ಸೌದಿ ಅರೇಬಿಯಾ ಜೆದ್ದಾ [ನ.05]  ವಿವಿಧ ಭಾಷೆ, ಸಂಸ್ಕೃತಿ ಮತ್ತು ಆಚಾರ, ವಿಚಾರಗಳನ್ನು ಒಳಗೊಂಡ ಭಾರತದೇಶಕ್ಕೆ ಕರ್ನಾಟಕವು ನೀಡಿದ ಕೊಡುಗೆ ಅಮೋಘ. ಕರ್ನಾಟಕವನ್ನು ಆಳಿದ ಅರಸರು ಸಾಹಿತ್ಯ, ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಪ್ರಾಮುಖ್ಯತೆ ಕಲ್ಪಿಸಿ ದೇಶವು ಜಗತ್ತಿನಲ್ಲಿ ಖ್ಯಾತಿ ಪಡೆಯುವುದಕ್ಕೆ ತಮ್ಮ ಕೊಡುಗೆ ಸಲ್ಲಿಸಿದರು ಎಂದು ಇಂಡಿಯನ್ ಸೋಷಿಯಲ್ ಫಾರಂನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫೀ ಮಠ ಸ್ಮರಿಸಿದರು.

ಅವರು ಇಂಡಿಯನ್ ಸೋಷಿಯಲ್ ಫೋರಂ ವತಿಯಿಂದ ನಗರದ ಲಕ್ಕಿ ದರ್ಬಾರ್ ಹೋಟೆಲ್ ಸಭಾಂಗಣದಲ್ಲಿ ದಿನಾಂಕ ನವೆಂಬರ್  ಆಯೋಜಿಸಲಾಗಿದ್ದ ಕನ್ನಡರಾಜ್ಯೋತ್ಸವದಲ್ಲಿ ಮಾತನಾಡಿ ಬೇಲೂರು, ಹಳೇಬೀಡು, ಹಂಪಿಗಳಲ್ಲಿ ಅರಸರು ಕಟ್ಟಿಸಿದ ದೇವಾಲಯಗಳು,ಗೋಲಗುಂಬಝ್ ಬೃಹತ್ ಕೋಟೆಗಳು ಜಗತ್ತಿನ ವಿವಿಧ ಭಾಗಗಳಿಂದ ಜನರು ವಾಸ್ತುಶಿಲ್ಪದ ವೀಕ್ಷಣೆಗಾಗಿ ಭಾರತಕ್ಕೆ ಬರುವಂತೆ ಮಾಡಿತು ಎಂದರು.

ಜ್ಞಾನ ಸಂಪಾದನೆಗೆ ಯಾವ ಭಾಷೆಯಾದರೇನು ಆದರೆ ನಮ್ಮ ನಡೆನುಡಿ ಕನ್ನಡವಾಗಿರಲಿ ಕನ್ನಡದ ಮೇಲಿನ ಪ್ರೀತಿ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ ಎಂದು ವಿನಂತಿಸಿಕೊಂಡರು.

ರಾಜ್ಯೋತ್ಸವದ ನಿಮಿತ್ತ ಕನ್ನಡ ಹಾಡು, ಕ್ವಿಜ್ ಸ್ಪರ್ಧೆಗಳನ್ನುಆಯೋಜಿಸಲಾಗಿತ್ತು. ಆಕರ್ಷಕ ಕ್ವಿಜ್ ಸ್ಪರ್ಧೆಯು ಪ್ರೇಕ್ಷಕರ ಮನ ಗೆದ್ದಿತು. ಕ್ವಿಜ್ ನಿರೂಪಕ ಹುಸೈನ್ ಜೋಕಟ್ಟೆ ಅವರು ಕನ್ನಡ ನಾಡಿನ ಕಲೆ, ಸಂಸ್ಕೃತಿ, ಭಾಷೆ, ವಾಸ್ತು ಶಿಲ್ಪ ಮತ್ತು ಆಡಳಿತಕ್ಕೆ ಸಂಬಂಧಿಸಿದ   ಪ್ರಶ್ನೆಗಳನ್ನು ಸಭೆಯ ಮುಂದೆ ಇಡುತ್ತಿದ್ದರು ಮತ್ತು ಮೊದಲು ಉತ್ತರಿಸಿದವರಿಗೆ ತಕ್ಷಣವೇ ಬಹುಮಾನ ವಿತರಿಸಲಾಯಿತು.

ಐ ಎಸ್ ಎಫ್ ರಾಜ್ಯಾಧ್ಯಕ್ಷ ಮಹಮ್ಮದಾಲಿ ಮೂಳೂರ್ ಸಭಾದ್ಯಕ್ಷತೆ ವಹಿಸಿದ್ದರು ಐಎಸ್ಎಫ್ ಸೆಂಟ್ರಲ್ ಕಮಿಟೀ ಉಪಾದ್ಯಕ್ಷರಾದ ಹನೀಫ್ ಹಾರಿಸ್ , ಐಎಸ್ಎಫ್ ಜತೆ ಕಾರ್ಯದರ್ಶಿಗಳಾದ ರವೂಫ್ ಜೋಕಟ್ಟೆ, ಜವ್ವಾದ್ ಬೆಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಮಹಮ್ಮದಾಲಿ ಮೂಳೂರು ಸ್ವಾಗತಿಸಿದರೆ, ಸಮಾರೋಪ ಮಹಮ್ಮದ್ ಇಸ್ಮಾಯಿಲ್ ನರೆವೇರಿಸಿದರು, ಜವ್ವಾದ್ ಬೆಂಗಳೂರು ಧನ್ಯವಾದಗಳನ್ನು ಅರ್ಪಿಸಿದರು, ಜನಾಬ್ ಇರ್ಷಾದ್ ಕಾವಲ್ ಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಆಸಿಫ್ ಗಂಜಿಮಠ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಆಯೋಜಿಸಿದ್ದರು.