ರಾಜ್ಯ ಸರ್ಕಾರದ ವಿರುದ್ಧ ಮೈಸೂರು ಮಹಾರಾಜ ಯದುವೀರ್ ಒಡೆಯರ್ ವಾಗ್ದಾಳಿ ನಡೆಸಿದ್ದಾರೆ.  ಜುಲೈ 18ರಂದು ಜಯಚಾಮರಾಜೇಂದ್ರ ಒಡೆಯರ್ ಜನ್ಮದಿನ ಆಚರಣೆ ಮಾಡಲಾಗಿದ್ದು ಈ ವೇಳೆ ಅವರನ್ನು ಸ್ಮರಿಸದ ಸರ್ಕಾರ ವಿರುದ್ಧ ಚಾಟಿ ಬೀಸಿದ್ದಾರೆ. 

ಮೈಸೂರು : ಜುಲೈ 18ರಂದು ಜಯಚಾಮರಾಜೇಂದ್ರ ಒಡೆಯರ್ ಜನ್ಮದಿನ ಆಚರಣೆ ಮಾಡಲಾಗಿದ್ದು, ಈ ವೇಳೆ ಒಡೆಯರ್ ಅವರನ್ನು ಸ್ಮರಿಸದ ಸರ್ಕಾರದ ವಿರುದ್ಧ ಯದುವೀರ್ ಒಡೆಯರ್ ಚಾಟಿ ಬೀಸಿದ್ದಾರೆ. 

ತಾತನಿಗೆ ಅಕ್ಷರ ನಮನ ಸಲ್ಲಿಸಿ ಮಾತನಾಡಿದ ಯದುವೀರ್ ಒಡೆಯರ್, ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇನ್ನು ಇದೇ ವೇಳೆ ರಾಜವಂಶಸ್ಥರ ಖಾಸಗಿ ಮುಖವಾಣಿ ಗಂಡಬೇರುಂಡದ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದ್ದಾರೆ. 

ಈ ಸಂಚಿಕೆಯಲ್ಲಿ ಮೈಸೂರು ಸಂಸ್ಥಾನಕ್ಕೆ ಒಡೆಯರ್ ಕೊಡುಗೆಗಳ ಮಾಹಿತಿಯನ್ನು ನೀಡಲಾಗಿದೆ. ರಾಜವಂಶಸ್ಥರ ಅಮೂಲ್ಯ ಅಲ್ಬಂನಲ್ಲಿರುವ ಫೋಟೋ ಬಳಸಿ ಸಚಿತ್ರ ವರದಿ ತಯಾರು ಮಾಡಲಾಗಿದೆ. 

ಜಯಚಾಮರಾಜೇಂದ್ರ ಒಡೆಯರ್ ಅವರ 99ನೇ ವರ್ಷದ ಜನ್ಮದಿನವನ್ನು ಸರ್ಕಾರ ಆಚರಣೆ ಮಾಡಲು ಮರೆತಿದ್ದು, ಶತಮಾನೋತ್ಸವವನ್ನಾದರೂ ಆಚರಿಸಲು ಇದುವೇ ಸಂದೇಶ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.