ಬಸವರಾಜ ಹಿರೇಮಠ

ಧಾರವಾಡ(ಆ.19): ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದ ಸಿಹಿಸುದ್ದಿ ಬೆನ್ನಲ್ಲೇ ಗಣೇಶ ಮೂರ್ತಿಯ ಖರೀ​ದಿ​ದಾ​ರ​ರಿ​ಲ್ಲದೆ ಸಂಕಷ್ಟದಲ್ಲಿದ್ದ ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಅವರಿಗೆ ಅನಿ​ವಾಸಿ ಭಾರ​ತೀ​ಯರು ನೆರ​ವಿನ ಹಸ್ತ ನೀಡಲು ಮುಂದಾ​ಗಿ​ದ್ದಾರೆ. ಮಂಜು​ನಾಥ್‌ ತಯಾರಿಸಿದ ಒಟ್ಟಾರೆ 6 ಲಕ್ಷ ರು. ಮೌಲ್ಯದ ಬೃಹತ್‌ ಗಣೇಶ ಮೂರ್ತಿಗಳನ್ನು ಖರೀದಿಸಲು ನಿರ್ಧ​ರಿ​ಸಿ​ದ್ದಾ​ರೆ.

ಗಣೇಶ ಮೂರ್ತಿ​ಗ​ಳನ್ನು ಕೊಳ್ಳು​ವ​ವ​ರಿ​ಲ್ಲದೆ ಕಂಗಾ​ಲಾ​ಗಿ ಆತ್ಮ​ಹತ್ಯೆ ಮಾಡಿ​ಕೊ​ಳ್ಳು​ವು​ದಾಗಿ ಹೇಳಿ​ಕೊಂಡಿದ್ದ ಕಲಾ​ವಿದ ಮಂಜು​ನಾಥ ಈಗ ನಿರಾ​ಳ​ರಾ​ಗಿ​ದ್ದಾ​ರೆ. ಅಮೆರಿಕ, ಆಸ್ಪ್ರೇಲಿಯಾ, ಬಹರೈನ್‌ ಮತ್ತಿ​ತರ ದೇಶಗಳಲ್ಲಿನ ಅನಿವಾಸಿ ಭಾರತೀಯರು ಮಂಜುನಾಥ ಹಿರೇಮಠ ಅವರ ಸಂಕ​ಷ್ಟಕ್ಕೆ ಸ್ಪಂದಿ​ಸಿದ್ದು, ಈಗಾಗಲೇ ಎರಡ್ಮೂರು ಬಾರಿ ಜೂಮ್‌ ಮೀಟಿಂಗ್‌ ಮಾಡಿ​ ಧೈರ್ಯ ತುಂಬಿದ್ದಾರೆ. ಗಣೇಶ ಮೂರ್ತಿ​ಗ​ಳನ್ನು ಕೊಳ್ಳುವ ಭರ​ವಸೆ ನೀಡಿ​ದ್ದಾ​ರೆ.

ಗಣಪತಿ ಹೋಗಲಿಲ್ಲಾಂದ್ರ ಇದೇ ಕೊನೆಯ ಗಣೇಶೋತ್ಸವ: ಆತ್ಮಹತ್ಯೆಗೆ ನಿರ್ಧರಿಸಿದ ಕಲಾವಿದನ ಕುಟುಂಬ

ವರ್ಚುವಲ್‌ ಗಣೇಶೋತ್ಸವ: 

ಕೊರೋನಾ ಹಿನ್ನೆ​ಲೆ​ಯಲ್ಲಿ ಈ ಬಾರಿ ವರ್ಚುವಲ್‌ ಗ್ಲೋಬಲ್‌ ಗಣೇಶೋತ್ಸವ ಆಚರಿಸಲು ಅನಿವಾಸಿ ಭಾರತೀಯರು ನಿರ್ಧ​ರಿ​ಸಿ​ದ್ದಾರೆ. ಅದ​ರಂತೆ ಗಣೇಶ ಮೂರ್ತಿಗಳನ್ನು ಮಂಜುನಾಥ ಅವರೇ 5 ದಿನಗಳ ಕಾಲ ಪೂಜೆ ಸಲ್ಲಿಸಿ ಕೊನೇ ದಿನ ವಿಸರ್ಜಿಸಲು ಯೋಜನೆ ರೂಪಿಸಲಾಗಿದೆ. ಗಣೇಶ ಮೂರ್ತಿಯ ನೇರ ದರ್ಶನ, ನಿತ್ಯದ ಪೂಜೆ ಹಾಗೂ ವಿಸರ್ಜನೆ ಎಲ್ಲವೂ ಯ್ಯೂಟ್ಯೂಬ್‌ ಚಾನಲ್‌ ಮೂಲಕ ಪ್ರಸಾ​ರಕ್ಕೆ ನಿರ್ಧಾರ ತೆಗೆ​ದು​ಕೊ​ಳ್ಳ​ಲಾ​ಗಿ​ದೆ.

ವಿಡಿಯೋ ವೈರಲ್‌: 

ಆರ್ಥಿಕ ಸಂಕ​ಷ್ಟದ ಹಿನ್ನೆಲೆಯಲ್ಲಿ ಮಂಜು​ನಾಥ್‌ ಅವರು ಕುಟುಂಬದ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ​ಬಿ​ಟ್ಟಿ​ದ್ದ​ರು. ಈ ವಿಡಿಯೋ ವೈರಲ್‌ ಆಗಿ​ದ್ದಷ್ಟೇ ಅಲ್ಲದೆ, ಆ.17ರಂದು ‘ಕನ್ನಡಪ್ರಭ’ ಸಹ ‘ಗಣೇಶ ಮೂರ್ತಿ ಕಲಾವಿದರಿಗೆ ಸಂಕಷ್ಟ-ವಿಡಿಯೋ ವೈರಲ್‌’ ಎಂಬ ವರದಿ ಮಾಡಿತ್ತು. ವೈರಲ್‌ ಆದ ವಿಡಿಯೋ ಹಾಗೂ ಕನ್ನಡ​ಪ್ರ​ಭದ ವರದಿ ಗಮನಿಸಿದ ಸಾಕಷ್ಟುಮಂದಿ ಈಗ ಕಲಾ​ವಿ​ದನ ಸಂಕ​ಷ್ಟಕ್ಕೆ ಮಿಡಿ​ಯಲು ಮುಂದಾ​ಗಿ​ದ್ದಾ​ರೆ.

ಚೌತಿ ನಿಮಿತ್ತ ಗಣೇಶ ಮಂಡಳಿಗಳ ಆರ್ಡರ್‌ ಮೇರೆಗೆ 10 ತಿಂಗಳಿಂದ ಮಂಜುನಾಥ ಅವ​ರು 50ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಲಕ್ಷಾಂತರ ರು. ವೆಚ್ಚ ಮಾಡಿ ಸಿದ್ಧಪಡಿಸಿದ್ದರು. ಆದರೆ, ಕೋವಿಡ್‌ ಕಾರಣದಿಂದ ಸಾರ್ವಜನಿಕ ಗಣೇಶೋತ್ಸವವನ್ನು ಸರ್ಕಾರ ನಿಷೇ​ಧಿ​ಸಿ​ದ್ದ​ರಿಂದ ಆರ್ಡರ್‌ ಕ್ಯಾನ್ಸಲ್‌ ಆಗಿ ಮಂಜುನಾಥ ಆರ್ಥಿಕ ಸಂಕ​ಷ್ಟಕ್ಕೆ ಸಿಲು​ಕಿ​ದ್ದ​ರು. ಇದ​ರಿಂದ ಮನ​ನೊಂದಿದ್ದ, ಗಣೇಶ ಕೈಬಿ​ಡ​ಲಿ​ಲ್ಲ- ಶ್ರಮಪಟ್ಟು ಮೂರ್ತಿಗಳನ್ನು ತಯಾರಿಸಿದ್ದು, ಕೊಳ್ಳು​ವ​ವ​ರಿ​ಲ್ಲದೆ ಮನಸ್ಸಿಗೆ ತುಂಬ ಬೇಸರವಾಗಿತ್ತು. ನನ್ನ ಬೇಸರವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದೆ. ಆದರೆ ಅದು ನನ್ನೆಲ್ಲ ಸಂಕಷ್ಟಗಳನ್ನು ಪರಿಹರಿ​ಸ​ಲಿದೆ ಎಂದು ಅಂದು​ಕೊಂಡಿ​ರ​ಲಿಲ್ಲ ಎಂದು ಮಂಜುನಾಥ ಹೇಳಿ​ದ್ದಾ​ರೆ.

ರಾಜ್ಯ, ಹೊರ ರಾಜ್ಯ ಹಾಗೂ ವಿದೇಶದ​ಲ್ಲಿ​ರುವ ನಮ್ಮ​ವರು ಕರೆ ಮಾಡಿ ಆರ್ಥಿಕ ಸಹಕಾರಕ್ಕೆ ಮುಂದಾ​ಗಿ​ದ್ದಾ​ರೆ. ಆದರೆ, ಅವ​ರಿಂದ ಹಣ ಪಡೆಯಲು ಮನಸ್ಸಾಗಲಿಲ್ಲ. ಬದಲಾಗಿ ಮೂರ್ತಿಗಳನ್ನು ಖರೀದಿಸಿ ಎಂದು ಮನವಿ ಮಾಡಿಕೊಂಡೆ. ಅಮೆರಿಕದಲ್ಲಿರುವ ಶಿವು ವಿಭೂತಿ, ಶುಭಾ ಬೆನ್ನೂರ ಎಂಬವರು ಇದಕ್ಕಾಗಿಯೇ ತಮ್ಮ ಸ್ನೇಹಿತರ ಗುಂಪು ರಚಿಸಿಕೊಂಡು ಅಂದಾಜು .6 ಲಕ್ಷ ಮೊತ್ತದ 40 ದೊಡ್ಡ ಗಣೇಶ ಮೂರ್ತಿಗಳನ್ನು ಕೊಳ್ಳಲು ತೀರ್ಮಾನಿಸಿದ್ದಾರೆ. ಕೊನೆಗೂ ನನ್ನ ಪ್ರಕಾರ ಧರ್ಮ ಗೆದ್ದಿತು. ಕೈಗೆ ಕೆಲಸ ನೀಡಿದ ಗಣೇಶ ಕೊರೋನಾ ಸಂಕಷ್ಟದಲ್ಲೂ ನನ್ನ ಕೈಬಿಡಲಿಲ್ಲ ಎಂದೆ​ನಿ​ಸು​ತ್ತ​ದೆ ಎನ್ನು​ತ್ತಾರೆ ಮಂಜು​ನಾ​ಥ.

ಹೊರ ದೇಶಗಳಲ್ಲಿದ್ದರೂ ಭಾರತೀಯ ಸಂಸ್ಕೃತಿ, ಹಬ್ಬದಾಚರಣೆ ಬಿಟ್ಟಿರುವುದು ಸಾಧ್ಯ​ವಿಲ್ಲ. ನಮಗೂ ಗಣೇಶ ಹಬ್ಬ ಮಾಡುವ ಆಸೆ ಇದ್ದರೂ ಇಲ್ಲಿ ಸಾಧ್ಯವಿಲ್ಲ. ಆದ್ದರಿಂದ ಮಂಜುನಾಥ ಅವರಿಗೆ ಸಹಾಯವೂ ಆಗ​ಬೇಕು, ನಾವು ಹಬ್ಬ ಮಾಡಿದಂತೆಯೂ ಆಗ​ಬೇಕು ಎಂದು ವರ್ಚುವಲ್‌ ಗ್ಲೋಬಲ್‌ ಗಣೇಶೋತ್ಸವದ ಯೋಜನೆ ರೂಪಿಸಲಾಗಿದೆ. ಯ್ಯೂಟ್ಯೂಬ್‌ ಮೂಲಕ ಗಣೇಶ ದರ್ಶನ, ಪೂಜೆ, ವಿಸರ್ಜನೆ ಕಣ್ತುಂಬಿಕೊಳ್ಳುತ್ತೇವೆ ಎಂದು ಅನಿವಾಸಿ ಭಾರತೀಯರು ಶುಭಾ ಬೆನ್ನೂರ ಅವರು ತಿಳಿಸಿದ್ದಾರೆ.