ನವದೆಹಲಿ(ಮೇ.21): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಅದರಿಂದಾಗಿ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಕ್ರೀಡಾಪಟುಗಳಿಗೆ ನೀಡುವ ಆರೋಗ್ಯ ವಿಮೆ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧರಿಸಿದೆ. ಈ ವರ್ಷ 13,000 ಕ್ರೀಡಾಪಟುಗಳು, ಕೋಚ್‌ ಹಾಗೂ ಸಹಾಯಕ ಸಿಬ್ಬಂದಿಗೆ ಆರೋಗ್ಯ ಹಾಗೂ ಅಪಘಾತ ವಿಮೆ ನೀಡಲು ತೀರ್ಮಾನಿಸಿದ್ದು, ಕೆಲ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ.

ರಾಷ್ಟ್ರೀಯ ಶಿಬಿರದಲ್ಲಿರುವ, ಶಿಬಿರದಲ್ಲಿ ಪಾಲ್ಗೊಳ್ಳುವ ಸಂಭವೀಯ ಅಥ್ಲೀಟ್‌ಗಳು, ಖೇಲೋ ಇಂಡಿಯಾ ಯೋಜನೆಯಡಿ ಆಯ್ಕೆಯಾಗಿರುವ ಹಾಗೂ ಕಿರಿಯ ವಿಭಾಗದ ಅಥ್ಲೀಟ್‌ಗಳನ್ನು ಗುರುತಿಸಿ ಅವರಿಗೆ ವಿಮೆ ನೀಡಲಾಗುವುದು. ಪ್ರತಿ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರು. ಆರೋಗ್ಯ ವಿಮೆ, ಅಪಘಾತ ಇಲ್ಲವೇ ಸಾವು ಸಂಭವಿಸಿದ ಸಂದರ್ಭದಲ್ಲಿ 25 ಲಕ್ಷ ರು. ವಿಮೆ ಸಿಗಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.

ಕುಸ್ತಿಪಟು ಸುಶೀಲ್ ಕುಮಾರ್ ಹುಡುಕಿಕೊಟ್ಟವರಿಗೆ 1 ಲಕ್ಷ ರೂ ಬಹುಮಾನ..!

ವರ್ಷ ಪೂರ್ತಿ ಚಾಲ್ತಿಯಲ್ಲಿ: ಈ ವರೆಗೂ ಕ್ರೀಡಾಪಟುಗಳು ರಾಷ್ಟ್ರೀಯ ಶಿಬಿರದಲ್ಲಿದ್ದಾಗ, ರಾಷ್ಟ್ರೀಯ ಇಲ್ಲವೇ ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಯುವ ಸಂದರ್ಭದಲ್ಲಿ ಮಾತ್ರ ವಿಮೆ ಚಾಲ್ತಿಯಲ್ಲಿ ಇರುತ್ತಿತ್ತು. ಆದರೆ ಈ ಬಾರಿ ವರ್ಷ ಪೂರ್ತಿ ವಿಮೆ ಚಾಲ್ತಿಯಲ್ಲಿ ಇರಲಿದೆ. ಯಾವುದೇ ಶಿಬಿರ, ಕ್ರೀಡಾಕೂಟಗಳು ನಡೆಯದಿದ್ದರೂ ವಿಮೆ ಇರಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಕೇಂದ್ರದ ಈ ನಿರ್ಧಾರವನ್ನು ಕ್ರೀಡಾಪಟುಗಳು ಸ್ವಾಗತಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona