Asianet Suvarna News Asianet Suvarna News

ಯುವ ಕಾಂಗ್ರೆಸ್ ಅಧ್ಯಕ್ಷನ ಬರ್ಬರ ಕೊಲೆ

ಯೂತ್ ಕಾಂಗ್ರೆಸ್ ಅಧ್ಯಕ್ಷ ಅರುಣ್ ಎಂಬಾತನನ್ನು ಯಲಹಂಕದ ಅಲ್ಲಾಳ ಸಂದ್ರದಲ್ಲಿ ತಡರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಳ್ಳಾಲ ಸಂದ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್ ಎಂಬಾತ ಹತ್ಯೆಗೀಡಾಗಿದ್ದಾರೆ.

Youth Congress President Arun murdered in Bengaluru
Author
Bengaluru, First Published Sep 24, 2018, 10:11 AM IST

ಬೆಂಗಳೂರು (ಸೆ. 24): ಕಾರಿನಲ್ಲಿ ಹೊರಟಿದ್ದ ಯಲಹಂಕ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಯಲಹಂಕದ ಅಲ್ಲಾಳಸಂದ್ರದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಅಲ್ಲಾಳಸಂದ್ರ ನಿವಾಸಿ ಅರುಣ್‌ ಕುಮಾರ್‌ (27) ಮೃತ ಮುಖಂಡ. ಘಟನೆಯಲ್ಲಿ ಅರುಣ್‌ ಸಂಬಂಧಿ ಅಭಿಷೇಕ್‌ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ರಿಯಲ್‌ ಎಸ್ಟೇಟ್‌ ಹಾಗೂ ಹಣಕಾಸಿನ ವ್ಯವಹಾರ ಹೊಂದಿದ್ದ ಅರುಣ್‌ ರಾಜಕೀಯವಾಗಿ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿದ್ದರು. ಕಳೆದ ಎರಡು ಬಾರಿ ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಭಾವಗೊಂಡಿದ್ದ ಗೋಪಾಲಕೃಷ್ಣ ಅವರಿಗೆ ಅರುಣ್‌ ಆಪ್ತರಾಗಿದ್ದರು. ಹೀಗಾಗಿ ಅವರನ್ನು ಯಲಹಂಕ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಅರುಣ್‌ ಭಾನುವಾರ ರಾತ್ರಿ ಅಲ್ಲಾಳಸಂದ್ರ ಗೇಟ್‌ ಬಳಿ ಕಾರು ನಿಲುಗಡೆ ಮಾಡಿ ಸಿನಿಮಾ ವೀಕ್ಷಿಸಲು ಸಂಬಂಧಿ ಅಭಿಷೇಕ್‌ ಹಾಗೂ ಇತರ ಸ್ನೇಹಿತರ ಜತೆ ಮತ್ತೊಂದು ಕಾರಿನಲ್ಲಿ ಯಶವಂತಪುರಕ್ಕೆ ತೆರಳಿದ್ದರು. ಸಿನಿಮಾ ನೋಡಿಕೊಂಡು ಪುನಃ ಮಧ್ಯರಾತ್ರಿ 12ರ ಸುಮಾರಿಗೆ ಅಲ್ಲಾಳಸಂದ್ರ ಗೇಟ್‌ ಬಳಿ ಬಂದಿದ್ದ ಅರುಣ್‌ ಜಂಕ್ಷನ್‌ನಲ್ಲಿ ನಿಲುಗಡೆ ಮಾಡಿದ್ದ ಕಾರು ತೆಗೆಯಲು ಮುಂದಾಗಿದ್ದರು. ಈ ವೇಳೆ ಏಕಾಏಕಿ ನಾಲ್ಕು ಮಂದಿ ದುಷ್ಕರ್ಮಿಗಳು ಅರುಣ್‌ ಮೆಲೆ ಎರಗಿ ಮಾರಕಾಸ್ತ್ರದಿಂದ ಮನಬಂದಂತೆ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಜತೆಗಿದ್ದ ಸಂಬಂಧಿ ಅಭಿಷೇಕ್‌ನನ್ನು ವಿಚಾರಣೆ ನಡೆಸಿದ್ದು, ಆರೋಪಿಗಳು ಮುಖಕ್ಕೆ ಬಟ್ಟೆಕಟ್ಟಿದ್ದರು. ಹೀಗಾಗಿ ಅವರ ಚಹರೆ ನೋಡಲು ಸಾಧ್ಯವಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಕಾಂಗ್ರೆಸ್‌ ಮುಖಂಡರ ಬೆಂಬಲ ಇದ್ದ ಕಾರಣ ಅರುಣ್‌ ಯಲಹಂಕದಲ್ಲಿ ಹಲವು ಗಲಾಟೆಗಳಲ್ಲಿ ಭಾಗಿಯಾಗಿದ್ದ. ಆದರೆ ಪ್ರಭಾವಿಗಳ ಒತ್ತಡದಿಂದ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಈ ಸಂಬಂಧ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಅರುಣ್‌ ಕುಮಾರ್‌ ಒಳ್ಳೆ ಹುಡುಗನಾಗಿದ್ದು, ಯಾರ ತಂಟೆಗೂ ಹೋಗುತ್ತಿರಲಿಲ್ಲ. ಮುಂದಿನ ತಿಂಗಳು ಆತನಿಗೆ ಮದುವೆ ನಿಶ್ಚಯವಾಗಿತ್ತು. ರಾಜಕೀಯವಾಗಿ ಅರುಣ್‌ ಯಾರ ಬಳಿಯೂ ದ್ವೇಷ ಹೊಂದಿರಲಿಲ್ಲ. ಯಾವ ಕಾರಣಕ್ಕೆ ಆತನ ಹತ್ಯೆ ನಡೆದಿದೆ ಎಂಬುದರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಯಲಹಂಕ ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ಆಗ್ರಹಿಸಿದ್ದಾರೆ.

Follow Us:
Download App:
  • android
  • ios