ಈ ಕೃತಕ ಬುದ್ಧಿಮತ್ತೆ ರಾಜಕಾರಣಿ ಸ್ಥಳೀಯ ವಿಚಾರಗಳು, ವಸತಿ, ಶಿಕ್ಷಣ ಹಾಗೂ ವಲಸೆಗೆ ಸಂಬಂಧಿಸಿದ ನೀತಿಗಳ ಕುರಿತು ಜನರು ಏನೇ ಪ್ರಶ್ನೆ ಕೇಳಿದರೂ ಉತ್ತರ ನೀಡುತ್ತಾನೆ.
ಮೆಲ್ಬರ್ನ್(ನ.27): ಸ್ಥಳೀಯ ಸಮಸ್ಯೆಗಳ ಬಗ್ಗೆ ದೂರು ಹೇಳಲು ರಾಜಕಾರಣಿಗಳ ಬಳಿ ಹೋದರೆ ನೆಪ ಹೇಳುತ್ತಾರೆ, ಕೈಗೆ ಸಿಗದೇ ತಪ್ಪಿಸಿಕೊಳ್ಳುತ್ತಾರೆ ಎಂದು ಜನಸಾಮಾನ್ಯರು ದೂರುವುದು ಸರ್ವೇ ಸಾಮಾನ್ಯ.
ಆದರೆ ಅಂತಹದ್ದಕ್ಕೆಲ್ಲಾ ಈಗ ನ್ಯೂಜಿಲೆಂಡ್ ವಿಜ್ಞಾನಿಗಳು ಪರಿಹಾರ ಹುಡುಕಿದ್ದಾರೆ. ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿ ಜೆನ್ಸ್)ಯ ರಾಜಕಾರಣಿಯೊಬ್ಬನನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕೃತಕ ಬುದ್ಧಿಮತ್ತೆ ರಾಜಕಾರಣಿ ಸ್ಥಳೀಯ ವಿಚಾರಗಳು, ವಸತಿ, ಶಿಕ್ಷಣ ಹಾಗೂ ವಲಸೆಗೆ ಸಂಬಂಧಿಸಿದ ನೀತಿಗಳ ಕುರಿತು ಜನರು ಏನೇ ಪ್ರಶ್ನೆ ಕೇಳಿದರೂ ಉತ್ತರ ನೀಡುತ್ತಾನೆ.
ಇದಕ್ಕೆ ‘ಸ್ಯಾಮ್’ ಎಂದು ಹೆಸರಿಡಲಾಗಿದೆ. ನ್ಯೂಜಿಲೆಂಡ್‌ನ 49 ವರ್ಷದ ಉದ್ಯಮಿ ನಿಕ್ ಗಾರಿಟ್‌ಸೆನ್ ಅವರು ಇದರ ಸೃಷ್ಟಿಕರ್ತರು. ಫೇಸ್‌ಬುಕ್ ಮೆಸೆಂಜರ್ ಹಾಗೂ ವೆಬ್‌ಪುಟದಲ್ಲಿನ ಸಮೀಕ್ಷೆ ಮೂಲಕವೂ ಜನರಿಗೆ ಪ್ರತಿಕ್ರಿಯೆ ನೀಡುವುದನ್ನು ‘ಸ್ಯಾಮ್’ ಕಲಿಯುತ್ತಿದ್ದಾನೆ. ಆದರೆ ಇನ್ನೂ ಪರಿಪಕ್ವವಾಗಿಲ್ಲ. 2020ಕ್ಕೆ ನ್ಯೂಜಿಲೆಂಡ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಅಷ್ಟರೊಳಗೆ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಮಟ್ಟಕ್ಕೆ ಅಭಿವೃದ್ಧಿಯಾಗಲಿದ್ದಾನೆ ಎಂದು ನಿಕ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಕೃತಕ ಬುದ್ಧಿಮತ್ತೆ ರಾಜಕಾರಣಿಯ ರಾಜಕೀಯ ಪ್ರವೇಶಕ್ಕೆ ಕಾನೂನು ಪ್ರಕಾರ ಅವಕಾಶವಿಲ್ಲ.
