18ರ ಹುಡುಗಿ ಎಮ್ಮಾ ರಾಡುಕಾನು ಯುಎಸ್ ಓಪನ್ ಚಾಂಪಿಯನ್..!
* ಯುಎಸ್ ಓಪನ್ ಮಹಿಳಾ ಸಿಂಗಲ್ಸ್‌ನಲ್ಲಿ ಬ್ರಿಟನ್ನಿನ ಎಮ್ಮಾ ರಾಡುಕಾನು ಚಾಂಪಿಯನ್
* 1977ರ ಬಳಿಕ ಗ್ರ್ಯಾನ್ ಸ್ಲಾಂ ಗೆದ್ದ ಬ್ರಿಟನ್‌ನ ಮೊದಲ ಆಟಗಾರ್ತಿ ರಾಡುಕಾನು
* 2004ರ ಬಳಿಕ ಗ್ರ್ಯಾನ್ ಸ್ಲಾಂ ಗೆದ್ದ ಅತಿಕಿರಿಯ ಆಟಗಾರ್ತಿ ಎಮ್ಮಾ
ನ್ಯೂಯಾರ್ಕ್(ಸೆ.13): ಮಹಿಳಾ ಟೆನಿಸ್‌ನಲ್ಲಿ ಮತ್ತೊಬ್ಬ ಹೊಸ ತಾರೆಯ ಉದಯವಾಗಿದೆ. ಯುಎಸ್ ಓಪನ್ ಗ್ರ್ಯಾನ್ ಸ್ಲಾಂ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗಿ ಬ್ರಿಟನ್‌ನ 18 ವರ್ಷದ ಎಮ್ಮಾ ರಾಡುಕಾನು ಹೊರಹೊಮ್ಮಿದ್ದಾರೆ. ಫೈನಲ್‌ನಲ್ಲಿ ಕೆನಡಾದ 19 ವರ್ಷದ ಲೇಯ್ಲಾ ಆ್ಯನಿ ಫರ್ನಾಂಡೆಜ್ ವಿರುದ್ಧ 6-4, 6-3 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಫೈನಲ್ ಪಂದ್ಯ ಏಕಪಕ್ಷೀಯವಾಗಿ ನಡೆಯಿತು ಎಂದು ಅಂಕಗಳನ್ನು ನೋಡಿದಾಗ ಅನಿಸಿದರೂ, ಪಂದ್ಯ ರೋಚಕತೆಯಿಂದ ಕೂಡಿತ್ತು. ಫರ್ನಾಂಡೆಜ್ ಸಹ ಆಕರ್ಷಕ ಹೊಡೆತಗಳ ಮೂಲಕ ರಾಡುಕಾನುಗೆ ಪ್ರಬಲ ಪೈಪೋಟಿ ನೀಡಿದರು. ಫೈನಲ್ ಪಂದ್ಯ 1 ಗಂಟೆ 51 ನಿಮಿಷಗಳ ಕಾಲ ನಡೆಯಿತು.
ಇಬ್ಬರು ಯುವತಿಯರ ನಡುವಿನ ಪಂದ್ಯ ಭಾರೀ ಕುತೂಹಲ ಕೆರಳಿಸಿತ್ತು. ಇಬ್ಬರೂ 3 ವರ್ಷಗಳ ಹಿಂದೆ ವಿಂಬಲ್ಡನ್ ಕಿರಿಯರ ವಿಭಾಗದಲ್ಲಿ ಎದುರಾಗಿದ್ದರು. 1999ರ ಯುಎಸ್ ಬಳಿಕ ಇಬ್ಬರು ಯುವ ಆಟಗಾರ್ತಿಯರ ನಡುವೆ ನಡೆದ ಗ್ರ್ಯಾನ್ ಸ್ಲಾಂ ಫೈನಲ್ ಇದಾಗಿತ್ತು. 1999ರ ಯುಎಸ್ ಓಪನ್‌ನಲ್ಲಿ 17 ವರ್ಷದ ಸೆರೆನಾ ವಿಲಿಯಮ್ಸ್, 18 ವರ್ಷದ ಮಾರ್ಟಿನಾ ಹಿಂಗಿಸ್ ವಿರುದ್ಧ ಸೆಣಸಾಡಿ ಗೆದ್ದಿದ್ದರು.
US Open ಜ್ವೆರೆವ್ ಬಗ್ಗುಬಡಿದು ಫೈನಲ್ ಪ್ರವೇಶಿಸಿದ ಜೋಕೋವಿಚ್
ಫೈನಲ್‌ನಲ್ಲಿ ರಾಡುಕಾನುಗಿಂತ ಫರ್ನಾಂಡೆಜ್ ಸುಸ್ತಾದಂತೆ ಕಂಡರು. ಇದಕ್ಕೆ ಕಾರಣ, ಫರ್ನಾಂಡೆಜ್ ಫೈನಲ್‌ಗೂ ಮುನ್ನ 6 ಪಂದ್ಯಗಳಲ್ಲಿ ಗೆಲ್ಲಲು ಒಟ್ಟು ಹನ್ನೆರಡೂವರೆ ಗಂಟೆಗಳನ್ನು ತೆಗೆದುಕೊಂಡಿದ್ದರು. ರಾಡುಕಾನು ಪ್ರಧಾನ ಸುತ್ತಿನಲ್ಲಿ 6 ಪಂದ್ಯಗಳನ್ನು ಕೇವಲ ಏಳೂವರೆ ಗಂಟೆಗಳಲ್ಲಿ ಗೆದ್ದರಿದ್ದರು.
ದಾಖಲೆಗಳ ಮಹಾಪೂರ!
ರಾಡುಕಾನು ಅರ್ಹತಾ ಸುತ್ತಿನಲ್ಲಿ ಆಡಿ ಗೆದ್ದು ಪ್ರಧಾನ ಸುತ್ತಿಗೇರಿದ್ದರು. ಅರ್ಹತಾ ಸುತ್ತಿನಿಂದ ಪ್ರಧಾನ ಸುತ್ತಿಗೇರಿ ಚಾಂಪಿಯನ್ ಆದ ಮೊದಲ ಟೆನಿಸ್ ಪಟು (ಪುರುಷ, ಮಹಿಳೆ) ಎನ್ನುವ ಹೊಸ ದಾಖಲೆಯನ್ನು 18ರ ಆಟಗಾರ್ತಿ ಬರೆದಿದ್ದಾರೆ. ಈ ಟೂರ್ನಿಗೆ ಕಾಲಿಡುವಾಗ ವಿಶ್ವ ರಾರಯಂಕಿಂಗ್‌ನಲ್ಲಿ 150ನೇ ಸ್ಥಾನದಲ್ಲಿದ್ದ ರಾಡುಕಾನು, ಯುಎಸ್ ಓಪನ್ ಚಾಂಪಿಯನ್ ಆದ ಬಳಿಕ ವಿಶ್ವ ರಾರಯಂಕಿಂಗ್‌ನಲ್ಲಿ 23ನೇ ಸ್ಥಾನಕ್ಕೇರಿದ್ದಾರೆ.
1977ರ ಬಳಿಕ ಗ್ರ್ಯಾನ್ ಸ್ಲಾಂ ಗೆದ್ದ ಬ್ರಿಟನ್‌ನ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೂ ರಾಡುಕಾನು ಪಾತ್ರರಾಗಿದ್ದಾರೆ. 1977ರಲ್ಲಿ ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದ ವರ್ಜೀನಿಯಾ ವೇಡ್, ಶನಿವಾರ ಕ್ರೀಡಾಂಗಣದ ಸ್ಟ್ಯಾಂಡ್ಸ್‌ನಲ್ಲಿ ಕೂತು ರಾಡುಕಾನುಗೆ ಬೆಂಬಲ ನೀಡಿದರು. 2004ರ ಬಳಿಕ ಗ್ರ್ಯಾನ್ ಸ್ಲಾಂ ಗೆದ್ದ ಅತಿಕಿರಿಯ ಆಟಗಾರ್ತಿ ಎನ್ನುವ ದಾಖಲೆಯನ್ನೂ ರಾಡುಕಾನು ಬರೆದರು. 2004ರಲ್ಲಿ ರಷ್ಯಾದ ಮರಿಯಾ ಶರಪೋವಾ ತಮ್ಮ 17ನೇ ವಯಸ್ಸಿನಲ್ಲಿ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಗೆದ್ದಿದ್ದರು.
ಒಂದೂ ಸೆಟ್ ಸೋಲಲಿಲ್ಲ!
ರಾಡುಕಾನು ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿ, ಅಲ್ಲಿಂದ ಪ್ರಧಾನ ಸುತ್ತಿಗೇರಿದ್ದರು. ಅರ್ಹತಾ ಸುತ್ತಿನಲ್ಲಿ 3 ಪಂದ್ಯ, ಪ್ರಧಾನ ಸುತ್ತಿನಲ್ಲಿ 7 ಪಂದ್ಯಗಳು ಸೇರಿ ಒಟ್ಟು 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದರು. ವಿಶೇಷ ಎಂದರೆ ಎಲ್ಲಾ 10 ಪಂದ್ಯಗಳಲ್ಲೂ ರಾಡುಕಾನು ಒಂದೂ ಸೆಟ್ ಸೋಲಲಿಲ್ಲ. ರಾಡುಕಾನುಗಿದು 2ನೇ ಗ್ರ್ಯಾನ್ ಸ್ಲಾಂ ಟೂರ್ನಿ. ಈ ವರ್ಷ ವಿಂಬಲ್ಡನ್‌ಗೆ ವೈಲ್ಡ್ ಕಾರ್ಡ್ ಪ್ರವೇಶ ಸಿಕ್ಕಿತ್ತು. ಅಲ್ಲಿ ಗ್ರ್ಯಾನ್ ಸ್ಲಾಂಗೆ ಪಾದಾರ್ಪಣೆ ಮಾಡಿದ್ದರು. ಅಲ್ಲಿ 4ನೇ ಸುತ್ತಿಗೆ ಪ್ರವೇಶಿಸಿದ್ದರು. ಈ ಕಾರಣದಿಂದಾಗಿ ಅವರಿಗೆ ಯುಎಸ್ ಓಪನ್ ಅರ್ಹತಾ ಸುತ್ತಿಗೆ ಪ್ರವೇಶ ದೊರೆಯಿತು. ವಿಂಬಲ್ಡನ್‌ನ ಮೊದಲ 3 ಪಂದ್ಯಗಳಲ್ಲೂ ರಾಡುಕಾನು ನೇರ ಸೆಟ್‌ಗಳಲ್ಲಿ ಜಯಗಳಿಸಿದ್ದರು. 4ನೇ ಸುತ್ತಿನಲ್ಲಿ ನೇರ ಸೆಟ್‌ಗಳಲ್ಲಿ ಸೋತಿದ್ದರು. ಹೀಗಾಗಿ, ಗ್ರ್ಯಾನ್ ಸ್ಲಾಂನಲ್ಲಿ ಬ್ರಿಟನ್ ಆಟಗಾರ್ತಿ ಇನ್ನೂ 3 ಸೆಟ್ ಪಂದ್ಯವನ್ನು ಆಡಿಯೇ ಇಲ್ಲ ಎನ್ನುವುದು ಮತ್ತೊಂದು ವಿಶೇಷ.
ಅರ್ಹತಾ ಸುತ್ತಿನ ವೇಳೆಯೇ ರಿಟರ್ನ್ ಟಿಕೆಟ್ ಬುಕ್ ಆಗಿತ್ತು!
ಯುಎಸ್ ಓಪನ್ ಅರ್ಹತಾ ಸುತ್ತಿನಲ್ಲಿ ಆಡಲು ನ್ಯೂಯಾರ್ಕ್‌ಗೆ ಆಗಮಿಸಿದ ರಾಡುಕಾನು, ತಾವು ಪ್ರಧಾನ ಸುತ್ತಿಗೇರುವ ಮಹದಾಸೆಯನ್ನೇನೂ ಇಟ್ಟುಕೊಂಡಿರಲಿಲ್ಲವಂತೆ. ಅರ್ಹತಾ ಸುತ್ತಿನಲ್ಲಿ ಸೋತರೆ ಎನ್ನುವ ಕಾರಣಕ್ಕೆ ಲಂಡನ್‌ಗೆ ರಿಟರ್ನ್ ಟಿಕೆಟ್ ಅನ್ನು ಮೊದಲೇ ಕಾಯ್ದಿರಿಸಿದ್ದರಂತೆ. ಆದರೆ ಪ್ರಧಾನ ಸುತ್ತಿಗೇರಿ ಚಾಂಪಿಯನ್ ಆಗಿದ್ದು ವಿಶೇಷ.
ಪುಣೆಯಲ್ಲಿ ಮೊದಲ ಟ್ರೋಫಿ ಗೆದಿದ್ದ ಎಮ್ಮಾ ರಾಡಕಾನು!
ರಾಡಕಾನು ವೃತ್ತಿಬದುಕಿನಲ್ಲಿ ಭಾರತದ ಪಾತ್ರವೂ ಮಹತ್ವದ್ದಾಗಿದೆ ಎನ್ನುವುದು ವಿಶೇಷ. 2019ರಲ್ಲಿ ಪುಣೆಯಲ್ಲಿ ನಡೆದಿದ್ದ ಐಟಿಎಫ್ ಟೂರ್ನಿಯಲ್ಲಿ ರಾಡಕಾನು ಚಾಂಪಿಯನ್ ಆಗಿದ್ದರು. ಅದು ಅವರು ವೃತ್ತಿಬದುಕಿನಲ್ಲಿ ಗೆದ್ದ ಮೊದಲ 25000 ಅಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತದ ಟೂರ್ನಿ.
2021ರಲ್ಲಿ 4 ಗ್ರ್ಯಾನ್‌ಸ್ಲಾಂಗಳಲ್ಲಿ 4 ವಿಭಿನ್ನ ಚಾಂಪಿಯನ್ನರು!
ಈ ವರ್ಷ ನಡೆದ ನಾಲ್ಕು ಗ್ರ್ಯಾನ್ ಸ್ಲಾಂಗಳಲ್ಲಿ ನಾಲ್ಕು ವಿಭಿನ್ನ ಚಾಂಪಿಯನ್ನರು ಹೊರಹೊಮ್ಮಿದ್ದಾರೆ. ಆಸ್ಪ್ರೇಲಿಯನ್ ಓಪನ್‌ನಲ್ಲಿ ಜಪಾನ್‌ನ ನವೊಮಿ ಒಸಾಕ, ಫ್ರೆಂಚ್ ಓಪನ್‌ನಲ್ಲಿ ಚೆಕ್ ಗಣರಾಜ್ಯದ ಬಾರ್ಬೊರಾ ಕ್ರೇಜಿಕೋವಾ, ವಿಂಬಲ್ಡನ್‌ನಲ್ಲಿ ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ, ಯುಎಸ್ ಓಪನ್‌ನಲ್ಲಿ ಬ್ರಿಟನ್‌ನ ಎಮ್ಮಾ ರಾಡುಕಾನು ಚಾಂಪಿಯನ್ ಆಗಿದ್ದಾರೆ.
ಫೈನಲ್‌ನಲ್ಲಿ ಕಠಿಣ ಸ್ಪರ್ಧೆ ಎದುರಾಗಲಿದೆ ಎಂದು ತಿಳಿದಿತ್ತು. ಫರ್ನಾಂಡೆಜ್ ಪ್ರಬಲ ಪೈಪೋಟಿ ನೀಡಿದರು. ನನ್ನ ಶ್ರೇಷ್ಠ ಪ್ರದರ್ಶನ ಆಟವನ್ನು ಆಡಿ ಪ್ರಶಸ್ತಿ ಗೆದ್ದಿದ್ದು ಖುಷಿ ನೀಡಿದೆ - ಎಮ್ಮಾ ರಾಡುಕಾನು, ಯುಎಸ್ ಓಪನ್ ಚಾಂಪಿಯನ್
ಮುಂದಿನ ವರ್ಷ ಮತ್ತೆ ಫೈನಲ್ ಪ್ರವೇಶಿಸುವ ವಿಶ್ವಾಸವಿದೆ. ಅದೇ ರೀತಿ ಮುಂದಿನ ವರ್ಷ ಪ್ರಶಸ್ತಿ ಗೆಲ್ಲುತ್ತೇನೆ ಎನ್ನುವ ವಿಶ್ವಾಸದೊಂದಿಗೆ ತೆರಳಲಿದ್ದೇನೆ. ನನ್ನ ಆಟದ ಬಗ್ಗೆ ಹೆಮ್ಮೆ ಇದೆ - ಲಾಯ್ಲಾ ಫರ್ನಾಂಡೆಜ್, ಯುಎಸ್ ಓಪನ್ ರನ್ನರ್-ಅಪ್