ನವದೆಹಲಿ(ಮೇ.18): ಕಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಖ್ಯಾತ ಕುಸ್ತಿಪಟು ಸುಶೀಲ್‌ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು ಒಂದು ಲಕ್ಷ ರುಪಾಯಿ ಬಹುಮಾನ ಘೋಷಿಸಿದ್ದಾರೆ. 

ಕಳೆದ ಎರಡು ವಾರಗಳ ಹಿಂದಷ್ಟೇ ನವದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಸಾಗರ್ ರಾಣಾ ಎನ್ನುವ ಕುಸ್ತಿಪಟುವಿನ ಹತ್ಯೆಯಾಗಿತ್ತು. ಈ ಸಾವಿನ ಜತೆ ಸುಶೀಲ್ ಕುಮಾರ್ ಹೆಸರು ಥಳುಕು ಹಾಕಿಕೊಂಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಅಜಯ್‌ ಅವರನ್ನು ಹುಡುಕಿಕೊಟ್ಟವರಿಗೆ/ ಮಾಹಿತಿ ನೀಡಿದವರಿಗೆ 50 ಸಾವಿರ ರುಪಾಯಿ ಬಹುಮಾನವನ್ನು ಘೋಷಿಸಲಾಗಿದೆ. ಸದ್ಯ ಈ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

23 ವರ್ಷದ ಸಾಗರ್ ರಾಣಾ ಛತ್ರಸಾಲ್ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಮೇ 04ರಂದು ರಾಣಾ ಮೇಲೆ ಸುಶೀಲ್ ಕುಮಾರ್ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ರಾಣಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೇ.05ರಂದು ಕೊನೆಯುಸಿರೆಳೆದಿದ್ದರು. ಈ ಸಂಬಂಧ ಡೆಲ್ಲಿ ಕೋರ್ಟ್‌ ಸುಶೀಲ್ ಕುಮಾರ್ ಸೇರಿದಂತೆ ಆರೋಪಿಗಳ ಮೇಲೆ ಜಾಮೀನು ರಹಿತ ಬಂಧನದ ವಾರೆಂಟ್‌ ಹೊರಡಿಸಿತ್ತು.

ಸುಶೀಲ್‌ ಕುಮಾರ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿ..!

ಈ ಘಟನೆಯ ಕುರಿತಂತೆ ಮೇ.05ರಂದು ಪ್ರತಿಕ್ರಿಯಿಸಿದ್ದ ಸುಶೀಲ್ ಕುಮಾರ್, ನಮ್ಮ ಕುಸ್ತಿಪಟುಗಳಿಗೂ ಹಾಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲವೆಂದು ಆರೋಪವನ್ನು ಅಲ್ಲಗಳೆದಿದ್ದರು.

ಖ್ಯಾತ ಕುಸ್ತಿಪಟು ಸುಶೀಲ್‌ ಕುಮಾರ್ ದೇಶ ಕಂಡ ಅತ್ಯಂತ ಯಶಸ್ವಿ ಅಥ್ಲೀಟ್‌ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸುಶೀಲ್‌, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದನ್ನು ಸ್ಮರಿಸಬಹುದಾಗಿದೆ.