Asianet Suvarna News Asianet Suvarna News

ದುಬೈನಲ್ಲಿ ರಂಗ ಸಂಘಟಕ ಗುಂಡಣ್ಣಗೆ ಶ್ರೀರಂಗ ಪ್ರಶಸ್ತಿ

ದುಬೈನ ಧ್ವನಿ ಪ್ರತಿಷ್ಠಾನ ಪ್ರತಿ ವರ್ಷವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಶ್ರೀರಂಗ ಪ್ರಶಸ್ತಿ ಕೊಡುತ್ತಾ ಬಂದಿದೆ. ಈ ತನಕ ಬಿ. ಜಯಶ್ರೀ, ಟಿ.ಎಸ್‌ ನಾಗಭರಣ, ಶ್ರೀನಿವಾಸ ಕಪ್ಪಣ್ಣ, ಮುಖ್ಯಮಂತ್ರಿ ಚಂದ್ರು, ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಡಾ.ಎಚ್‌.ಎಸ್‌. ಶಿವಪ್ರಕಾಶ್‌, ಉಮಾಶ್ರೀ, ಡಾ. ನಾ.ದಾ. ಶೆಟ್ಟಿ, ಗಿರಿಜಾ ಲೋಕೇಶ್‌ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಈಗ ಹತ್ತನೆಯವರಾಗಿ ನಟ, ರಂಗ ಸಂಘಟಕ ಸಿ.ಕೆ. ಗುಂಡಣ್ಣ ಅವರು ದುಬೈನ ಎಮಿರೇಟ್ಸ್‌ ಥಿಯೇಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.

Theater artist C K Gundanna receives Sriranga Award in Dubai
Author
Bengaluru, First Published Mar 2, 2019, 9:45 PM IST

ದುಬೈನ ಧ್ವನಿ ಪ್ರತಿಷ್ಠಾನ ಪ್ರತಿ ವರ್ಷವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಶ್ರೀರಂಗ ಪ್ರಶಸ್ತಿ ಕೊಡುತ್ತಾ ಬಂದಿದೆ. ಈ ತನಕ ಬಿ. ಜಯಶ್ರೀ, ಟಿ.ಎಸ್‌ ನಾಗಭರಣ, ಶ್ರೀನಿವಾಸ ಕಪ್ಪಣ್ಣ, ಮುಖ್ಯಮಂತ್ರಿ ಚಂದ್ರು, ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಡಾ.ಎಚ್‌.ಎಸ್‌. ಶಿವಪ್ರಕಾಶ್‌, ಉಮಾಶ್ರೀ, ಡಾ. ನಾ.ದಾ. ಶೆಟ್ಟಿ, ಗಿರಿಜಾ ಲೋಕೇಶ್‌ ಈ ಪ್ರಶಸ್ತಿಗೆ ಭಾಜನರಾಗಿದ್ದರು.

ಈಗ ಹತ್ತನೆಯವರಾಗಿ ನಟ, ರಂಗ ಸಂಘಟಕ ಸಿ.ಕೆ. ಗುಂಡಣ್ಣ ಅವರು ದುಬೈನ ಎಮಿರೇಟ್ಸ್‌ ಥಿಯೇಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಮುದಾಯ ರಂಗತಂಡವನ್ನು ಕಟ್ಟುವಲ್ಲಿ, ಹಲವು ಆಯಾಮದ ರಂಗಪ್ರಯೋಗಗಳನ್ನು ಹಳ್ಳಿ ಹಳ್ಳಿಗೂ ತಲುಪುವಂತೆ ಮಾಡುವಲ್ಲಿ ಇವರ ಶ್ರಮ ಅಪಾರ. ಇಲ್ಲಿ ಅವರ ನಾಲ್ಕು ದಶಕದ ರಂಗಯಾನದ ಬಗ್ಗೆ ಅವರೇ ಮಾತನಾಡಿದ್ದಾರೆ.

ನಾನು ನಟನಾಗಿ ರಂಗಭೂಮಿಗೆ ಪ್ರವೇಶ ಮಾಡಿದ್ದು, ಆದರೆ ಹೆಚ್ಚಾಗಿ ಕಾಣಿಸಿಕೊಂಡದ್ದು ತೆರೆಯ ಹಿಂದೆ ಮತ್ತು ಸಂಘಟನೆಯಲ್ಲಿ. ಇದಕ್ಕೆ ಕಾರಣ ಹಲವಾರು. ಸಮುದಾಯ ಪ್ರಾರಂಭಮಾಡಿದ್ದ ಪ್ರಸನ್ನ ಅವರಾದರೂ, ಕಿರಂ ನಾಗರಾಜು, ಮರುಳಸಿದ್ದಪ್ಪ, ಶೂದ್ರ ಶ್ರೀನಿವಾಸ್‌, ಕಾವ್ಯಂ ರಾಜಗೋಪಾಲ್‌, ನಿಸಾರ್‌ ಅಹಮದ್‌ ಮೊದಲಾದವರು ಇದರ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿದ್ದಾರೆ.

ಮುಖ್ಯವಾಗಿ ಅಂದು ಮತ್ತು ಇಂದು ನಮ್ಮೆಲ್ಲರ ಪ್ರದಾನ ಆಶಯ ರಂಗಭೂಮಿಯಿಂದ ಮೌಲ್ಯಗಳನ್ನು ಬಿತ್ತುವ ಕಾರ್ಯವಾಗಬೇಕು ಎನ್ನುವುದು. ಅದನ್ನು ನಾವು ಮಾಡುತ್ತಾ ಬಂದಿದ್ದೇವೆ.

70ರ ದಶಕದಲ್ಲಿ ಮೌಲ್ಯಯುತ ನಾಟಕಗಳು ಸಾಕಷ್ಟುರಚನೆಯಾದವು, ಹಲವು ಸಂಘಟನೆಗಳು ಹುಟ್ಟಿದವು. ನಾಟಕಗಳನ್ನು ರಂಗಕ್ಕೆ ಇಳಿಸುತ್ತಿದ್ದವು. ಆದರೆ ಸೂಕ್ತ ಸಂಘಟನೆಯ ಕೊರತೆ ಎದ್ದು ಕಾಣುತ್ತಿತ್ತು. ಇದರ ಕಾರಣವಾಗಿಯೂ ನಾನು ಸಂಘಟನೆಯತ್ತ ಮುಖ ಮಾಡಬೇಕಾಯಿತು.

ಇದೇ ವೇಳೆ ನಮಗೆ ಎದುರಾದ ದೊಡ್ಡ ಸವಾಲು ಎಂದರೆ ಸಮುದಾಯ ತಂಡವನ್ನು ಅನಾವಶ್ಯಕವಾಗಿ ಎಡಪಂಥೀಯ ಚಿಂತನೆ ಬಿತ್ತುವ ತಂಡ ಎನ್ನುವ ಅಪಪ್ರಚಾರ ಹಬ್ಬಿತು. ಇದರಿಂದ ನಮಗೆ ಯಾವುದೇ ರೀತಿಯ ಸರಕಾರಿ ಬೆಂಬಲ ಸಿಗಲಿಲ್ಲ. 1975ರಲ್ಲಿ ತರ್ತು ಪರಿಸ್ಥಿತಿ ಇತ್ತು. ನಮ್ಮ ಸಮುದಾಯ ತಂಡ ಹುಟ್ಟಿದ್ದೂ ಅವಾಗಲೇ. ಆಗ ಬ್ರೆಕ್ಟ್ನ ‘ಸ್ಥಾಯಿ’ ನಾಟಕ ಮಾಡಿ ಅಲ್ಲಿ ಕೆಂಪು ಬಾವುಟವನ್ನು ತೋರಿಸಬೇಕಾಗಿತ್ತು.

ಇದನ್ನು ಮಾಡಿದ್ದಕ್ಕಾಗಿ ನಮಗೆ ಚೀನಾದಿಂದ ಹಣ ಬರುತ್ತದೆ, ರಷ್ಯಾದಿಂದ ಹಣ ಬರುತ್ತದೆ ಎನ್ನುವ ಅಪಪ್ರಚಾರ ಶುರುವಾಯಿತು. ಆದರೆ ನಾವು ಅಂದು ಗಟ್ಟಿಯಾಗಿ ಸಾರಿ ಹೇಳಿದೆವು ನಾವು ಯಾವುದೇ ಪಂಥಗಳಿಗೆ ಸೇರಿದವರಲ್ಲ. ನಮ್ಮದು ಏನಿದ್ದರೂ ಪ್ರಗತಿಪರ ದೃಷ್ಟಿಕೋನ. ಅದಕ್ಕೆ ಪೂರಕವಾದ ಕಾರ್ಯ ಮಾಡುತ್ತೇವೆ ಎಂದ.

ನನಗೆ ಅನ್ನಿಸಿದ ಹಾಗೆ 75 ರಿಂದ 85ರ ಒಂದು ದಶಕದ ಅವಧಿ ಕನ್ನಡ ರಂಗಭೂಮಿಯ ಸುವರ್ಣ ಯುಗ. ದಿನವೂ ಒಂದಿಲ್ಲೊಂದು ಕಡೆ ರಂಗಚಟುವಟಿಕೆಗಳು ಚೆನ್ನಾಗಿ ಮೂಡುತ್ತಿದ್ದವು. ಎಲ್ಲಾ ಕಡೆ ರಂಗ ತಂಡಗಳಳು ಹುಟ್ಟಿಕೊಂಡವು. ಆ ಸಮಯದಲ್ಲಿ ಸಂಘಟಕರಾಗಿ ನಮ್ಮ ಜವಾಬ್ದಾರಿ ಹೆಚ್ಚಿತ್ತು.

1979ರಲ್ಲಿ ‘ಹೊಸ ಮೌಲ್ಯಗಳತ್ತ ಸಮುದಾಯ ಸಾಂಸ್ಕೃತಿಕ ಜಾಥಾ’ ಎಂದು ಹೊಸ ನಿಟ್ಟಿನ ಕಾರ್ಯಕ್ರಮ ಮಾಡಿದೆವು. ಯುವಕರು ತುಂಬಾ ಉತ್ಸಾಹದಿಂದ ನಮ್ಮ ಜೊತೆ ಸೇರಿದರು. ಈ ನಿಟ್ಟಿನಲ್ಲಿ ಸಮುದಾಯ ಬೆಳೆಯುತ್ತಾ ಸಾಗಿತು. ನಾಟಕಗಳು ಬೆಂಗಳೂರಿನ ಆಚೆ ತಲುಪಿದವು. ನಾವು ಪ್ರಗತಿಪರ, ಮಹಿಳಾಪರ, ಜೀವಪರ ಚಿಂತನೆಗಳನ್ನು ಬಿತ್ತುವಂತಹ ಸಾಕಷ್ಟುನಾಟಕವನ್ನು ಮಾಡಿದೆವು.

ಆದರೆ ಇಂದಿನ ರಂಗಭೂಮಿಯ ಸಂದರ್ಭದಲ್ಲಿ ನಿರೀಕ್ಷಿತ ಮಟ್ಟದ ಕೆಲಸಗಳು ಆಗುತ್ತಿಲ್ಲ ಅನ್ನಿಸುತ್ತದೆ. ಇದಕ್ಕೆ ನಿರ್ಧಿಷ್ಟವಾದ ಕಾರಣವನ್ನು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಇದೆಲ್ಲದರ ಮಧ್ಯದಲ್ಲೂ ವಿದೇಶದಲ್ಲಿ ಇರುವಂತಹ ನಮ್ಮವರು ಸಾಕಷ್ಟುಭಿನ್ನವಾದ ಕಲಾ ಜಗತ್ತನ್ನು ಕಟ್ಟುತ್ತಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ನಿಜವಾಗಿಯೂ ಕಾಣುತ್ತಿರುವ ಒಳ್ಳೆಯ ಬೆಳವಣಿಗೆ. ದುಬೈನಲ್ಲಿ ಪ್ರಕಾಶ್‌ ಪೈ ಎನ್ನುವವರು ಅಲ್ಲಿರುವ ಕನ್ನಡಿಗರನ್ನು ಸೇರಿಸಿಕೊಂಡು ‘ಧ್ವನಿ ಪ್ರತಿಷ್ಠಾನ’ ಕಟ್ಟಿದ್ದಾರೆ.

ಇದು ಸಾಕಷ್ಟುಸಾಂಸ್ಕೃತಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಶ್ರೀರಂಗರ ಹೆಸರಲ್ಲಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರತಿ ವರ್ಷ ಪ್ರಶಸ್ತಿ ಕೊಡುತ್ತಾ ಬಂದಿದೆ. ಇದನ್ನು ಪಡೆದವರಲ್ಲಿ ನಾನು ಹತ್ತನೇಯವನು.

ದುಬೈನ ಎಮಿರೇಟ್ಸ್‌ ಥಿಯೇಟರ್‌ನಲ್ಲಿ ನಾನು ಪ್ರಶಸ್ತಿ ಪಡೆದಾಗ ಸುಮಾರು ಎರಡು ಸಾವಿರದಷ್ಟುಮಂದಿ ಇದ್ದರು. ಜೊತೆಗೆ ಬೆಂಗಳೂರು ಅಥವಾ ನಮ್ಮ ನೆಲದಲ್ಲಿಯೇ ಮೃಚ್ಛಕಟ್ಟಿಕ ನಾಟಕ ಮಾಡುವುದು ಸವಾಲು. ಆದರೆ ಅವರು ತುಂಬಾ ಚೆನ್ನಾಗಿ ಮಾಡಿ ಸೈ ಎನ್ನಿಸಿಕೊಂಡರು. ಇದು ಹೊರ ನಾಡಿನಲ್ಲಿ ಇರುವ ಕನ್ನಡಿಗರು ತಮ್ಮ ಪ್ರತಿಭೆಯನ್ನು ಮಾತೃಭಾಷೆಯಲ್ಲಿಯೇ ಹೊರ ಹಾಕಲು ತುಂಬಾ ಅನುಕೂಲ. ಇದು ಯಾವಾಗಲೂ ಆಗುತ್ತಲೇ ಇರಬೇಕಾದರ ಕಾರ್ಯ.

Follow Us:
Download App:
  • android
  • ios