ಲಾಸ್‌ ಏಂಜಲೀಸ್‌/ಸಿನ್ಸಿನಾಟಿ[ಫೆ.13]: ಬಹು ನಿರೀಕ್ಷಿತ ನಾವಿಕ ಸಮ್ಮೇಳನವನ್ನು ಈ ಬಾರಿ ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಭರದ ಸಿದ್ಧತೆಗಳು ಆರಂಭಗೊಂಡಿವೆ.

ಸಾಗರದಾಚೆ ಸಾವಿರಾರು ಮೈಲುಗಳ ದೂರದಲ್ಲಿದ್ದರೂ ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡತನವನ್ನು ಗಟ್ಟಿಗೊಳಿಸಲು ಟೊಂಕ ಕಟ್ಟಿನಿಂತಿರುವ ಇಲ್ಲಿನ ಅನೇಕ ಉತ್ಸಾಹಿ ಕನ್ನಡಿಗರು, ಅಮೆರಿಕ ದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಗ್ಗೂಡಿಸುವ ಸಲುವಾಗಿ 2 ವರ್ಷಗಳಿಗೊಮ್ಮೆ ಸಮ್ಮೇಳನವನ್ನು ಆಯೋಜಿಸುತ್ತಾರೆ. ನಾವಿಕ 5ನೇ ವಿಶ್ವ ಕನ್ನಡ ಸಮಾವೇಶವು ಆ.30, 31 ಹಾಗೂ ಸೆ.1ರಂದು ಮೂರು ದಿನಗಳ ಕಾಲ ಸಿನ್ಸಿನಾಟಿ ನಗರದ ಡ್ಯೂಕ್‌ ಎನರ್ಜಿ ಕನ್ವೆನ್ಷನ್‌ ಸೆಂಟರಿನಲ್ಲಿ ನಡೆಯಲಿದೆ.

ಸಮ್ಮೇಳನಕ್ಕೆ ಬೇಕಾದ ನಾನಾ ಸಮಿತಿಗಳು ಈಗಾಗಲೇ ರಚನೆಗೊಂಡಿದ್ದು, ಆಯಾ ಸಮಿತಿಗಳು ತಮ್ಮ ತಮ್ಮ ಕಾರ್ಯಗಳನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳಲು ಹಲವು ಸುತ್ತಿನ ಸಭೆಗಳನ್ನು ನಡೆಸಿವೆ. ಅಮೆರಿಕದ ನಾನಾ ಭಾಗಗಳಲ್ಲಿರುವ ಸಂಘಟನಾ ನೈಪುಣ್ಯತೆ ಹೊಂದಿರುವ ಅನುಭವಿ ಕನ್ನಡಿಗರು ಈ ಎಲ್ಲ ಸಮಿತಿಗಳಲ್ಲಿ ಪದಾಧಿಕಾರಿಗಳಾಗಿರುವುದು ವಿಶೇಷ.

ಮೂರು ದಿನಗಳ ಕಾರ್ಯಕ್ರಮಗಳಿಗಾಗಿ ಹೋಟೆಲ್‌ಗಳನ್ನು ಕಾಯ್ದಿರಿಸುವುದು, ಊಟೋಪಚಾರ, ಅಮೆರಿಕ ದೇಶದ ಮೂಲೆಮೂಲೆಗಳಿಗೆ ಸಮ್ಮೇಳನದ ಬಗ್ಗೆ ಮಾಹಿತಿ ರವಾನಿಸಲು ಪ್ರಚಾರ ಕಾರ್ಯ, ಸ್ಥಳೀಯ ಹಾಗೂ ಭಾರತದಿಂದ ಕರೆಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಕಲಾವಿದರ ಪಟ್ಟಿತಯಾರಿಕೆ, ಸಮ್ಮೇಳನದಲ್ಲಿ ಭಾಗವಹಿಸುವವರಿಗಾಗಿ ವಸತಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಮತ್ತಿತರ ಅಗತ್ಯ ಮಾಹಿತಿಗಳನ್ನು ನೀಡುವುದಕ್ಕಾಗಿ ಸ್ವಾಗತ ಸಮಿತಿ ರಚನೆ, ಖರ್ಚು ವೆಚ್ಚ ನಿರ್ವಹಣೆಗಾಗಿ ಹಣಕಾಸು ಸಮಿತಿ ರಚನೆ ಹೀಗೆ ಏಕಕಾಲಕ್ಕೆ ಸಕಲ ಕಾರ್ಯಗಳು ಆರಂಭಗೊಂಡಿವೆ.

ಸಿನಿತಾರೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು ಇವರ ಆಗಮನ ಬಹುತೇಕ ಖಚಿತವಾಗಿದೆ ಎಂದು ನಾವಿಕದ ಸಂಚಾಲಕರಾದ ವಲ್ಲೀಶ ಶಾಸ್ತ್ರೀ ತಿಳಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದಕ್ಕಾಗಿ ಭಾರತದ ಕೆಲ ಗಾಯಕ-ಗಾಯಕಿಯರನ್ನೂ ಆಹ್ವಾನಿಸಲಾಗಿದ್ದು ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಖ್ಯಾತ ನೃತ್ಯ ಜೋಡಿ ನಿರುಪಮಾ-ರಾಜೇಂದ್ರ ಅವರನ್ನೂ ಆಹ್ವಾನಿಸಲಾಗಿದ್ದು ಅವರು ಸಮ್ಮೇಳನದಲ್ಲಿ ಕಾಯಕ್ರಮ ನೀಡಲು ಒಪ್ಪಿಕೊಂಡಿದ್ದಾರೆ. ಸಮ್ಮೇಳನದ ಬಗೆಗಿನ ಸಂಪೂರ್ಣ ಮಾಹಿತಿ https://navika.org/ ಈ ವೆಬ್‌ಸೈಟಿನಲ್ಲಿದೆ. ಈಗಾಗಲೇ ನೋಂದಣೆ ಶುರುವಾಗಿದ್ದು ಅರ್ಲಿ ಬರ್ಡ್‌ (ಮುಂಗಡವಾಗಿ ಕಾಯ್ದಿರಿಸುವಿಕೆ) ಟಿಕೆಟ್‌ ಕೊಳ್ಳುವವರಿಗಾಗಿ ವಿಶೇಷ ರಿಯಾಯಿತಿಯನ್ನೂ ನೀಡಲಾಗಿದೆ. ಇದರ ಸದುಪಯೋಗ ಪಡೆಸಿಕೊಳ್ಳುವಂತೆ ನಾವಿಕ ಅಧ್ಯಕ್ಷರಾದ ಸುರೇಶ್‌ ರಾಮಚಂದ್ರ ಕೋರಿದ್ದಾರೆ.

ಸಮ್ಮೇಳನಾಧ್ಯಕ್ಷ ಡಾ.ಮನಮೋಹನ್‌ ಕಟಪಾಡಿ, ಸಮ್ಮೇಳನ ಉಪಾಧ್ಯಕ್ಷ ಡಾ.ಸುರೇಶ್‌ ಶ್ರಾಫ್‌, ಸಹ ಸಂಚಾಲಕ ಶ್ರೀಅರುಣ್‌ ಕುಮಾರ್‌, ಪುಷ್ಪಲತಾ ನವೀನ್‌ ಮತ್ತು ಆರುಡಿ ರಾಜಗೋಪಾಲ್‌ ಸಮ್ಮೇಳನದ ನೇತೃತ್ವ ವಹಿಸಿಕೊಂಡಿದ್ದಾರೆ.