ಬೆಂಗಳೂರು(ಆ. 18)  ಕನ್ನಡಿಗರನ್ನು ಬೆಸೆಯುವ ನಾವಿಕ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ವಿಶ್ವಾದ್ಯಂತ ನೆಲೆಸಿರುವ ಕನ್ನಡಿಗರ ಮನೆ ಬಾಗಿಲಿಗೆ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನುತರಲು ಕೊರೋನಾ ಅಡೆತಡೆಗಳ ನಡುವೆಯೂ ಅಮೆರಿಕದ ನಾವಿಕ ತಂಡ ಸರ್ವ ರೀತಿಯಿಂದ ಸಜ್ಜಾಗಿದೆ. 

ಆಗಸ್ಟ್ 24 ರಿಂದ ವಿವಿಧ ಕಲಾಪ್ರಕಾರಗಳ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಶುರುವಾಗಲಿದ್ದು 3 ದಿನಗಳ ಕಾಲ ಕಾರ್ಯಕ್ರಮಗಳು ನಡೆಯಲಿವೆ.ಅಮೆರಿಕ ಕಾಲಮಾನದ ಪ್ರಕಾರ ಶುಕ್ರವಾರ ಸಂಜೆಯಿಂದ ಈ ಎಲ್ಲ ಕಾರ್ಯಕ್ರಮಗಳು ವರ್ಚುಯಲ್ಲಾಗಿ ನೇರಪ್ರಸಾರದಲ್ಲಿ ನಾವಿಕ ವೆಬ್‌ಸೈಟಿನಲ್ಲಿ ಲಭ್ಯವಾಗಲಿವೆ. ಭಾರತದ ಕಾಲಮಾನದ ಪ್ರಕಾರ 29 ಮತ್ತು 30ರಂದು ಇಲ್ಲಿನ ಜನತೆ ವೀಕ್ಷಿಸಬಹುದು. 5 ಗಂಟೆಗಳ ಅವಧಿಗೆ ಒಂದೊಂದು ಸೆಷನ್‌ನಂತೆ ಎಲ್ಲ ಕಾರ್ಯಕ್ರಮಗಳನ್ನು ವಿಂಗಡಿಸಲಾಗಿದೆ. ನಡುನಡುವೆ ಸೆಲೆಬ್ರಿಟಿಗಳು ನಡೆಸಿಕೊಡುವ ಕಾರ್ಯಕ್ರಮಗಳು ಪ್ರಸಾರವಾಗಲಿವೆ.

ಪ್ರತಿ ಬಾರಿ ʻನಾವಿಕ ಸಮ್ಮೇಳನʼಅಮೆರಿಕದಲ್ಲಿ ನಡೆಯುತ್ತದೆ. ಅಮೆರಿಕದ ಹೊರಗೆ ನಾವಿಕ ಸಂಘಟನೆಯಿಂದʻನಾವಿಕೋತ್ಸವʼವನ್ನುಮಹಾನಗರಗಳಲ್ಲಿ ಆಯೋಜಿಸಲಾಗುತ್ತದೆ. ಈಗಾಗಲೇ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಮಹಾನಗರಗಳಲ್ಲಿ ಪ್ರತಿವರ್ಷ ನಾವಿಕೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿವೆ. ಇದೊಂದು ಮಿನಿ ಸಮ್ಮೇಳನದ ಮಾದರಿಯಾಗಿದೆ. ಅಮೆರಿಕ ದೇಶವೂ ಸೇರಿದಂತೆ ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ರಜೆಯ ಕಾಲದಲ್ಲಿ ತಾಯ್ನಾಡಿಗೆ ಮರಳಿದಾಗ ಆ ಕುಟುಂಬದ ಪ್ರತಿಭೆಯನ್ನು ಸ್ಥಳೀಯರೆದುರು ಪ್ರದರ್ಶಿಸುವ ಸಲುವಾಗಿ ನಾವಿಕೋತ್ಸವ ನಡೆಸಲಾಗುತ್ತದೆ.

ನಾವಿಕ ಸಮ್ಮೇಳನದಲ್ಲಿ ಮೋಡಿ ಮಾಡಿದ್ದ ವಿಜಯ್ ಪ್ರಕಾಶ್-ರಾಜೇಶ್ ಕೃಷ್ಣನ್

ಆದರೆ ಇದೀಗ ಕೊರೋನಾದ ಹಿನ್ನೆಲೆಯಲ್ಲಿ ನಾವಿಕೋತ್ಸವವನ್ನು ಕನ್ನಡಿಗರ ಮನೆಯಂಗಳಕ್ಕೆ ತರುವ ಪ್ರಯತ್ನ ಮಾಡಿರುವುದಾಗಿ ಅಮೆರಿಕದ ನಾವಿಕ ಅಧ್ಯಕ್ಷ ವಲ್ಲೀಶ ಶಾಸ್ತ್ರಿ ತಿಳಿಸಿದ್ದಾರೆ. ವಿಶ್ವದ ಎಲ್ಲ ಕನ್ನಡ ಸಂಘಗಳನ್ನು ಸೇರಿಸಿಕೊಂಡು ಈ ವರ್ಷ ವರ್ಚುಯಲ್‌ ಸಮ್ಮೇಳನ ನಡೆಸಲು ಯೋಜನೆ ರೂಪಿಸಿಕೊಳ್ಳಲಾಗಿತ್ತು. ಅಂತೆಯೇಈ ಯೋಜನೆಗೆ ಉತ್ಸಾಹದಿಂದ ಬೆಂಬಲ ವ್ಯಕ್ತಪಡಿಸಿ ಅಮೆರಿಕ ದೇಶದ ಎಲ್ಲ ರಾಜ್ಯಗಳಲ್ಲಿನ 37 ಕನ್ನಡ ಸಂಘಗಳು ಹಾಗೂ ಅಮೆರಿಕದ ಹೊರಗೆ ಇತರೆ ದೇಶಗಳಲ್ಲಿರುವ 17 ಕನ್ನಡ ಸಂಘಗಳು ಈ ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿವೆ.

ಎಲ್ಲ ಕನ್ನಡ ಸಂಘಗಳಿಗೂ ತಲಾ 10 ನಿಮಿಷಗಳ ಕಾರ್ಯಕ್ರಮಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಒಂದೊಂದು ಸಂಘವು ತಮ್ಮಲ್ಲಿನ ಪ್ರತಿಭೆಗಳ ಮೂಲಕ 2 ನೃತ್ಯ ಪ್ರಕಾರಗಳು, 2ಹಾಡುಗಳು, 2 ನಾಟಕ ತುಣುಕುಗಳು ಪ್ರದರ್ಶನ ನೀಡಲಿವೆ. ಒಟ್ಟು 54 ಕನ್ನಡ ಸಂಘಗಳು ನೇರವಾಗಿ ಭಾಗವಹಿಸಲಿವೆ. ಇನ್ನು ಸುಮಾರು 80೦ ಸಂಘಗಳಿಗೆ ತಮ್ಮ ಸಂಘದ ಚಟುವಟಿಕೆಗಳನ್ನು ಪರಿಚಯಿಸಲು ತಲಾ 2 ನಿಮಿಷ ಕಾಲಾವಧಿಯನ್ನು ನೀಡಲಾಗಿದೆ. ಈ ಕಾಲಾವಧಿಯಲ್ಲಿ ಅವರು ತಮ್ಮ ಕನ್ನಡ ಸಂಘದ ಬಗ್ಗೆ ಮತ್ತು ಸಂಘದ ಚಟುವಟಿಕೆಗಳ ಬಗ್ಗೆ ವಿವರಿಸಲಿದ್ದಾರೆ.

ಅಮೆರಿಕದಲ್ಲಿಯೂ ಗಣೇಶೋತ್ಸವ ಭರ್ಜರಿ

ವಿಶ್ವ‌ದ ಎಲ್ಲ ಕನ್ನಡಿಗರನ್ನು ಕನೆಕ್ಟ್ ಮಾಡಲಿರುವ ವರ್ಚುವಲ್‌ ಸಮ್ಮೇಳನ : ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಆನ್‌ಲೈನ್‌ ನೇರಪ್ರಸಾರದ ಮೂಲಕ ಕನ್ನಡೋತ್ಸವ ನಡೆಸಲಾಗುತ್ತಿದ್ದು ಇದರಿಂದ ಇಡೀ ವಿಶ್ವ ಕನ್ನಡಿಗರನ್ನು ಏಕಕಾಲಕ್ಕೆ ಸಂಪರ್ಕ ಸಾಧಿಸಿಕೊಂಡು ಎಲ್ಲ ದಿಕ್ಕುಗಳಲ್ಲಿ ಹರಡಿಕೊಂಡಿರುವ ನಮ್ಮ ಕನ್ನಡಿಗರ ಪ್ರತಿಭೆಗಳನ್ನು ಪ್ರದರ್ಶಿಸುವ ವಿನೂತನ ವೇದಿಕೆ ಕಲಿಸಿದ ನಾವಿಕದ ಬಗ್ಗೆ ವಲ್ಲೀಶ ಶಾಸ್ತ್ರಿ ಸಂತಸ ವ್ಯಕ್ತ ಪಡಿಸಿದ್ದಾರೆ. ಸಿಂಗಾಪುರ, ಜರ್ಮನಿ, ಫ್ರಾನ್ಸ್‌, ರೋಮ್‌ ಸೇರಿದಂತೆ ಯುರೋಪಿನ ದೇಶಗಳು, ಯುಕೆ, ಆಸ್ಟ್ರೇಲಿಯಾ, ಕೆನಡಾ, ಮಧ್ಯ ಪ್ರಾಚ್ಯ ದೇಶಗಳು, ಆಫ್ರಿಕದ ದೇಶಗಳು ಹೀಗೆ ಎಲ್ಲೆಡೆ ನೆಲೆಸಿರುವ ನಮ್ಮ ಕನ್ನಡಿಗರು ತಾವು ಇರುವ ಕಡೆಗಳಿಂದಲೇ ತಮ್ಮ ಕಾರ್ಯಕ್ರಮಗಳನ್ನು ನಾವಿಕಗಾಗಿಯೇ ಎಕ್ಸ್‌ಕ್ಲೂಸಿವಾಗಿ ರೆಕಾರ್ಡ್‌ ಮಾಡಿ ಕಳಿಸಿದ್ದಾರೆ.

ಕಾರ್ಯಕ್ರಮದ ಹಣ ಆಶಾ ಕಾರ್ಯಕರ್ತರಿಗೆ : ಕರ್ನಾಟಕದಲ್ಲಿ ಕೋವಿಡ್‌ 19 ಸಮಸ್ಯೆಗೆ ತುತ್ತಾದವರಿಗೆ ಸ್ಪಂಧಿಸಿ ಹಗಲಿರುಳೆನ್ನದೆ ಯುದ್ಧೋಪಾದಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಈ ಬಾರಿಯ ನಾವಿಕೋತ್ಸವದಲ್ಲಿ ಸಂಗ್ರಹವಾದ ಟಿಕೆಟಿನ ಹಣವನ್ನು ನೀಡಲು ʻನಾವಿಕ ತಂಡʼ ತೀರ್ಮಾನ ಕೈಗೊಂಡಿದೆ. ಭಾರತೀಯ ಕರೆನ್ಸಿ ಪ್ರಕಾರ 10 ರಿಂದ 15  ಲಕ್ಷ ರೂಪಾಯಿಗಳಷ್ಟು ಹಣ ಸಂಗ್ರಹವಾಗಲಿದ್ದು ಇಷ್ಟೂ ಹಣವನ್ನು ದೇಣಿಗೆ ರೂಪದಲ್ಲಿ ಅವರಿಗೆ ನೀಡಲಿದ್ದಾರೆ.

ಹೀಗಿರಲಿದೆ ವರ್ಚುಯಲ್‌ ಮನರಂಜನೆ : ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲವೂ ಆನ್‌ಲೈನ್‌ದಲ್ಲಿಯೇ ನಡೆಯುವುದರಿಂದ ನೇರಪ್ರಸಾರ ವೀಕ್ಷಿಸಲು ಮತ್ತು ನಾವಿಕೋತ್ಸವದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಾವಿಕದ https://navika.org/ವೆಬ್‌ಸೈಟಿಗೆ ಭೇಟಿ ಕೊಡಲು ಕೋರಲಾಗಿದೆ. ಮೊದಲ ದಿನದಂದು ಆರಂಭದಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು. ನಂತರ ನಡುನಡುವೆ ಭಾರತದಿಂದ ಕರೆಸಲಾದ ಸೆಲೆಬ್ರಿಟಿಗಳು ಮತ್ತು ಗಣ್ಯರು ನಡೆಸಿಕೊಟ್ಟ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಖ್ಯಾತ ಗಾಯಕರಾದ ಪ್ರದೀಪ್‌-ಪ್ರವೀಣ್‌ಅವರ ಭಾವಗೀತೆಗಳು, ಸವಿತಾ ಅವರ ಹಳ್ಳಿಬ್ಯಾಂಡ್‌, ನಮ್ದುಕೇ ಟೀಮಿನ ಕಾಮಿಡಿ ನೈಟ್‌ ಇವು ಪ್ರಮುಖವಾಗಿರುತ್ತವೆ.

ಎರಡನೇ ದಿನದಂದು ಎನ್‌ಆರ್‌ಐ ಕನ್ನಡಿಗರ ʻಶ್ರೀರಾಮ ಪಟ್ಟಾಭಿಷೇಕʼ ಸಂಗೀತನಾಟಕ, ಹಿಂದೂಸ್ತಾನಿ ಸಂಗೀತ ಕಚೇರಿ, ʻಕನ್ನಡ ಕೋಗಿಲೆʼ ಮ್ಯೂಸಿಕಲ್‌ನೈಟ್‌, ಫ್ಯೂಷನ್‌ ಮ್ಯೂಸಿಕ್ ಕಾರ್ಯಕ್ರಮಗಳು ಪ್ರಸಾರವಾಗಲಿದ್ದು ನಂತರ ಸಾಹಿತ್ಯ ಸಂಜೆ ಚರ್ಚಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಖ್ಯಾತ ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ, ನಿರ್ದೇಶಕ ಟಿ.ಎನ್‌. ಸೀತಾರಾಮ್‌, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಭಾನುವಾರ ನಾಲ್ಕನೇ ಸೆಷನ್‌ದಲ್ಲಿ ಜನಪ್ರಿಯ ಸಂಗೀತ ನಿರ್ದೇಶಕ ಮನೋಮೂರ್ತಿ ಅವರು ತಮ್ಮ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರ ನೇತೃತ್ವದಲ್ಲಿ ಸಿನಿಗೀತೆಗಳ ರಸಸಂಜೆ ನಂತರ ಹರಟೆ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಎಲ್ಲವನ್ನೂವಿಶ್ವಾಧ್ಯಂತ ನೆಲೆಸಿರುವ ಕನ್ನಡಿಗರು ವೀಕ್ಷಿಸಬಹುದು.

ಈ ಕಾರ್ಯಕ್ರಮದ ಉದ್ಘಾಟನೆ, ನಿರೂಪಣೆ ಹೀಗೆ ಕೆಲವನ್ನು ಮಾತ್ರ ನೇರಪ್ರಸಾರದಲ್ಲಿ ಅಳವಡಿಸಿಕೊಂಡು ಮಿಕ್ಕೆಲ್ಲ ಚಟುವಟಿಕೆಗಳನ್ನುಮುಂಚಿತವಾಗಿಯೇ ರೆಕಾರ್ಡಿಂಗ್‌ ಮಾಡಿಕೊಂಡು ನಾವಿಕೋತ್ಸವದ ಮೂರು ದಿನಗಳ ಕಾಲ ಒಂದಾದ ನಂತರ ಒಂದರಂತೆ ನೇರಪ್ರಸಾರ ಮಾಡಲಾಗುವುದು. ಕನ್ನಡ ಸಂಘಗಳು ವಿಶ್ವದ ಎಲ್ಲ ಕಡೆಯಿಂದ ಶ್ರಮವಹಿಸಿ ಇದರಲ್ಲಿ ಭಾಗವಹಿಸುತ್ತಿವೆ. ಇವಷ್ಟೇ ಅಲ್ಲದೇ ಪ್ರತ್ಯೇಕವಾಗಿ ಅನಿವಾಸಿ ಕನ್ನಡಿಗರಿಗೆ ಮತ್ತು ಕರ್ನಾಟಕದಲ್ಲಿನ ಕನ್ನಡಿಗರಿಗೆ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದೆ. ಕಥಾ ಸ್ಪರ್ಧೆ, ಅನಿವಾಸಿಗಳಿಗೆ ಶಾರ್ಟ್‌ಮೂವಿ ಸ್ಪರ್ಧೆ, ಬ್ಯೂಟಿ ಪ್ಯಾಜೆಂಟ್‌,ಹೊರದೇಶಗಳಲ್ಲಿ ಕನ್ನಡ ಕಲಿಯುತ್ತಿರುವ ಕನ್ನಡಕಲಿ ಮಕ್ಕಳಿಗೂ ನಾನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 

ಅಮೆರಿಕದಲ್ಲಿ ನೆಲೆಸಿರುವ ನಾವಿಕ ಸಂಘದ ಆಯೋಜಕರು ವಿಶ್ವದ ಎಲ್ಲ ಕನ್ನಡಸಂಘಗಳನ್ನು ಸಂಪರ್ಕಿಸಿ ಅವರ ಸಹಕಾರದಲ್ಲಿ ಆಯೋಜಿಸಲಾಗಿರುವ ವಿನೂತನ ಮಾದರಿಯ ಕನ್ನಡ ವರ್ಚುಯಲ್‌ಹಬ್ಬ ಇದಾಗಿದೆ.  ಅಂತರ್ಜಾಲ ಚಾಲಿತ ನಾವಿಕೋತ್ಸವವನ್ನು ಕಡಲಾಚೆಯಿಂದ ಮನೆಯಂಗಳಕ್ಕೆ ತರುವ ಸಕಲಪ್ರ ಯತ್ನಗಳು ನಡೆದಿದ್ದು ಕನ್ನಡಿಗರು  ಆನಂದಿಸಬೇಕು ಎಂದು ನಾವಿಕ ಎಕ್ಸಿಕ್ಯೂಟಿವ್‌ ಕಮಿಟಿ ಪ್ರಾದೇಶಿಕ ನಿರ್ದೇಶಕ ಅನಿಲ್‌ ಭಾರದ್ವಾಜ್‌ ಮನವಿ ಮಾಡಿಕೊಂಡಿದ್ದಾರೆ.