ಬೆಂಗಳೂರು (ಜು.): ಮೈತ್ರಿ ಸರ್ಕಾರದಲ್ಲೀಗ ಹೈವೋಲ್ಟೇಜ್ ಡ್ರಾಮಾ ನಡೆಯುತ್ತಿದ್ದು, ಜನಪ್ರತಿನಿಧಿಗಳು ಒಬ್ಬೊಬ್ಬರೇ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಯಶವಂತಪುರ ಶಾಸಕ ಎಸ್‌. ಟಿ. ಸೋಮಶೇಖರ್ ತಾವು ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ್ದು, 'ಶಾಸಕ ಸ್ಥಾನಕ್ಕಷ್ಟೇ ರಾಜೀನಾಮೆ ನೀಡಿದ್ದೇನೆ, ಪಕ್ಷಕ್ಕಲ್ಲ' ಎಂದು ಹೇಳಿದ್ದಾರೆ.

ಶಾಸಕರು ರಾಜೀನಾಮೆ ಸಲ್ಲಿಸಿರುವುದು ಕ್ರಮ ಬದ್ಧವಾಗಿಲ್ಲ ಎಂದು ಹೇಳಿರೋದಕ್ಕೆ ಪ್ರತಿಕ್ರಿಯಿಸಿ, 'ಆರು ಗಂಟೆ ಒಳಗೆ ರಾಜೀನಾಮೆ ಸಲ್ಲಿಸುತ್ತೇನೆ. ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸುತ್ತೇವೆ. ಮುಂಬೈನಿಂದಲೂ ಅತೃಪ್ತ ಶಾಸಕರೆಲ್ಲ ಬಂದು ಸ್ಪೀಕರ್ ಬಳಿ ಮಾತನಾಡುತ್ತೇವೆ. ಬಿಜೆಪಿಯವರು ನಮ್ಮನ್ನ ಆಟ ಆಡಿಸುತ್ತಿದ್ದಾರೆ ಅನ್ನೋದು ಸುಳ್ಳು' ಎಂದಿದ್ದಾರೆ.

ಸಮಸ್ಯೆ ಹೇಳ್ಕೊಂಡಾಗ ನೆಗ್ಲೆಕ್ಟ್ ಮಾಡಿದ್ರು:

ನಾವು ವೈಯಕ್ತಿಕ ಕಾರಣಗಳಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಡಿಕೆಶಿಗೆ ಮುಂಬೈಗೆ ಬರೋದು ಬೇಡ ಅಂತ ಹೇಳಿದ್ದೆ. ಆದರೂ ಬಂದಿದ್ದಾರೆ. ಅವರ ಮನೆಗೆ ಹೋಗಿ ಒಂದು‌ ಗಂಟೆಗಳ ಕಾಲ ನಮ್ಮ ಸಮಸ್ಯೆ ಹೇಳಿ ಕೊಂಡಿದ್ದೆವು. ಸಮಸ್ಯೆ ಬಗೆಹರಿಸಿ ಅಂತ ಕೇಳಿಕೊಂಡಿದ್ವಿ. ಆದ್ರೆ ನಿರ್ಲಕ್ಯ ಮಾಡಿದ್ರು. ನಿನ್ನೆ ರಾತ್ರಿ ಡಿಕೆಶಿ ಮನೆ ಹತ್ರ ಬಂದಿದ್ದರು ಎಂಬ ಮಾಹಿತಿ ಇದೆ. ಆದರೆ ನಾನು ಯಾರನ್ನು ಭೇಟಿ ಮಾಡೋದಿಲ್ಲ. ನಾವು ಹಿರಿಯರನ್ನೂ ಭೇಟಿ ಮಾಡಿ ಹಲವು ಬಾರಿ‌ ನಮ್ಮ ಸಮಸ್ಯೆ ಹೇಳಿಕೊಂಡಿದ್ದೆವು. ಪ್ರಯೋಜನವಾಗಲಿಲ್ಲ. ಬಗೆಹರಿಸುತ್ತೇನೆ ಎಂದು ಭರವಸೆ ನೀಡಿ‌ ಪದೇ ಪದೇ ನಿರಾಸೆ ಮಾಡಿದ್ರು' ಅಂತ ಸೋಮಶೇಖರ್ ಹೇಳಿದ್ದಾರೆ.

ಶಾಸಕರ ಸಮಸ್ಯೆ ಬಗ್ಗೆ ಸಿಎಂಗೂ ಗೊತ್ತಿತ್ತು:

ಸಿಎಂ ಅವರ ಜೊತೆಗೂ ನಮ್ಮ ಸಮಸ್ಯೆ ಏನೆಂಬುದನ್ನು ವೈಯಕ್ತಿಕವಾಗಿ ಹೇಳಿಕೊಂಡಿದ್ದೆವು. ಸಿಎಂ ಕೂಡಾ ನಮ್ಮ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಸಮಸ್ಯೆ ಬಗೆಹರಿಸೋದಿಲ್ಲ ಅಂದ್ರೆ ನಾವು ಪಕ್ಷದಿಂದ ಹಿಂದೆ ಸರೀಯೋದಾಗಿ ಹೇಳಿದ್ದೆವು. ಈಗ ನಮ್ಮ ನಿರ್ಧಾರವನ್ನು ನಾವು ತೆಗೆದು ಕೊಂಡಿದ್ದೇವೆ. ಮೈತ್ರಿ ಸರ್ಕಾರದ ಕೆಲ ಒಡಂಬಡಿಕೆಗಳು ನಮಗೆ ಇಷ್ಟವಾಗಿರಲಿಲ್ಲ. ಇವರು ಸರ್ಕಾರಿ ಅಧಿಕಾರಿಗಳ ಮೂಲಕ‌ ಕೆಲಸ ಮಾಡಿಸಿಕೊಳ್ಳೋದಾದ್ರೆ ಶಾಸಕರಾಗಿ ನಾವು ಯಾಕೆ ಇರಬೇಕು‌ ? ಈಗ ಬಂದು ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುತ್ತಿದ್ದಾರೆ .ಆದ್ರೆ ಕಾಲ ಮೀರಿ ಹೋಗಿದೆ. ಸಂಜೆ ಎಲ್ಲರೂ ಒಟ್ಟಿಗೆ ಸ್ಪೀಕರ್ ಬಳಿಬರುತ್ತೇವೆ . ಸ್ಪೀಕರ್ ಹೊರತು ಪಡಿಸಿ ಯಾರ ಜೊತೆ ಮಾತನಾಡೊಲ್ಲ, ಭೇಟಿಯಾಗೋದಿಲ್ಲ' ಎಂದಿದ್ದಾರೆ.

ಮುಂಬೈನಿಂದ ಸೋಮಶೇಖರ್ ಕೊಟ್ಟ ಏಟಿಗೆ ಥರಗುಟ್ಟಿ ಹೋದ ದೋಸ್ತಿ ನಾಯಕರು