ಕೆನಡಾದಲ್ಲಿ ಅದ್ಧೂರಿ ಹವ್ಯಕ ಸಮ್ಮೇಳನ: ಕಲೆ, ಸಂಸ್ಕೃತಿ, ಇತಿಹಾಸ ಅನಾವರಣ
ಕೆನಡಾದಲ್ಲಿ ಅದ್ಧೂರಿ ಹವ್ಯಕ ಸಮ್ಮೇಳನ/ ಅಮೆರಿಕದಲ್ಲಿ ನೆಲೆಸಿರುವ ಹವ್ಯಕರಿಂದ ದ್ವೈವಾರ್ಷಿಕ ಸಮ್ಮೇಳನ ಆಯೋಜನೆ/ ಹವ್ಯಕ ಕಲೆ, ಸಂಸ್ಕೃತಿ, ಇತಿಹಾಸಕ್ಕೆ ಒತ್ತು ನೀಡುವ ಕಾರ್ಯಕ್ರಮಗಳ ಸಮ್ಮೇಳನ
ಬೆಂಗಳೂರು[ಜು. 23] ಉತ್ತರ ಅಮೆರಿಕದಲ್ಲಿ ನೆಲೆಸಿರುವ ಹವ್ಯಕ ಭಾಷಿಕರನ್ನು ಒಂದೆಡೆ ಸೇರಿಸಿ ಸಂಭ್ರಮಿಸುವ ದ್ವೈವಾರ್ಷಿಕ ಹವ್ಯಕ ಸಮ್ಮೇಳನ ಇತ್ತೀಚೆಗೆ ನಡೆಯಿತು. ಹವ್ಯಕ ಅಸೋಸಿಯೇಶನ್ ಆಫ್ ಅಮೆರಿಕ (HAA) ವತಿಯಿಂದ ಹಮ್ಮಿಕೊಳ್ಳಲಾಗುವ ಈ ಸಮ್ಮೇಳನ ಈ ಬಾರಿ ಕೆನಡಾದ ಒಂಟಾರಿಯೋ ರಾಜ್ಯದ ಟೊರಾಂಟೋದಲ್ಲಿ ನಡೆಯಿತು.
ಎರಡು ದಿನಗಳ ಕಾಲ ನಡೆದ ‘ಹಾ’ ಸಮ್ಮೇಳನದಲ್ಲಿ ಹವ್ಯಕ ಸಮುದಾಯದ ಕಲೆ, ಸಂಸ್ಕೃತಿ, ಇತಿಹಾಸ, ಆಹಾರ ಇತ್ಯಾದಿಗಳಿಗೆ ಒತ್ತು ನೀಡಲಾಗಿತ್ತು. ಯುಎಸ್ಎ, ಕೆನಡಾ ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾದಿಂದಲೂ ಆಗಮಿಸಿದ್ದ ಹವ್ಯಕರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಇದೇ ಮೊದಲ ಬಾರಿಗೆ ಕೆನಡಾದಲ್ಲಿ ಆಯೋಜನೆಗೊಂಡಿದ್ದ ‘ಹಾ’ ಸಮ್ಮೇಳನದಲ್ಲಿ ಸುಮಾರು 450ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಮುಂದಿನ ದ್ವೈವಾರ್ಷಿಕ ಹವ್ಯಕ ಸಮ್ಮೇಳವನ್ನು 2021ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲಿ ಹಮ್ಮಿಕೊಳ್ಳುವುದೆಂದು ಇದೇ ಸಂದ‘ರ್ದಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.
ಯುವ ಶಿಬಿರ: ಇದೇ ಮೊದಲ ಬಾರಿಗೆ ಹವ್ಯಕ ಸಮ್ಮೇಳನದ ಸಂದ‘ರ್ದಲ್ಲಿ ಯುವ ಶಿಬಿರ ಏರ್ಪಡಿಸಲಾಗಿತ್ತು. ಜು.4ರಂದು ಹವ್ಯಕ ಯುವಕ-ಯುವತಿಯರು ಈ ಶಿಬಿರದಲ್ಲಿ ಪಾಲ್ಗೊಂಡು ಉಭಯ ಕುಶಲೋಪರಿ ನಡೆಸಿದರು. ಅಲ್ಲದೆ, ಟೊರಾಂಟೋ ನಗರದಲ್ಲಿ ಜಿಪ್ಲೈನ್ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಂಡರು.
ಹಾ ಸಮ್ಮೇಳನ: ಜು.5ರಂದು ‘ಹಾ’ ಸಮ್ಮೇಳನದ ಮುಖ್ಯ ಕಾರ್ಯಕ್ರಮ ಜರುಗಿತು. ಬೆಳಗ್ಗೆ ಹವ್ಯಕ ಅತಿಥಿಗಳಿಗಾಗಿ ಪಿಕ್ನಿಕ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಜೆ ವೇದಘೋಷ ಸಹಿತ ಗಣಪತಿ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ‘ಹಾ’ ಅಧ್ಯಕ್ಷ ಡಾ.ಪರಮೇಶ್ವರ ಭಟ್, ಹವ್ಯಕ ಸಮುದಾಯದ ಗುರು ಪರಂಪರೆ, ಸಮಾಜ ಸೇವಾ ಕೈಂಕರ್ಯಗಳು, ಸಂಸ್ಕೃತಿಯ ಪೋಷಣೆ ಅನನ್ಯವಾದುದು. ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಬೆಳೆಸುವ ಕೆಲಸವಾಗಬೇಕು ಎಂದು ಆಶಯಿಸಿದರು.
ಇದೇ ವೇಳೆ, ‘ಹವ್ಯಸಿರಿ’ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕೆನಡಾ ಸಂಸದ ಚಂದ್ರಶೇಖರ್ ಆರ್ಯ, ಬೆಂಗಳೂರಿನ ಹವ್ಯಕ ಮಹಾಸಭಾದ ಶ್ರೀಧರ ಭಟ್ ಕೆಕ್ಕಾರು, ಡಾ.ರಾಮಚಂದ್ರ ಹೊಸಮನೆ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ಹಾ ಸಮ್ಮೇಳನದ ಬಹುಪಾಲು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿತ್ತು. ಬೆಂಗಳೂರಿನಿಂದ ಆಗಮಿಸಿದ್ದ ಹಿರಿಯ ಗಾಯಕಿ ರತ್ನಮಾಲಾ ಪ್ರಕಾಶ್ ಹಾಗೂ ಗಾಯಕ ಪಂಚಮ್ ಹಳಿಬಂಡಿ ಅವರು ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಭಾವಗೀತೆ, ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳನ್ನು ಹಾಡಿ ರಂಜಿಸಿದರು. ಭಾರತದಿಂದ ಆಗಮಿಸಿದ್ದ ತೋಟಮನೆ ಗಣಪತಿ ಭಟ್ ಹಾಗೂ ಸಂಜಯ ಬೆಳೆಯೂರ್ ಅವರೊಡಗೂಡಿ ಟೊರಾಂಟೋದ ಯಕ್ಷಮಿತ್ರ ತಂಡ ‘ಕಾರ್ತವೀರ್ಯಾರ್ಜುನ’ ಎಂಬ ಯಕ್ಷಗಾನವನ್ನು ಪ್ರದರ್ಶಿಸಿತು.
ವಿದುಷಿ ರಾಧಾ ದೇಸಾಯಿ ಅವರಿಂದ ಹಿಂದುಸ್ಥಾನಿ ಗಾಯನ ಹಾಗೂ ಭಗವದ್ಗೀತಾ ವಾಚನ ನಡೆಯಿತು. ಶ್ರೀ ವಿನಾಯಕ ಹೆಗಡೆ ಅವರ ನೇತೃತ್ವದಲ್ಲಿ ಯೂಥ್ ಸಿಂಫೊನಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಲಯ ಗಾನ ಲಾಸ್ಯ ಎಂಬ ಹಿಂದುಸ್ಥಾನಿ ಹಾಗೂ ಯಕ್ಷಗಾನ ಭಾಗವತಿಕೆಯ ಜುಗಲ್ಬಂದಿ ಕಾರ್ಯಕ್ರಮ ಜನರ ಮನರಂಜಿಸಿತು. ಪಂಡಿತ್ ಗೋಪಾಲ ಕೃಷ್ಣ ಹೆಗಡೆ ತಬಲ, ಅನಂತ ಹೆಗಡೆ ದಂಟಳಿಗೆ ಭಾಗವತಿಕೆ, ಶಂಕರ ಭಾಗವತ್ ಯಲ್ಲಾಪುರ ಮದ್ದಳೆ ಹಾಗೂ ವಿನಾಯಕ ಹೆಗಡೆ ಹಾರ್ಮೋನಿಯಂ ವಾದನ ಮಾಡಿದರು. ಇದಲ್ಲದೆ, ಯುವ ಪ್ರತಿಭಾ ಪ್ರದರ್ಶನ, ಭರತನಾಟ್ಯ, ಸಿನಿಮಾ ನೃತ್ಯ ಮತ್ತಿತರೆ ವೈವಿಧ್ಯಮಯ ಕಾರ್ಯಕ್ರಮಗಳೂ ಪ್ರದರ್ಶನಗೊಂಡವು.
ವರದಿ: ಅಂಜಲಿ ಶರ್ಮಾ