ಬೆಂಗಳೂರು(ಮೇ.20): ಕರ್ನಾಟದಲ್ಲಿರುವ ರಾಜ್ಯ ಮಟ್ಟದ ಏಕೈಕ ಕ್ರೀಡಾಂಗಣ ಕಂಠೀರವ. ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ಅಂಗಣ ಎಷ್ಟುಮುಖ್ಯವೋ ಅಂತೆಯೇ ಅಭ್ಯಾಸದ ಬಳಿಕ ನಿತ್ಯ ಕರ್ಮ, ವಿಶ್ರಾಂತಿ ಇತ್ಯಾದಿಗಳಿಗೆ ಕೊಠಡಿ ಹಾಗೂ ಶೌಚಾಲಯ ವ್ಯವಸ್ಥೆಯೂ ಅಷ್ಟೇ ಮುಖ್ಯ. ವಿಪರ್ಯಾಸ ಎಂದರೆ ಇಲ್ಲಿ ಅಭ್ಯಾಸ ನಡೆಸುವ ಕ್ರೀಡಾಪಟುಗಳಿಗೆ ಸರಿಯಾದ ಶೌಚಾಲಯ ವ್ಯವಸ್ಥೆಯೇ ಇಲ್ಲ. ಸಾರ್ವಜನಿಕ ಶೌಚಾಲಯಕ್ಕಿಂತ ಕಡೆಯಾಗಿರುವ ಇಲ್ಲಿನ ಶೌಚಾಲಯಗಳನ್ನೇ ಕ್ರೀಡಾಪಟುಗಳು ಬಳಸಬೇಕಾದ ಪರಸ್ಥಿತಿ ಇದೆ.

ಇದನ್ನೂ ಓದಿ: ಕಂಠೀರವ ಜಿಮ್‌ಗೆ ಕ್ರೀಡಾಳುಗಳಿಗಿಲ್ಲ ಪ್ರವೇಶ!

ಕಂಠೀರವ ಕ್ರೀಡಾಂಗಣದಲ್ಲಿನ ಶೌಚಾಲಯದ ಸಮಸ್ಯೆ ಇಂದು, ನಿನ್ನೆಯದಲ್ಲ ಹಲವು ವರ್ಷಗಳಿಂದ ಇಲ್ಲಿ ಸಮಸ್ಯೆಯನ್ನು ಕ್ರೀಡಾಪಟುಗಳು ಎದುರಿಸುತ್ತಿದ್ದಾರೆ. ಇಲ್ಲಿನ ಶೌಚಾಲಯಗಳು ಗಬ್ಬು ನಾರುತ್ತಿವೆ. ಕ್ರೀಡಾಂಗಣದ ಹೌಸ್‌ ಕೀಪಿಂಗ್‌(ಸ್ವಚ್ಛತಾ ಕಾರ್ಯ) ಅನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಿಕೊಟ್ಟಿರುವ ಕ್ರೀಡಾ ಇಲಾಖೆ ಕೈ ಕಟ್ಟಿಕುಳಿತಿದೆ. ಇದರ ಉಸ್ತುವಾರಿ ನೋಡಿಕೊಳ್ಳುವವರು ಮಾತ್ರ ಶೌಚಾಲಯಗಳು ಗಬ್ಬು ನಾರುತ್ತಿದ್ದರೂ ತಮಗೆ ಸಂಬಂಧ ಇಲ್ಲ ಎನ್ನುವಂತೆ ಸುಮ್ಮನಿದ್ದಾರೆ.

ಇದನ್ನೂ ಓದಿ: ಕಂಠೀರವ ಕ್ರೀಡಾಂಗಣ ನಿರ್ವಹಣೆ: ಸರಕಾರ ಫೇಲ್!

ಕ್ರೀಡಾಂಗಣದ ಆವರಣದಲ್ಲಿರುವ ಶೌಚಾಲಯವೊಂದನ್ನು 3 ತಿಂಗಳ ಹಿಂದೆ ಒಡೆದು ಹಾಕಲಾಗಿದೆ. ಆದರೆ ಇಲ್ಲಿಯವರೆಗೂ ಅದನ್ನು ಮರು ನಿರ್ಮಿಸುವ ಗೋಜಿಗೆ ಇಲಾಖೆ ಕೈ ಹಾಕಿಲ್ಲ. ಕೆಡವಿ ಹಾಕಿರುವ ಶೌಚಾಲಯದ ಸಾಮಾಗ್ರಿಗಳು ಆ ಕೋಣೆಯಲ್ಲಿ ಎಲ್ಲೆಂದರಲ್ಲಿ ಚೆಲ್ಲಾಡಿವೆ. ಕನಿಷ್ಠ ಪಕ್ಷ ಅದನ್ನು ಎತ್ತಿ ಬೇರೆಡೆ ವರ್ಗಾಯಿಸುವ ಕೆಲಸವೂ ಆಗಿಲ್ಲ.

ಇದನ್ನೂ ಓದಿ: ಗುಂಡಿ ಬಿದ್ದ ಟ್ರ್ಯಾಕ್‌ನಲ್ಲೇ ಅಥ್ಲೀಟ್‌ಗಳ ಅಭ್ಯಾಸ- ಪದಕ ಬೇಟೆ ಹೇಗೆ?

ಹೆಸರಿಗೆ ಮಾತ್ರ 20 ಶೌಚಾಲಯ!: ಕಂಠೀರವ ಕ್ರೀಡಾಂಗಣದಲ್ಲಿ ಎಷ್ಟುಶೌಚಾಲಯಗಳಿವೆ ಎಂದು ಹುಡುಕಾಡಿದರೆ ಕಣ್ಣಿಗೆ ಬರೋಬ್ಬರಿ 20 ಶೌಚಾಲಯಗಳು ಕಾಣುತ್ತವೆ. ಆದರೆ ಇದರಲ್ಲಿ ಸ್ವಚ್ಛವಾಗಿರುವ, ಬಳಕೆಗೆ ಯೋಗ್ಯವಾಗಿರುವ ಶೌಚಾಲಯಗಳ ಸಂಖ್ಯೆ 4ರಿಂದ 5 ಮಾತ್ರ. ಗೇಟ್‌ ನಂ.6 ರ ಪ್ರವೇಶ ದ್ವಾರದ ಬಳಿ ಇರುವ ಶೌಚಾಲಯವನ್ನು ಕ್ರೀಡಾಂಗಣದಲ್ಲಿನ ನೌಕರರು ಬಳಸುತ್ತಿದ್ದಾರೆ. ಅಸಲಿಗೆ ಇದು ಶೌಚಾಲಯವೇ ಎನ್ನುವಷ್ಟುಹೀನ ಸ್ಥಿತಿಯಲ್ಲಿ ಈ ಸ್ಥಳ ಇದೆ. ಎಲ್ಲೆಂದರಲ್ಲಿ ಕಸದ ರಾಶಿ, ಶೌಚಾಲಯಕ್ಕೆ ನೀರು ಹಾಕಿ ವರ್ಷಗಳೇ ಕಳೆದಿವೆಯೇನೋ ಎನ್ನುವ ಪರಿಸ್ಥಿತಿ ಇದೆ. ‘ಮೊದಲ ಮಹಡಿಯಲ್ಲಿರುವ ಶೌಚಾಲಯವೊಂದರ ನೀರು ಪಕ್ಕದ ಕೋಣೆಗೆ ಹರಿದು ಬರುತ್ತದೆ. ಮಳೆ ಆರಂಭವಾಗಿ ಅಲ್ಲಲ್ಲಿ ಸೋರುವುದು ಹೆಚ್ಚಾಗಿದ್ದರೂ ಕ್ರೀಡಾಂಗಣದ ಸಿಬ್ಬಂದಿ ಇದ್ಯಾವುದನ್ನು ಇಲಾಖೆಯ ಗಮನಕ್ಕೆ ತಂದಿಲ್ಲ. ತಂದಿದ್ದರೂ ಅದರತ್ತ ಗಮನ ಹರಿಸುವ ಮನಸು ಇಲಾಖೆಗಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಕೋಚ್‌ ಒಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

‘ದೊಡ್ಡವ’ರಿಂದ ಉದ್ಘಾಟನೆಗೆ ಕಾಯುತ್ತಿದೆ ಹೊಸ ಶೌಚಾಲಯ!
ಕಂಠೀರವ ಕ್ರೀಡಾಂಗಣದಲ್ಲಿನ ಅಥ್ಲೀಟ್‌ಗಳು ಫಿಟ್ನೆಸ್‌ಗಾಗಿ ಬಳಸುವ ಹರಕಲು ಜಿಮ್‌ ಪಕ್ಕದಲ್ಲೇ ಕೆಲ ವರ್ಷಗಳ ಹಿಂದೆ ಹೊಸದಾಗಿ ಶೌಚಾಲಯವೊಂದನ್ನು ನಿರ್ಮಿಸಲಾಗಿದೆ. ಆದರೆ ಈ ಶೌಚಾಲಯಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ‘ಗಣ್ಯವ್ಯಕ್ತಿಗಳಿಂದ ಉದ್ಘಾಟನೆ ಮಾಡಿಸಬೇಕು ಎನ್ನುವ ಕಾರಣಕ್ಕೆ ಈ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಬೀಗ ತುಕ್ಕು ಹಿಡಿದಿದೆಯೇ ಹೊರತು ಶೌಚಾಲಯ ಮಾತ್ರ ಉದ್ಘಾಟನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ನಿರಂತರ ನೀರು ಸೋರಿಕೆಯಿಂದಾಗಿ ಶೌಚಾಲಯದಲ್ಲಿ ಪಾಚಿ ಕಟ್ಟಿದೆ. ಇದು ಇಲಾಖೆಯ ಕಾರ‍್ಯವೈಖರಿ, ಹೊಸ ಶೌಚಾಲಯಗಳನ್ನು ಹೀಗೆ ಧೂಳು ಹಿಡಿಯಲು ಬಿಟ್ಟು, ಗಬ್ಬು-ನಾರುತ್ತಿರುವ ಶೌಚಾಲಯಗಳನ್ನು ಶುಚಿಯಾಗಿಡದೇ ಜಾಣಕುರುಡುತನ ಪ್ರದರ್ಶಿಸುತ್ತಿದೆ. ಹೊಸ ಶೌಚಾಲಯವನ್ನು ಅಥ್ಲೀಟ್‌ಗಳಿಗೆ ಬಳಸಲು ಅವಕಾಶ ನೀಡಬಹುದು. ಆದರೆ ಗಣ್ಯವ್ಯಕ್ತಿಗಳಿಂದ ಉದ್ಘಾಟನೆ ಮಾಡಿಸಿದ ಬಳಿಕ ಕ್ರೀಡಾಪಟುಗಳ ಬಳಕೆಗೆ ಮುಕ್ತಗೊಳಿಸಲಿದ್ದೇವೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಹಾಳಾಗಿರುವ ಜಿಮ್‌ ಪಕ್ಕದಲ್ಲೇ ಹೊಸದಾಗಿ ನಿರ್ಮಿಸಿರುವ ಶೌಚಾಲಯಕ್ಕೆ ಕಳೆದ ಕೆಲ ವರ್ಷಗಳಿಂದ ಬೀಗ ಹಾಕಲಾಗಿದೆ. ಆ ಶೌಚಾಲಯವನ್ನು ಬಳಸುವಂತಿಲ್ಲ. ಅಲ್ಲಿ ನೀರು ಹರಿದು ಪಾಚಿ ಕಟ್ಟಿದೆ. ಅಥ್ಲೀಟ್‌ಗಳು ಶೌಚಾಲಯ ಬಳಸಲು ಕ್ರೀಡಾಂಗಣದ ಪ್ರವೇಶ ದ್ವಾರಕ್ಕೆ ತೆರಳಬೇಕು ಎನ್ನುವುದು ಹಾಸ್ಯಾಸ್ಪದ.
- ರಮೇಶ್‌, ಅಥ್ಲೆಟಿಕ್ಸ್‌ ಕೋಚ್‌

ಹರಕಲು ಜಿಮ್‌ ಪರಿಶೀಲಿಸಿದ ನಿರ್ದೇಶಕ
ಕಳೆದ ಕೆಲ ವರ್ಷಗಳಿಂದ ಕಂಠೀರವ ಕ್ರೀಡಾಂಗಣದ ಅಥ್ಲೀಟ್‌ಗಳು ಹರಕಲು ಜಿಮ್‌ನಲ್ಲಿ ಫಿಟ್ನೆಸ್‌ ಮಾಡುತ್ತಿದ್ದರೂ, ಕಣ್ಣು ಮುಚ್ಚಿಕೊಂಡಿದ್ದ ಕ್ರೀಡಾ ಇಲಾಖೆ ‘ಕನ್ನಡಪ್ರಭ’ ಮೇ 19ರಂದು ಪ್ರಕಟಿಸಿದ್ದ ‘ಕಂಠೀರವ ಅಥ್ಲೀಟ್‌ಗಳಿಗೆ ಹರಕಲು ಜಿಮ್ಮೇ ಗತಿ’ ವರದಿ ಬಳಿಕೆ ಎಚ್ಚೆತ್ತುಕೊಂಡಂತಿದೆ. ಭಾನುವಾರ ಕ್ರೀಡಾ ಇಲಾಖೆ ನಿರ್ದೇಶಕ ಶ್ರೀನಿವಾಸ್‌ ಹಾಗೂ ಜಂಟಿ ನಿರ್ದೇಶಕ ರಮೇಶ್‌, ಕ್ರೀಡಾಂಗಣದ ಹರಕಲು ಜಿಮ್‌ ಅನ್ನು ಪರಿಶೀಲಿಸಿದರು.

ಆ ಬಳಿಕ ಪ್ರತಿಕ್ರಿಯಿಸಿದ ನಿರ್ದೇಶಕರಾದ ಶ್ರೀನಿವಾಸ್‌, ‘ಇದು ಜಿಮ್‌ ಅಲ್ಲ ಕೆಲಸಕ್ಕೆ ಬಾರದ ಕಬ್ಬಿಣದ ಸಾಮಾಗ್ರಿಗಳನ್ನು ತಂದಿಟ್ಟುಕೊಂಡು ಇಲ್ಲಿ ಅಥ್ಲೀಟ್‌ಗಳು ಅಭ್ಯಾಸ ನಡೆಸುತ್ತಿದ್ದಾರೆ. ತರಬೇತಿ ನೀಡಲು ಕೋಚ್‌ಗಳು ದೊಡ್ಡ ಮೊತ್ತದ ಶುಲ್ಕ ಪಡೆಯುತ್ತಾರೆ. ಹಾಗಾಗಿ ಫಿಟ್ನೆಸ್‌ಗಾಗಿ ತಾವೇ ಕೆಲವೊಂದಷ್ಟುಸಾಮಾಗ್ರಿಗಳನ್ನು ತಂದಿಟ್ಟುಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿರುವ ಸಾಮಾಗ್ರಿಗಳನ್ನು ಶೀಘ್ರದಲ್ಲಿ ಗುಜರಿಗೆ ಹಾಕುತ್ತೇವೆ’ ಎಂದರು.

ಮಲ್ಟಿಜಿಮ್‌ನಲ್ಲಿ ರಿಯಾಯಿತಿ!
ಭಾನುವಾರ ಸಂಜೆ, ದೂರವಾಣಿ ಮೂಲಕ ಉತ್ತರಿಸಿದ ಜಂಟಿ ನಿರ್ದೇಶಕ ರಮೇಶ್‌, ‘ಮಲ್ಟಿಜಿಮ್‌ ನಿರ್ವಹಣೆಗೆಂದು ಶುಲ್ಕ ಪಡೆಯುತ್ತೇವೆ ಅಷ್ಟೇ. ಕ್ರೀಡಾಪಟುಗಳಿಗೆ ಅನುಕೂಲವಾಗಲಿ ಎಂದೇ ಜಿಮ್‌ ಆರಂಭಿಸಿದ್ದೇವೆ. ಯಾವುದೇ ಕ್ರೀಡಾಪಟು, ಇಲ್ಲಿ ಫಿಟ್ನೆಸ್‌ ತರಬೇತಿ ಪಡೆಯಲು ಇಚ್ಛಿಸಿ ಅರ್ಜಿ ಸಲ್ಲಿಸಿದರೆ, ಅವರಿಗೆ ವ್ಯವಸ್ಥೆ ಕಲ್ಪಿಸುತ್ತೇವೆ. ಸದ್ಯ ಇರುವ .2000 ಶುಲ್ಕವನ್ನು .500ಕ್ಕೆ ಇಳಿಸಲು ತೀರ್ಮಾನಿಸುತ್ತೇವೆ’ ಎಂದರು.

ಧನಂಜಯ ಎಸ್‌.ಹಕಾರಿ