ನ್ಯೂಜೆರ್ಸಿ (ಜು. 06): ಕನ್ನಡವೆಂದರೆ ಕೇವಲ ಕನ್ನಡ ಮಾತನಾಡುವವರ ಬದುಕಲ್ಲ, ಭಾಷೆಯೂ ಅಲ್ಲ, ಅದೊಂದು ಅನನ್ಯ ಜೀವನ ಕ್ರಮವಾಗಿದೆ. ಇಂಥ ಕನ್ನಡ ಸಂಸ್ಕೃತಿಯನ್ನು ದೂರದ ಅಮೆರಿಕದಲ್ಲೂ ಜೀವಂತವಾಗಿರಿಸಿದ ಕನ್ನಡಿಗರ ಕಾರ್ಯ ಅಭಿನಂದನಾರ್ಹ ಎಂದು ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ನ್ಯೂಜೆರ್ಸಿಯಲ್ಲಿ ಒಕ್ಕಲಿಗರ ಪರಿಷತ್ ಸಮಾವೇಶದಲ್ಲಿ ಮಾತನಾಡಿ, ಕನ್ನಡಿಗರು ತಮ್ಮ ಸೌಜನ್ಯದಿಂದ ಎಲ್ಲೂ ಸಲ್ಲಬಲ್ಲ ಸಜ್ಜನರು. ಕನ್ನಡದ ಮಣ್ಣಲ್ಲಿ ಹುಟ್ಟಿ ಬದುಕನ್ನು ಅರಸುತ್ತ ಬಹುದೂರ ಬಂದಿರುವ ಕನ್ನಡಿಗರು ತಮ್ಮ ಬೇರುಗಳನ್ನು ಮರೆಯದೆ ಬೆಳೆಯುತ್ತಿರುವುದು ಸಂತಸದ ವಿಚಾರ ಎಂದರು.

ಕೃಷಿ ಆಧಾರಿತ ನಮ್ಮ ದೇಶದಲ್ಲಿ ಕೃಷಿಕರನ್ನು ಹಲವು ಹೆಸರುಗಳಿಂದ ಕರೆದರೂ ಕರ್ನಾಟಕದಲ್ಲಿ ಮಾತ್ರ ಅವರಿಗೆ ಒಕ್ಕಲಿಗರೆನ್ನುತ್ತಾರೆ. ಭ್ರಾತೃತ್ವ ಭಾವದ ಸೆಲೆಯಾಗಿರುವ, ಸಮಾಜದ ಒಳಿತೆಲ್ಲವನ್ನೂ ಒಗ್ಗೂಡಿಸುವ ಒಕ್ಕಲಿಗ ಸಮುದಾಯದ ಬಹು ದೊಡ್ಡ ಪರಂಪರೆ ಕರ್ನಾಟಕದ್ದು. ಗಂಗರಿಂದ ಪ್ರಾರಂಭವಾಗಿ, ಕೆಂಪೇಗೌಡರ ಕಾಲದಿಂದ ಮುನ್ನಡೆದು ಇಂದಿನ ಅತ್ಯುನ್ನತ ಸ್ಥಿತಿಗೆ ತಲುಪುವವರೆಗೆ ಒಕ್ಕಲಿಗರ ಹಾದಿ ರೋಚಕವಾದುದು ಮತ್ತು ಮಾದರಿ ಎನ್ನಿಸುವಂತಹದ್ದು.

ಬೆಂಗಳೂರನ್ನು ಯೋಜಿತ ನಗರವಾಗಿ ಕಟ್ಟಿದ ಕೆಂಪೇಗೌಡರಿಂದ ಮೊದಲ್ಗೊಂಡು ಕನ್ನಡ ನೆಲದಿಂದ ಮೂಡಿದ ಮೊದಲ ಪ್ರಧಾನಿ ಎನಿಸಿದ ಎಚ್.ಡಿ.ದೇವೇಗೌಡರವರೆಗೆ ಈ ನಾಡನ್ನು ಕಟ್ಟಿದ ಬಹುದೊಡ್ಡ ಪರಂಪರೆಯ ಉದಾಹರಣೆ ನಮ್ಮ ಮುಂದಿದೆ ಎಂದರು. ಕಾರ್ಯಕ್ರಮದಲ್ಲಿ ಸಚಿವ ಸಾ.ರಾ.ಮಹೇಶ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.