ಶೇ.100ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಕೇರಳದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು ಸಾಧಿಸಿದ್ದಾರೆ. ವಿಶೇಷ ಅಂದರೆ ವಕ್ಫ್ ವಿವಾದಗಳಿಂದ ಭಾರಿ ಕೋಲಾಹಲ ಸೃಷ್ಟಿಯಾಗಿದ್ದ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಮತದಾರರು ಬಿಜೆಪಿ ಕೈಹಿಡಿದ್ದಾರೆ. ಕೇರಳದ ರಾಜಕೀಯ ಬದಲಾಗುವ ಸೂಚನೆ ನೀಡಿದೆ.

ಏರ್ನಾಕುಲಂ (ಡಿ.13) ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸಂಪೂರ್ಣ ನೆಲಕ್ಕಚ್ಚಿದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಆದರೆ ಈ ಎರಡು ಮೈತ್ರಿಕೂಡಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಕೊಟ್ಟ ಶಾಕ್‌ಗೆ ಬೆಚ್ಚಿ ಬಿದ್ದಿದೆ. ತಿರುವಂತಪುರಂ ಕಾರ್ಪೋರೇಶನ್ ಬಿಜೆಪಿ ಪಾಲಾಗಿದೆ. ಇದೇ ಮೊದಲ ಬಾರಿಗೆ ಕೇರಳ ರಾಜಧಾನಿಯಲ್ಲಿ ಬಿಜೆಪಿ ಮೇಯರ್. ಮತ್ತೊಂದು ವಿಶೇಷ ಅಂದರೆ ಎರ್ನಾಕುಲಂ ಜಿಲ್ಲೆಯ ಮುನಂಬಮ್ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ವಿಶೇಷ ಏನು ಎಂದರೆ, ಶೇಕಡಾ 100ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ವಾರ್ಡ್ ಇದಾಗಿದೆ. ಇಲ್ಲಿಯ ಕ್ರಿಶ್ಚಿಯನ್ ಮತದಾರರು ಬಿಜೆಪಿ ಕೈ ಹಿಡಿದಿದ್ದಾರೆ.

ಅಭ್ಯರ್ಥಿಯೇ ಸಿಗದ ವಾರ್ಡ್‌ನಲ್ಲಿ ಬಿಜೆಪಿಗೆ ಗೆಲುವು

ಮುನಂಬಮ್ ವಾರ್ಡ್ ಸಂಪೂರ್ಣ ಕ್ರಶ್ಚಿಯನ್ ಜನಸಂಖ್ಯೆ ಹೊಂದಿದೆ. 500ಕ್ಕೂ ಹೆಚ್ಚು ಕ್ರಿಶ್ಚಿಯನ್ ಕುಟುಂಬಗಳು ಈ 7 ಕ್ಷೇತ್ರದಲ್ಲಿ ನೆಲೆಸಿದ್ದಾರೆ. ಈ ವಾರ್ಡ್‌ನಲ್ಲಿ ಈ ಹಿಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿಗೆ ಅಭ್ಯರ್ಥಿಯೇ ಸಿಗುತ್ತಿರಲಿಲ್ಲ. ಪಕ್ಕದ ವಾರ್ಡ್, ಅಥವಾ ಅದೇ ವಾರ್ಡ್‌ನಿಂದ ಮನ ಒಲಿಸಿ ಅಭ್ಯರ್ಥಿ ನಿಲ್ಲಿಸಿದರೂ 10 ಮತ ಪಡೆಯುವುದು ಪ್ರಯಾಸವಾಗಿತ್ತು. ಇದೀಗ ಅದೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭರ್ಜರಿ ಗೆಲುವು ದಾಖಲಿಸಿದೆ.

ಮುನಂಬಮ್ ವಾರ್ಡ್‌ನಲ್ಲಿ ಬಿಜೆಪಿ ಗೆಲುವಿಗೆ ಕಾರಣವೇನು?

ಕೇರಳದಲ್ಲಿ ಮೂರನೇ ಪಾರ್ಟಿಯಾಗಿದ್ದ ಬಿಜೆಪಿ ಇದೀಗ ನಿಧಾನವಾಗಿ ಪ್ರಮುಖ ಪಾರ್ಟಿಯಾಗಿ ಬೆಳೆಯುತ್ತಿದೆ. ಈ ಸ್ಥಳೀಯ ಸಂಸ್ಥೆ ಚುನಾವಣೆ ಇದರ ಸೂಚನೆ ನೀಡಿದೆ. ಪ್ರಧಾನಿ ಮೋದಿ ಆಡಳಿತ ಒಂದು ಕಾರಣ ನಿಜ. ಆದರೆ ಮನಂಬಮ್ ವಾರ್ಡ್‌ನ ಅಸಲಿ ಕತೆ ಬೇರೆ ಇದೆ. ಮನಂಬಮ್ ದೇಶಾದ್ಯಂತ ಭಾರಿ ಸುದ್ದಿ ಮಾಡಿದ ಕ್ಷೇತ್ರ. ಕಾರಣ ವಕ್ಫ್ ಬೋರ್ಡ್ ಇಲ್ಲಿನ ಎಲ್ಲಾ ಕ್ರಿಶ್ಚಿಯನ್ ಕುಟುಂಬಕ್ಕೆ ನೋಟಿಸ್ ನೀಡಿ ಜಾಗ ಖಾಲಿ ಮಾಡುವಂತೆ ಸೂಚಿಸಿತ್ತು. ಕ್ರಿಶ್ಚಿಯನ್ ನಿವಾಸಿಗಳು ಇದರ ವಿರುದ್ದ ಪ್ರತಿಭಟನೆ ಆರಂಭಿಸಿದ್ದರು. ಮುನಂಬಮ್ ವಿಚಾರವನ್ನು ಬಿಜೆಪಿ ಪ್ರಮುಖವಾಗಿ ತೆಗೆದುಕೊಂಡು ಹೋರಾಟ ಆರಂಭಿಸಿತ್ತು. ಬರೋಬ್ಬರಿ 400 ದಿನ ಮುನಂಬಮ್ ನಿವಾಸಿಗಳ ಜೊತೆ ಬಿಜೆಪಿ ಪ್ರತಿಭಟನೆ ಮಾಡಿತ್ತು. ಇತ್ತ ಕಾನೂನು ಹೋರಾಟಕ್ಕೆ ಎಲ್ಲಾ ನೆರವು ನೀಡಿತ್ತು. ಈ ಮೂಲಕ ಕೋರ್ಟ್ ಹೋರಾಟದಲ್ಲಿ ವಕ್ಫ್ ನೋಟಿಸ್ ರದ್ದು ಮಾಡಿ ಕ್ರಿಶ್ಚಿಯನ್ ಕುಟುಂಬದ ಆತಂಕ ದೂರ ಮಾಡಿತ್ತು. ಈ ಹೋರಾಟದಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ಕೇಂದ್ರದಲ್ಲಿ ಒಗ್ಗಟ್ಟಾಗಿ ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆಗೆ ಭಾರಿ ವಿರೋಧ ವ್ಯಕ್ತಪಡಿಸಿದೆ. ಇದರ ಕಾರಣ ಕೇರಳದಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ವಕ್ಫ್ ಪರವಾಗಿ ನಿಂತುಕೊಂಡಿತ್ತು. ಆದರೆ ಬಿಜೆಪಿ ನಿವಾಸಿಗಳ ಪರ ನಿಂತುಕೊಂಡಿತ್ತು. ಇದೇ ಕಾರಣದಿಂದ ಮುನಂಬಮ್ ಕ್ರಿಶ್ಚಿಯನ್ ಮತದಾರರು ಬಿಜೆಪಿಗೆ ಅದ್ಭುತ ಗೆಲುವು ನೀಡಿದ್ದಾರೆ.

ಮುನಂಬಮ್ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಕುಂಜುಮೋನ್ ಆಗಸ್ಟಿನ್ 28 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕೇರಳ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ನೀಡಿದ ಪ್ರದರ್ಶನ ಎಲ್‌ಡಿಎಫ್ ಹಾಗೂ ಯುಡಿಎಫ್ ನಿದ್ದೆಗೆಡಿಸಿದೆ. ಬಿಜೆಪಿಯ ಆತ್ಮವಿಶ್ವಾಸ ಹೆಚ್ಚಾಗಿದೆ. 2026ರ ಕೇರಳ ವಿಧಾನಸಭೆ ಚುನಾವಣೆಯಯಲ್ಲಿ ಬಿಜೆಪಿ ಇತಿಹಾಸ ಬರೆಯುವ ಸೂಚನೆ ನೀಡಿದೆ.