"ಗೋ ಪೂಜಕರಾಗಿರುವ ನರೇಂದ್ರ ಮೋದಿ ತನ್ನ ರಾಜಕಾರಣ ಮತ್ತು ರಾಜತಾಂತ್ರಿಕ ಮಾರ್ಗಗಳಿಂದ ಎಷ್ಟೇ ಶಕ್ತಿ ಸಂಪಾದಿಸಿದರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಹಿಂದ್'ನಲ್ಲಿ ಇಸ್ಲಾಂ ಧ್ವಜ ಸ್ಥಾಪನೆ ಮಾಡುತ್ತೇವೆ. ಹಿಂದೂ ಮುಖಂಡರನ್ನ ಸರಪಳಿಯಲ್ಲಿ ಕಟ್ಟಿ ನಾವು ಎಳೆದೊಯ್ಯುತ್ತೇವೆ" ಎಂದು ಝಾಕಿರ್ ಮುಸಾ ಈ ಧ್ವನಿ ಮುದ್ರಿಕೆಯಲ್ಲಿ ಹೇಳಿದ್ದಾನೆ.

ಶ್ರೀನಗರ(ಸೆ. 01): ಪ್ರಧಾನಿ ನರೇಂದ್ರ ಮೋದಿಗೆ ತಾಕತ್ತಿದ್ದರೆ ಹಿಂದೂಸ್ಥಾನದಲ್ಲಿ ಇಸ್ಲಾಂ ಧ್ವಜ ಸ್ಥಾಪನೆಯಾಗುವುದನ್ನು ತಡೆಯಲಿ ಎಂದು ಕಾಶ್ಮೀರದ ಮೋಸ್ಟ್ ವಾಂಟೆಡ್ ಉಗ್ರ ಝಾಕಿರ್ ಮುಸಾ ಸವಾಲು ಹಾಕಿದ್ದಾನೆ. ಭಾರತದಲ್ಲಿ ಇಸ್ಲಾಂ ಧರ್ಮ ಸ್ಥಾಪನೆಯಾಗುವುದು ಖಚಿತ. ಹಿಂದೂ ಆಡಳಿತಗಾರರನ್ನು ಸರಪಳಿ ಹಾಕಿ ದರದರನೆ ಎಳೆದೊಯ್ಯುವ ಕಾಲ ಬರುತ್ತದೆ ಎಂದು ಈ ಉಗ್ರ ಹೇಳಿದ್ದಾನೆ. ಅಲ್'ಖೈದಾದ ಕಾಶ್ಮೀರೀ ಅಂಗವಾದ ಅನ್ಸಾರ್ ಘಾಜವತುಲ್ ಹಿಂದ್ ಸಂಘಟನೆಯ ಮುಖ್ಯಸ್ಥರಾಗಿರುವ ಝಾಕಿರ್ ಮೂಸಾ ಮೇಲಿನ ಮಾತುಗಳನ್ನಾಡಿರುವ ಆಡಿಯೋವೊಂದು ಯೂಟ್ಯೂಬ್'ನಲ್ಲಿ ಬಿಡುಗಡೆಯಾಗಿದೆ.

"ಗೋ ಪೂಜಕರಾಗಿರುವ ನರೇಂದ್ರ ಮೋದಿ ತನ್ನ ರಾಜಕಾರಣ ಮತ್ತು ರಾಜತಾಂತ್ರಿಕ ಮಾರ್ಗಗಳಿಂದ ಎಷ್ಟೇ ಶಕ್ತಿ ಸಂಪಾದಿಸಿದರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಹಿಂದ್'ನಲ್ಲಿ ಇಸ್ಲಾಂ ಧ್ವಜ ಸ್ಥಾಪನೆ ಮಾಡುತ್ತೇವೆ. ಹಿಂದೂ ಮುಖಂಡರನ್ನ ಸರಪಳಿಯಲ್ಲಿ ಕಟ್ಟಿ ನಾವು ಎಳೆದೊಯ್ಯುತ್ತೇವೆ" ಎಂದು ಝಾಕಿರ್ ಮುಸಾ ಈ ಧ್ವನಿ ಮುದ್ರಿಕೆಯಲ್ಲಿ ಹೇಳಿದ್ದಾನೆ.

ಪಾಕಿಸ್ತಾನವೂ ನಮ್ಮ ವೈರಿ:
ಅಮೆರಿಕವನ್ನು ಸಂತುಷ್ಟಿಪಡಿಸಲು ಪಾಕಿಸ್ತಾನ ಸರಕಾರವು ಕಾಶ್ಮೀರೀ ಜಿಹಾದ್ ಹೋರಾಟಗಾರರ ಬೆನ್ನಿಗೆ ಚೂರಿಹಾಕಿದೆ ಎಂದು ಝಾಕಿರ್ ಮುಸಾ ಆರೋಪಿಸಿದ್ದಾನೆ. "ಪಾಕಿಸ್ತಾನ ಸರಕಾರವು ಜಿಹಾದಿ ಹೋರಾಟಗಾರರ ತರಬೇತಿ ಶಿಬಿರಗಳನ್ನು ಮುಚ್ಚಿತು. ಕಾಶ್ಮೀರೀ ಹೋರಾಟಗಾರರನ್ನು ಕೊಲ್ಲಲಾಯಿತು; ಜೈಲಿಗೆ ಅಟ್ಟಲಾಯಿತು. ಭಾರತದೊಂದಿಗೆ ಮಾತುಕತೆ ಆಡುವ, ಕ್ರಿಕೆಟ್ ಆಡುವ ಹೆಸರಿನಲ್ಲಿ ಪಾಕಿಸ್ತಾನದ ಸರಕಾರ ಮತ್ತು ಸೇನೆ ಕಾಶ್ಮೀರೀ ಜಿಹಾದಿಗೆ ದ್ರೋಹ ಬಗೆದಿವೆ. ಕಾಶ್ಮೀರದಲ್ಲಿ ಜಿಹಾದಿಯು ಜೀವಂತವಾಗಿದೆ ಎಂದರೆ ಅದಕ್ಕೆ ಯಾವುದೇ ದೇಶದ ನೆರವು ಕಾರಣವಲ್ಲ, ಬದಲಾಗಿ ಅಲ್ಲಾಹುವಿನ ಕೃಪೆ ಮತ್ತು ಹುತಾತ್ಮರ ರಕ್ತ ಕಾರಣ" ಎಂದು ಝಾಕಿರ್ ಮೂಸಾ ಹೇಳಿದ್ದಾನೆ.

ಯಾರಾರು ಟಾರ್ಗೆಟ್?
ಭಾರತೀಯ ಸೇನಾ ಪಡೆಗಳು, ಕಾಶ್ಮೀರದ ಪೊಲೀಸರು, ಭಾರತ ಸರಕಾರದ ಹಿರಿಯ ಅಧಿಕಾರಿಗಳು, ರಾಜತಾಂತ್ರಿಕ ಕಚೇರಿಗಳು, ರಾಜಕೀಯ ಮಧ್ಯವರ್ತಿಗಳು ತಮ್ಮ ಟಾರ್ಗೆಟ್ ಎಂದು ಕಾಶ್ಮೀರಿ ಪ್ರತ್ಯೇಕತಾವಾದಿ ಉಗ್ರ ಝಾಕಿರ್ ಮುಸಾ ಈ ಆಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಇವರಷ್ಟೇ ಅಲ್ಲ, ಭಾರತ ಸರಕಾರಕ್ಕೆ ಇನ್ಫಾರ್ಮರ್ ಆಗಿ ಕೆಲಸ ಮಾಡುವ ಹಾಗೂ ಜಿಹಾದಿ ಹೋರಾಟಕ್ಕೆ ಅಡ್ಡಿಯಾಗುವ ಯಾವುದೇ ವ್ಯಕ್ತಿಯನ್ನೂ ತಾನು ಬಿಡುವುದಿಲ್ಲ ಎಂದು ಈ ಉಗ್ರ ಶಪಥಗೈಯ್ಯುತ್ತಾನೆ,