ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿಗೆ ಸಡ್ಡು ಹೊಡೆಯಲು ಕಾರ್ಯತಂತ್ರ ರೂಪಿಸುತ್ತಿರುವ ಜೆಡಿಎಸ್, ವಿವಿಧ ಸಮುದಾಯಗಳನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಿರುವುದರ ಜತೆಗೆ ಪಕ್ಷದತ್ತ ಹೆಚ್ಚಿನ ಜನರನ್ನು ಆಕರ್ಷಿಸಲು ಹೊಸ ತಂತ್ರಗಾರಿಕೆಯ ಮೊರೆ ಹೋಗಿದೆ.

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿಗೆ ಸಡ್ಡು ಹೊಡೆಯಲು ಕಾರ್ಯತಂತ್ರ ರೂಪಿಸುತ್ತಿರುವ ಜೆಡಿಎಸ್, ವಿವಿಧ ಸಮುದಾಯಗಳನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಿರುವುದರ ಜತೆಗೆ ಪಕ್ಷದತ್ತ ಹೆಚ್ಚಿನ ಜನರನ್ನು ಆಕರ್ಷಿಸಲು ಹೊಸ ತಂತ್ರಗಾರಿಕೆಯ ಮೊರೆ ಹೋಗಿದೆ.

ರಾಜ್ಯ ಪ್ರವಾಸ ಕೈಗೊಂಡು ಜನರ ಸಮಸ್ಯೆ ಆಲಿಸುತ್ತಿರುವ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ಪತ್ರದ ಮೂಲಕ ಕಷ್ಟ-ಕಾರ್ಪಣ್ಯಗಳನ್ನು ತಿಳಿಸುವಂತೆ ಜನತೆಗೆ ಕರೆ ನೀಡಿದ್ದಾರೆ. ಈ ಮೂಲಕ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ರಾಜ್ಯ ಪ್ರವಾಸ ಕೈಗೊಂಡಿರುವ ವೇಳೆಯಲ್ಲಿ ಹಲವು ಬಾರಿ ಜನರು ತಮ್ಮ ಭಾವನೆಯನ್ನು ಹಂಚಿಕೊಳ್ಳಲು ಪ್ರಯತ್ನಪಟ್ಟಿರುವುದನ್ನು ಗಮನಿಸಿದ್ದೇನೆ. ಆದರೆ, ಅತಿಯಾದ ಜನಜಂಗುಳಿ ಹಾಗೂ ನೂಕುನುಗ್ಗಲಿನಲ್ಲಿ ಸಾಕಷ್ಟು ಜನರು ತಮ್ಮ ನೋವು-ನಲಿವುಗಳನ್ನು ನನ್ನ ಬಳಿ ಹಂಚಿಕೊಳ್ಳಲು ಸಾಧ್ಯವಾಗದೆ ನಿರಾಶರಾಗಿ ತೆರಳಿರುವುದನ್ನು ಅಸಹಾಯಕತೆಯಿಂದ ಗಮನಿಸಿದ್ದೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಭಾವನೆಗಳಿಗೂ ಸ್ಪಂದಿಸಬೇಕೆಂಬ ಹಂಬಲ ನನ್ನಲ್ಲಿದೆ. ಹಾಗೆಯೇ ರಾಜ್ಯದ ಅಭಿವೃದ್ಧಿ ವಿಚಾರವಾಗಿ ಜನರ ದೃಷ್ಟಿಕೋನ, ಸಲಹೆ, ಸೂಚನೆಗಳನ್ನು ತಿಳಿಯಬೇಕಿದೆ. ಈ ಹಿನ್ನೆಲೆಯಲ್ಲಿ ಪತ್ರದ ಮೂಲಕ ತಿಳಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ರಾಜ್ಯದ ಜನತೆಯು ತಮ್ಮ ನೋವು, ನಲಿವು, ಯಾವುದೇ ಸಲಹೆ, ಸೂಚನೆಗಳು ಏನೇ ಇರಲಿ ನಾನು ನಿಮ್ಮಲ್ಲಿ ಒಬ್ಬನೆಂದು ಭಾವಿಸಿ ಪತ್ರದ ಮೂಲಕ ಹಂಚಿಕೊಳ್ಳಬೇಕು ಎಂದು ತಮ್ಮಲ್ಲಿ ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ತಮ್ಮ ಪತ್ರವನ್ನು ‘ಎಚ್.ಡಿ.ಕುಮಾರಸ್ವಾಮಿ, ರಂಕ ಎಂಕ್ಲೇವ್ ಅಪಾರ್ಟ್‌ಮೆಂಟ್, 217, ಸರ್ ಸಿ.ವಿ.ರಾಮನ್ ರಸ್ತೆ, ಬೆಂಗಳೂರು-560080’ ವಿಳಾಸಕ್ಕೆ ಕಳುಹಿಸಬೇಕು ಎಂದು ಕೋರಿದ್ದಾರೆ.