ಎನ್‌ಆರ್‌ಐ ಕನ್ನಡಿಗರ ಸಾಹಸ 'ರತ್ನಮಂಜರಿ'

ಎನ್‌ಆರ್‌ಐ ಕನ್ನಡಿಗರು ಸೇರಿಕೊಂಡು ‘ರತ್ನಮಂಜರಿ’ ಟೈಟಲ್‌ ಇಟ್ಟುಕೊಂಡು ಚಿತ್ರ ಮಾಡಿದ್ದಾರೆ. ಇದು ಮೇ ಮೊದಲ ವಾರ ಅಥವಾ ಎರಡನೇ ವಾರ ತೆರೆಗೆ ಬರಲು ಸಿದ್ಧತೆ ಮಾಡಿಕೊಂಡಾಗಿದೆ.

Kannada movie Ratnamanjari directed by NRIs

‘ಯಾರು ಯಾರು ನೀ ಯಾರು, ಎಲ್ಲಿಂದ ಬಂದೆ ಯಾವೂರು’ ಎಂಬ ಹಾಡನ್ನು ಕೇಳಿದ ತಕ್ಷಣ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ‘ರತ್ನಮಂಜರಿ’ ಚಿತ್ರ ನೆನಪಾಗುತ್ತದೆ. ಅರವತ್ತರ ದಶಕದಲ್ಲಿ ದೊಡ್ಡ ಸದ್ದನ್ನೇ ಮಾಡಿದ್ದ ಚಿತ್ರವಿದು. ಈಗ ಇದರ ಬಗ್ಗೆ ಮಾತನಾಡಲು ಕಾರಣವೊಂದು ಸಿಕ್ಕಿದೆ. ಅದು ಎನ್‌ಆರ್‌ಐ ಕನ್ನಡಿಗರು ಸೇರಿಕೊಂಡು ‘ರತ್ನಮಂಜರಿ’ ಟೈಟಲ್‌ ಇಟ್ಟುಕೊಂಡು ಚಿತ್ರ ಮಾಡಿದ್ದಾರೆ. ಇದು ಮೇ ಮೊದಲ ವಾರ ಅಥವಾ ಎರಡನೇ ವಾರ ತೆರೆಗೆ ಬರಲು ಸಿದ್ಧತೆ ಮಾಡಿಕೊಂಡಾಗಿದೆ.

ಮೊನ್ನೆಯಷ್ಟೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಕೊಂಡ ಚಿತ್ರತಂಡವನ್ನು ಹಂಸಲೇಖ, ನಾಗತಿಹಳ್ಳಿ ಚಂದ್ರಶೇಖರ್‌, ಕೆ. ಕಲ್ಯಾಣ್‌, ನಂಜುಂಡೇಗೌಡ, ವಶಿಷ್ಟಸಿಂಹ ಮೊದಲಾದವರು ಬಂದು ಹರಸಿದ್ದಾರೆ.

ಪ್ರಸಿದ್ಧ ಚಿತ್ರದ ನಿರ್ದೇಶಕ. ಇವರೂ ಎನ್‌ಆರ್‌ಐ ಕನ್ನಡಿಗರಾಗಿದ್ದು, ಬಂಡವಾಳ ಹಾಕಿರುವ ಸಂದೀಪ್‌, ನಟರಾಜ್‌ ಹಳೆಬೀಡು ಇಬ್ಬರೂ ಎನ್‌ಆರ್‌ಐ ಕನ್ನಡಿಗರೇ ಆಗಿದ್ದಾರೆ. ಹೀಗಾಗಿ ಇದೊಂದು ಎನ್‌ಆರ್‌ಐ ಕನ್ನಡಿಗರೇ ಮುನ್ನೆಲೆಯಲ್ಲಿ ನಿಂತು ನಿರ್ಮಾಣ ಮಾಡಿರುವ ಚಿತ್ರ ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ.

ಹಂಸಲೇಖ ಅವರ ಆಶೀರ್ವಾದ, ಸ್ಫೂರ್ತಿಯಿಂದ ನಿರ್ದೇಶನಕ್ಕೆ ಇಳಿದ ಪ್ರಸಿದ್ಧ ಅಮೆರಿಕಾದ ನೆಲಕ್ಕೂ ನಮ್ಮ ನೆಲಕ್ಕೂ ಕನೆಕ್ಟ್ ಆಗುವಂತಹ ಕತೆಯನ್ನು ಇಟ್ಟುಕೊಂಡು ‘ರತ್ನಮಂಜರಿ’ ಮಾಡಿರುವುದಾಗಿ ಹೇಳಿಕೊಂಡರು.

ನಾಯಕ ರಾಜ್‌ ಚರಣ್‌ಗೆ ಇದು ಮೊದಲ ಪ್ರಯತ್ನ. ಬಾಟನಿಸ್ಟ್‌ ಆಗಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಿರುವ ಎನ್‌ಆರ್‌ಐ ಕನ್ನಡಿಗನ ಪಾತ್ರ ಇವರದ್ದು. ಅಮೆರಿಕಾದಲ್ಲಿ ಅರ್ಧ, ಕರ್ನಾಟಕದಲ್ಲಿ ಅರ್ಧ ಶೂಟ್‌ ಆಗಿರುವ ಚಿತ್ರಕ್ಕೆ ನಾಯಕಿಯಾಗಿ ಸಾಥ್‌ ಕೊಟ್ಟಿರುವುದು ಅಖಿಲಾ ಪ್ರಕಾಶ್‌. ಮನರಂಜನೆಯ ಜೊತೆಗೆ ಥ್ರಿಲ್ಲರ್‌ ಜಾನರ್‌ನಲ್ಲಿ ಸಾಗುವ ಕತೆ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದು ರಾಜ್‌ ಚರಣ್‌ ಮಾತು.

‘ವಂಡರ್‌ ಐಸ್‌ ಥಂಡರ್‌ ಥೈಸ್‌’ ಹೀಗಂತ ‘ರತ್ನಮಂಜರಿ’ ಚಿತ್ರಕ್ಕೆ ಸಬ್‌ ಟೈಟಲ್‌ ಕೊಟ್ಟಿದ್ದು ನಾದಬ್ರಹ್ಮ ಹಂಸಲೇಖ. ಇದಕ್ಕೆ ಕಾರಣ ನಾಯಕಿ ಅಖಿಲಾ ಪ್ರಕಾಶ್‌. ವೇದಿಕೆಯ ಮೇಲೆ ಸಖತ್‌ ಲವಲವಿಕೆಯಿಂದ ಕಾಣಿಸಿಕೊಂಡ ನಾಯಕಿಯನ್ನು ಕುರಿತು ಹಂಸಲೇಖ ಹೀಗೆ ಹೇಳಿ ಚಿತ್ರತಂಡದ ಬೆನ್ನು ತಟ್ಟಿದರು. ನಾಗತಿಹಳ್ಳಿ ಚಂದ್ರಶೇಖರ್‌ ತಮ್ಮ ಗರಡಿಯಲ್ಲಿ ಬೆಳೆದಿರುವ ಹುಡುಗರು ಮಾಡಿರುವ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಲ್ಲದೇ ಇಡೀ ತಂಡಕ್ಕೆ ಗೆದ್ದು ಬನ್ನಿ ಎಂದು ಹರಸಿದರು.

ಪುನೀತ್‌ ರಾಜ್‌ಕುಮಾರ್‌ ಚಿತ್ರದ ಒಂದು ಹಾಡಿಗೆ ದನಿ ನೀಡಿದ್ದರೆ, ವಶಿಷ್ಠ ಸಿಂಹ ಮತ್ತೊಂದು ಹಾಡಿಗೆ ದನಿಯಾಗಿದ್ದಾರೆ. ಒಟ್ಟು ಐದು ಹಾಡುಗಳಿಗೆ ಸಂಗೀತ ನೀಡಿರುವುದು ಹರ್ಷವರ್ಧನ್‌ ರಾವ್‌. ಕೆ. ಕಲ್ಯಾಣ್‌ ಸಾಹಿತ್ಯ ಚಿತ್ರಕ್ಕಿದೆ.

Latest Videos
Follow Us:
Download App:
  • android
  • ios