ದಾವಣಗೆರೆ/ಮಲೆಬೆನ್ನೂರು (ಜು. 10):  ಮುಸ್ಲಿಂ ಧರ್ಮೀಯರ ಪವಿತ್ರ ಕ್ಷೇತ್ರವಾದ ಮೆಕ್ಕಾ ಮದೀನಾಗೆ ಕಡಿಮೆ ವೆಚ್ಚದಲ್ಲಿ ಉಮ್ರಾಹ್‌(ಯಾತ್ರೆ) ಕರೆದೊಯ್ಯುವುದಾಗಿ ನಂಬಿಸಿ 82 ಯಾತ್ರಾರ್ಥಿಗಳನ್ನು ಕರೆದೊಯ್ದ ಟೂರಿಸ್ಟ್‌ ಏಜೆನ್ಸಿಯೊಂದು ಅಲ್ಲಿಯೇ ಬಿಟ್ಟಪರಿಣಾಮ ಅಷ್ಟೂಮಂದಿ ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದ ಇಂಟರ್‌ ನ್ಯಾಷನಲ್‌ ಟ್ರಾವೆಲ್‌ ಏಜೆನ್ಸಿಯೊಂದು ಬೆಂಗಳೂರಿನ ಮತ್ತೊಂದು ಇಂಟರ್‌ನ್ಯಾಷನಲ್‌ ಟೂರ್‌ ಏಜೆನ್ಸಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಪ್ರವಾಸ ಏರ್ಪಡಿಸುತ್ತಿತ್ತು.

ಹಿಂದೆಯೂ 2 ಸಲ ಪವಿತ್ರಾ ಮೆಕ್ಕಾ ಮದೀನಾಗೆ ಕರೆದುಕೊಂಡು ಹೋಗಿ ಬಂದಿದ್ದ ಏಜೆನ್ಸಿ ಮೇಲೆ ಸಹಜವಾಗಿಯೇ ಜನರು ನಂಬಿಕೆ ಇತ್ತು. ಹೀಗಾಗಿ ಈ ಬಾರಿಯೂ ಮಲೆಬೆನ್ನೂರು, ದಾವಣಗೆರೆ, ಬೆಂಗಳೂರು, ಹರಿಹರ, ಕುಂದೂರು ಸೇರಿದಂತೆ ವಿವಿಧ ಊರಿನ 82 ಯಾತ್ರಾರ್ಥಿಗಳು ಜೂ.19ರಂದು ಈ ಕಂಪನಿಯ ಮೂಲಕ ಮದೀನಾಗೆ ಪ್ರಯಾಣ ಬೆಳೆಸಿದ್ದರು.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜುಲೈ 3ರಂದೇ ದೇಶಕ್ಕೆ ಮರಳಬೇಕಿದ್ದ ಪ್ರವಾಸಿಗರು ಈಗ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಭಾರತಕ್ಕೆ ಮರಳಲು ಕಂಪನಿಯು ಟಿಕೆಟ್‌ ಬುಕ್‌ ಮಾಡದ ಕಾರಣಕ್ಕೆ ಎಲ್ಲರೂ ಅಲ್ಲಿಯೇ ಹೋಟೆಲ್‌ಗಳಲ್ಲಿ ಬೀಡು ಬಿಡುವಂತಾಗಿದೆ.

ಈ ಬಗ್ಗೆ ಯಾತ್ರಾರ್ಥಿಗಳು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಇತ್ತ ಸಂಬಂಧಿಕರು ಮಲೆಬೆನ್ನೂರು ಟೂರ್‌ ಏಜೆನ್ಸಿ, ಬೆಂಗಳೂರು ಕಚೇರಿಗೆ ಅಲೆದರೂ ಪ್ರಯೋಜನವಾಗಿಲ್ಲ. ಮಲೆಬೆನ್ನೂರು ಟೂರ್‌ ಏಜೆನ್ಸಿ ಮಾಲೀಕ ನಾಪತ್ತೆಯಾಗಿದ್ದು ಅತನ ಕಚೇರಿ ಮತ್ತು ಮನೆಗಳಿಗೆ ಬೀಗ ಜಡಿಯಲಾಗಿದೆ.

ಬೆಂಗಳೂರಿನ ಏಜೆನ್ಸಿಗೆ ಸಂಪರ್ಕಿಸಿದರೆ ಮದೀನಾಗೆ ಕರೆದೊಯ್ಯಲು ಮಾತ್ರ ತಮ್ಮ ಬಳಿ ಏರ್‌ ಟಿಕೆಟ್‌ ಬುಕ್‌ ಆಗಿದ್ದವು ಎಂಬುದಾಗಿ ಕಡ್ಡಿ ಮುರಿದಂತೆ ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲೂ ಯಾವುದೇ ದೂರು ದಾಖಲಾಗಿಲ್ಲ.