ದಾಬಸ್‌ಪೇಟೆ: ಬಿಬಿಎಂ ಮತ್ತು ಎಂಬಿಎ ಪದವಿ ಪಡೆದಿರುವ ಕುದುರಗೆರೆ ಗ್ರಾಮದ ರವಿಕುಮಾರ್‌ ಇಂಗ್ಲೇಂಡ್‌ನಲ್ಲಿ ಪ್ರಿನ್ಸಿಪಾಲ್‌ ಕನ್ಸಲ್ಟೆಂಟ್‌(ಐಟಿ) ಆಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರು ಉತ್ತರ ಜಿಲ್ಲೆಯ ಕುದುರಗೆರೆ ಗ್ರಾಮದ ಕೆ.ಆರ್‌.ವೆಂಟೇಶ್‌ ಮತ್ತು ರಮಾದೇವಿ ಅವರ ಮಗ ರವಿಕುಮಾರ್‌. ಇವರು ಕನ್ನಡ ವಿಷಯಗಳು ಡಿಜಿಟಲ್‌ ಆಗಲು ಹತ್ತು ವರ್ಷದ ಹಿಂದೆ (ನೋಡು ಮಗ ಡಾಟ್‌ ಕಾಂ) ವೆಬ್‌ ತಾಣ ಆರಂಭಿಸಿದ್ದರು. ಯುಕೆಯಲ್ಲಿ ಕನ್ನಡಿಗರನ್ನು ಒಗ್ಗೂಡಿಸಿ ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡದ ಮೇಲಿನ ಪ್ರೀತಿ ಮತ್ತು ಅಭಿಮಾನ ತೋರುತ್ತಾ ಬಂದಿದ್ದಾರೆ. ಯುಕೆಯ ಲೇಬರ್‌ ಪಾರ್ಟಿಯ ನಾರ್ಥ್ ಸ್ಪಿಂಡನ್‌ ಎಂಪಿ ಕ್ಷೇತ್ರದ ಮುಖಂಡರಾಗಿ ಅದೇ ಕ್ಷೇತ್ರದ ಸಂಚಾಲಕರಾಗಿದ್ದು ಇವರಿಗೆ ಕೌನ್ಸಿಲರ್‌ ಆಗಲು ನೆರವಾಗಿದೆ.

13 ವರ್ಷದಿಂದ ಅಲ್ಲಿಯೇ ಕಾಯಂ ವಾಸಿಯಾಗಿ ನೆಲೆಸಿದ್ದಾರೆ. ಇವರಿಗೆ ಅಲ್ಲಿನ ಪೌರತ್ವ ಸಿಗುವ ಎಲ್ಲಾ ಅರ್ಹತೆಗಳಿದ್ದರೂ, ಅದನ್ನು ನಿರಾಕರಿಸಿ ಭಾರತದ ಪೌರರಾಗಿಯೇ ಉಳಿಯಲು ಇಚ್ಚಿಸಿ ದೇಶಪ್ರೇಮ ಮೆರೆದಿದ್ದಾರೆ. ಕೌನ್ಸಿಲರ್‌ ಆಗಿ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ಇಲ್ಲಿ ನೆಲೆಸಿರುವ ಕನ್ನಡಿಗರ ಅಭಿವೃದ್ಧಿಗೆ ಮತ್ತು ನಮ್ಮ ಕನ್ನಡ ಭಾಷೆ ಏಳ್ಗೆಗೆ ಶ್ರಮಿಸುವೆ ಎಂದಿದ್ದಾರೆ.