷರ ಸಿಂಗಲ್ಸ್ ಟೆನಿಸ್‌ನಲ್ಲಿ ಕ್ಯಾಲೆಂಡರ್ ಗ್ರ್ಯಾನ್ ಸ್ಲಾಂ ಗೆಲ್ಲುವ ನೊವಾಕ್ ಜೋಕೋವಿಚ್ ಕನಸು ಯುಎಸ್ ಓಪನ್ ಫೈನಲ್‌ನಲ್ಲಿ ನುಚ್ಚುನೂರಾಗಿದೆ. ವಿಶ್ವದ ನಂ.1 ಟೆನಿಸಿಗ ನೊವಾಕ್ ಜೋಕೋವಿಚ್ ಗೆಲುವಿನ ನಾಗಾಲೋಟಕ್ಕೆ ಯುಎಸ್ ಓಪನ್ ಫೈನಲ್‌ನಲ್ಲಿ ಬ್ರೇಕ್ ಬಿದ್ದಿದೆ. ಜೋಕೋಗೆ ಸೋಲಿನ ಶಾಕ್ ನೀಡಿದ ರಷ್ಯಾದ ಡೇನಿಲ್ ಮೆಡ್ವೆಡೆವ್ ನೂತನ ಯುಎಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಹಾರ್ಡ್ ಕೋರ್ಟ್, ಕ್ಲೇ ಕೋರ್ಟ್ ಹಾಗೂ ಗ್ರಾಸ್ ಕೋರ್ಟ್‌ನಲ್ಲಿ ಸತತ 27 ಪಂದ್ಯಗಳನ್ನು ಗೆದ್ದು ಯುಎಸ್ ಓಪನ್ ಫೈನಲ್ ಪ್ರವೇಶಿಸಿದ್ದ ನೊವಾಕ್ ಜೋಕೋವಿಚ್ 1969ರ ಬಳಿಕ ಕ್ಯಾಲಂಡರ್ ಗ್ರ್ತಾನ್ ಸ್ಲಾಂ(ವರ್ಷವೊಂದರಲ್ಲೇ 4 ಗ್ರ್ಯಾನ್ ಸ್ಲಾಂ) ಗೆಲ್ಲುವ ಕನವರಿಕೆಯಲ್ಲಿದ್ದರು. ಆದರೆ ರಷ್ಯಾದ ಡೇನಿಲ್ ಮೆಡ್ವೆಡೆವ್ ಎದುರು 6-4, 6-4, 6-4 ಸೆಟ್‌ಗಳಿಂದ ಮುಗ್ಗರಿಸುವ ಮೂಲಕ 21ನೇ ಗ್ರ್ಯಾನ್ ಸ್ಲಾಂ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದ್ದಾರೆ. ಆರ್ಥರ್ ಆಶ್ ಕೋರ್ಟ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಡೇನಿಲ್ ಮೆಡ್ವೆಡೆವ್ ಚೊಚ್ಚಲ ಗ್ರ್ಯಾನ್ ಸ್ಲಾಂ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
18ರ ಹುಡುಗಿ ಎಮ್ಮಾ ರಾಡುಕಾನು ಯುಎಸ್ ಓಪನ್ ಚಾಂಪಿಯನ್..!
34 ವರ್ಷದ ಸರ್ಬಿಯಾದ ಟೆನಿಸಿಗ ಜೋಕೋ, ಈ ಮೊದಲು ಕಳೆದ ಫೆಬ್ರವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಮೆಡ್ವೆಡೆವ್‌ಗೆ ಸೋಲುಣಿಸಿದ್ದರು. ಇದಾದ ಬಳಿಕ ಜೂನ್‌ನಲ್ಲಿ ನಡೆದ ಫ್ರೆಂಚ್ ಓಪನ್ ಹಾಗೂ ಜುಲೈನಲ್ಲಿ ನಡೆದ ವಿಂಬಲ್ಡನ್‌ನಲ್ಲಿ ಮೆಡ್ವೆಡೆವ್ ಎದುರು ಜೋಕೋ ಗೆಲುವಿನ ಕೇಕೆ ಹಾಕಿದ್ದರು. ಇದೀಗ ಋತುವಿನ ಕೊನೆಯ ಗ್ರ್ಯಾನ್ ಸ್ಲಾಂನಲ್ಲಿ ರಷ್ಯಾದ ಟೆನಿಸಿಗನ ಕೈ ಮೇಲಾಗಿದೆ.
ಫೆಡರರ್-ನಡಾಲ್ ದಾಖಲೆ ಸೇಫ್: ಪುರುಷರ ಸಿಂಗಲ್ಸ್ ಗ್ರ್ಯಾನ್ ಸ್ಲಾಂ ಇತಿಹಾಸದಲ್ಲಿ ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್, ರಾಫೆಲ್ ನಡಾಲ್ ಹಾಗೂ ನೊವಾಕ್ ಜೋಕೋವಿಚ್ ತಲಾ 20 ಗ್ರ್ಯಾನ್ ಸ್ಲಾಂ ಜಯಿಸಿದ್ದಾರೆ. ಯುಎಸ್ ಓಪನ್‌ನಲ್ಲಿ ಫೆಡರರ್ ಹಾಗೂ ನಡಾಲ್ ಪಾಲ್ಗೊಂಡಿರಲಿಲ್ಲ. ಹೀಗಾಗಿ ಜೋಕೋ ಈ ಇಬ್ಬರನ್ನು ಹಿಂದಿಕ್ಕಿ 21 ಗ್ರ್ಯಾನ್ ಸ್ಲಾಂ ಜಯಿಸಲಿದ್ದಾರೆ ಎಂದು ಟೆನಿಸ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಇದಕ್ಕೆ ಬಲ ಎನ್ನುವಂತೆ ಜೋಕೋ ಫೈನಲ್ ಪ್ರವೇಶಿಸಿದ್ದರಾದರೂ, ಕೊನೆಯ ಪಂದ್ಯದಲ್ಲಿ ಇತಿಹಾಸ ನಿರ್ಮಿಸಲು ವಿಫಲರಾಗಿದ್ದಾರೆ.