ನಾರ್ಥ್ ಕ್ಯಾಲಿಫೋರ್ನಿಯಾ(ಡಿ.12):ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು' ಡಿಸೆಂಬರ್ 8, 2018 ರಂದು ಸ್ಯಾನ್ ಹೋಸೆಯ ಇಂಡಿಪೆಂಡೆಂಟ್ ಹೈ ಸ್ಕೂಲ್ ನಲ್ಲಿ ತನ್ನ ವಾರ್ಷಿಕ ಪತ್ರಿಕೆ 'ಸ್ವರ್ಣಸೇತು'ವಿನ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿತ್ತು. ಇದರ ಜೊತೆಗೆ ಹಾಸ್ಯ ಮತ್ತು ಸಾಹಿತ್ಯ ಸಂಜೆಯನ್ನೂ ಆಯೋಜಿಸಲಾಗಿತ್ತು. 

ಖ್ಯಾತ ಹಾಸ್ಯ ಕವಿ ಶ್ರೀ ಡುಂಡಿರಾಜ್ ಹಾಗು ಖ್ಯಾತ ಲೇಖಕ, ಕಾದಂಬರಿಕಾರ ಶ್ರೀ ಜೋಗಿ ಅವರು ಭಾರತದಿಂದ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಪತ್ರಿಕೆ ಬಿಡುಗಡೆ ಮಾಡಿದ ಈ ಇಬ್ಬರು ಮಹನೀಯರು ಅದರ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

 

ಇದೇ ಸಂದರ್ಭದಲ್ಲಿ ಖ್ಯಾತ ನೃತ್ಯಗಾರ್ತಿ ಶ್ರೀಮತಿ ತುಳಸಿ ರಾಮಚಂದ್ರ ರನ್ನು ಕನ್ನಡ ಕೂಟದ ವತಿಯಿಂದ ಸನ್ಮಾನಿಸಲಾಯಿತು.ಡುಂಡಿರಾಜ್ ರವರ 'ಹಾಸ್ಯ ಚುಟುಕುಗಳು' ಜನರನ್ನು ನಗೆಗಡಲಲ್ಲಿ ತೇಲಿಸಿದರೆ ಜೋಗಿಯವರ ಸಾಹಿತ್ಯದ ಕುರಿತಾದ 'ಹೃದಯದಿಂದ' ಕಾರ್ಯಕ್ರಮ ಜನರನ್ನು ವಿಶೇಷವಾಗಿ ಮೆಚ್ಚಿಸಿತು. 

ಇವುಗಳ ಜೊತೆಗೆ ಸ್ಥಳೀಯ ಕವಿಗಳಿಂದ ಡುಂಡಿರಾಜ್ ರವರ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ ನಡೆಸಲಾಯಿತು.  ಕನ್ನಡ ಕೂಟದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಹೆಗಡೆ ಅವರು ಪತ್ರಿಕೆಯ ಸಂಪಾದಕೀಯ ತಂಡವನ್ನು ಅಭಿನಂದಿಸಿ, ಈ ರೀತಿಯ ಸಾಹಿತ್ಯ ಕಾರ್ಯಕ್ರಮಗಳು ಮತ್ತಷ್ಟು ಮೂಡಿಬರಲೆಂದು ಹಾರೈಸಿದರು.

ಕನ್ನಡ ಕೂಟದ ಉಪಾಧ್ಯಕ್ಷರಾದ ಅಮೃತ್ ಮೂರ್ತಿ ಹಾಗು ಸ್ವರ್ಣಸೇತು ತಂಡದ ನೇತೃತ್ವದಲ್ಲಿ ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಭಾಂಗಣದಲ್ಲಿ ನೆರೆದಿದ್ದ 200 ಕ್ಕೂ ಹೆಚ್ಚು ಸಾಹಿತ್ಯ ಪ್ರಿಯರು ಈ ಸಾಹಿತ್ಯ/ಹಾಸ್ಯ ಸಂಜೆಯ ರಸದೌತಣವನ್ನು ಸವಿದರು.