ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂ; ಸೆರೆನಾ, ಜೋಕೋಗೆ ಸುಲಭ ಜಯ
ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್, ನೋವಾಕ್ ಜೊಕೊವಿಚ್ ಗೆಲುವಿನ ಓಟ ಮುುಂದುವರಿಸಿದರೆ, ಭಾರತದ ಶರಣ್ ಶುಭಾರಂಭ ಮಾಡಿದ್ದಾರೆ. ಆದರೆ ರೋಹನ್ ಬೋಪಣ್ಣ ಮುಗ್ಗರಿಸಿದ್ದಾರೆ. ಆಸ್ಟ್ರೇಲಿಯಾ ಒಪನ್ ದಿನದಾಟದ ವಿವರ ಇಲ್ಲಿದೆ.
ಮೆಲ್ಬರ್ನ್(ಜ.23): ಹಾಲಿ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕ ಜತೆ ಸ್ಪರ್ಧೆಗೆ ಅಮೆರಿಕದ 15 ವರ್ಷದ ಕೊಕೊ ಗಾಫ್ ಸಿದ್ಧರಾಗಿದ್ದಾರೆ. ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 7 ಬಾರಿ ಗ್ರ್ಯಾಂಡ್‌ಸ್ಲಾಂ ವಿಜೇತೆ ವೀನಸ್ ವಿಲಿಯಮ್ಸ್ ವಿರುದ್ಧ ಗೆದ್ದಿದ್ದ ಗಾಫ್, ಬುಧವಾರ 2ನೇ ಸುತ್ತಿನಲ್ಲಿ ರೊಮೇನಿಯಾದ ಸೊರಾನ ಸಸ್ರ್ಟಿಯಾ ವಿರುದ್ಧ 4-6, 6-3, 7-5 ಸೆಟ್‌ಗಳಲ್ಲಿ ಜಯಗಳಿಸಿದರು. 2ನೇ ಸುತ್ತಿನಲ್ಲಿ ಚೀನಾದ ಜೆಂಗ್ ಸಾಯ್‌ಸಾಯ್ ವಿರುದ್ಧ 6-2, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದ ಒಸಾಕ, 3ನೇ ಸುತ್ತಿನಲ್ಲಿ ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ.
ಇದನ್ನೂ ಓದಿ: ಟೆನಿಸ್: ಸಾನಿಯಾ ಮಿರ್ಜಾ ಭರ್ಜರಿ ಪುನರಾಗಮನ.
ದಾಖಲೆಯ 24ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್, 2ನೇ ಸುತ್ತಿನ ಪಂದ್ಯದಲ್ಲಿ ಸ್ಲೊವೇನಿಯಾದ ತಮಾರ ಜಿಡಾನ್ಸೆಕ್ ವಿರುದ್ಧ 6-2, 6-3 ಸೆಟ್‌ಗಳಲ್ಲಿ ಗೆದ್ದು 3ನೇ ಸುತ್ತು ಪ್ರವೇಶಿಸಿದರು. ವಿಶ್ವ ನಂ.1 ಆಶ್ಲೆ ಬಾರ್ಟಿ, 7ನೇ ಶ್ರೇಯಾಂಕಿತೆ ಪೆಟ್ರಾ ಕ್ವಿಟೋವಾ ಸಹ 3ನೇ ಸುತ್ತಿಗೇರಿದರು.
ಇದೇ ವೇಳೆ ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಚ್, ಜಪಾನ್‌ನ ತಟ್ಸುಮಾ ಇಟೊ ವಿರುದ್ಧ 6-1, 6-4, 6-2 ಸೆಟ್‌ಗಳಲ್ಲಿ ಗೆದ್ದು ಮುನ್ನಡೆದರು. ರೋಜರ್ ಫೆಡರರ್ ಸ್ಲೊವೇನಿಯಾದ ಕ್ರಾನ್ಜಿನೋವಿಚ್ ವಿರುದ್ಧ 6-1, 6-4, 6-1 ನೇರ ಸೆಟ್‌ಗಳಲ್ಲಿ ಜಯಗಳಿಸಿದರು.
ಇದನ್ನೂ ಓದಿ: 3 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಂಡ ಸೆರೆನಾ..!.
ಶರಣ್‌ಗೆ ಜಯ, ಬೋಪಣ್ಣಗೆ ಸೋಲು
ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಭಾರತದ ದಿವಿಜ್ ಶರಣ್ ಹಾಗೂ ನ್ಯೂಜಿಲೆಂಡ್‌ನ ಆರ್ಟೆಮ್ ಸಿಟಾಕ್ ಜೋಡಿ, ಮೊದಲ ಸುತ್ತಿನಲ್ಲಿ ಪೋರ್ಚುಗಲ್‌ನ ಜೊ ಸೌಸಾ ಹಾಗೂ ಸ್ಪೇನ್‌ನ ಪಾಬ್ಲೊ ಬುಸ್ಟಾವಿರುದ್ಧ 6-4, 7-5 ಸೆಟ್‌ಗಳಲ್ಲಿ ಗೆದ್ದು 2ನೇ ಸುತ್ತಿಗೆ ಪ್ರವೇಶಿಸಿದರೆ, ರೋಹನ್ ಬೋಪಣ್ಣ ಹಾಗೂ ಜಪಾನ್‌ನ ಯಸುಟಾಕ ಯುಚಿಯಾಮ ಜೋಡಿ ಅಮೆರಿಕದ ಮೈಕ್ ಹಾಗೂ ಬಾಬ್ ಬ್ರಿಯಾನ್ ಜೋಡಿ ವಿರುದ್ಧ 1-6, 6-3, 3-6 ಸೆಟ್‌ಗಳಲ್ಲಿ ಸೋಲುಂಡಿತು. ಬೋಪಣ್ಣ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಜತೆ ಕಣಕ್ಕಿಳಿಯಲಿದ್ದಾರೆ.