Asianet Suvarna News Asianet Suvarna News

ಸಾವಿರಾರು ಜನರ ಜೀವ ಉಳಿಸಿದ ಈ ಮಹಾತಾಯಿಗೆ ಮಹಿಳಾ ದಿನದಂದು ಸಲಾಂ ಹೇಳದಿದ್ದರೆ ಹೇಗೆ?

ಅವರ ಹೆಸರು ಡಾ.ಕೃಷ್ಣಾಬಾಯಿ. ಎಲ್ಲಾ ಕಾಲಕ್ಕೂ ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗುವ  ಜೀವ ಅವರದು. ಅವರ ಕತೆ ಕೇಳಿದರೆ, ಆ ಕಾಲದಲ್ಲಿ ಅವರು ಮಾಡಿದ ಸಾಧನೆ ನೋಡಿದರೆ ಯಾರೇ ಆದರೂ ಬೆರಗಾಗಬೇಕು. ಅಂಥಾ ಬದುಕು ಅವರದು.

Women Day Special

ಬೆಂಗಳೂರು (ಮಾ. 08): ಅವರ ಹೆಸರು ಡಾ.ಕೃಷ್ಣಾಬಾಯಿ. ಎಲ್ಲಾ ಕಾಲಕ್ಕೂ ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗುವ  ಜೀವ ಅವರದು. ಅವರ ಕತೆ ಕೇಳಿದರೆ, ಆ ಕಾಲದಲ್ಲಿ ಅವರು ಮಾಡಿದ ಸಾಧನೆ ನೋಡಿದರೆ ಯಾರೇ ಆದರೂ ಬೆರಗಾಗಬೇಕು. ಅಂಥಾ ಬದುಕು ಅವರದು.
ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಕೃಷ್ಣಬಾಯಿಯವರನ್ನು ಅವರ ಕುಟುಂಬದವರು 18 ವರ್ಷ ತುಂಬುವುದರೊಳಗೆ  ವೈದ್ಯರಾದ ಡಾ.ವಾಸುದೇವರಾವ್ ಅವರಿಗೆ ಮದುವೆ ಮಾಡಿಕೊಟ್ಟರು. ಆ ಸಂದರ್ಭದಲ್ಲಿ ಕೃಷ್ಣಾಬಾಯಿ ಓದಿದ್ದು ಕೇವಲ
೮ನೇ ತರಗತಿ. ಅವರಿಬ್ಬರ ಸಂಸಾರ ಚೆಂದಕ್ಕೆ ನಡೆಯುತ್ತಿತ್ತು. ಆದರೆ ವಿವಾಹವಾಗಿ ಐದು ವರ್ಷ ಆಗುವಷ್ಟರಲ್ಲಿ ಆಘಾತ ಬಂದೆರಗಿತು.  ಡಾ. ವಾಸುದೇವರಾವ್ ತೀರಿಕೊಂಡರು. ಆಗ ಈ ದಂಪತಿಗೆ ಒಬ್ಬ ಮಗ ಇದ್ದ. ಅವನ ಹೆಸರು ಬದರಿನಾಥ. ಅವನಿಗಾಗ ಎರಡು ವರ್ಷ.  ಇಡೀ ಕುಟುಂಬವೇ ನೋವಲ್ಲಿತ್ತು. ಪೋಷಕರು ತಮ್ಮ ಮಗಳಿಗೆ  ಚಿಕ್ಕ ವಯಸ್ಸಿಗೆ ಹೀಗಾಯಿತಲ್ಲ ಎಂದು ಕೊರಗುತ್ತಿದ್ದರು. ಆ ಹೊತ್ತಲ್ಲೇ ಕೃಷ್ಣಾಬಾಯಿ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡರು.

ಜನರ ಜೀವ ಉಳಿಸುತ್ತಿದ್ದ ಗಂಡ ವಾಸುದೇವ ರಾವ್ ಅವರಂತೆ ತಾನೂ ವೈದ್ಯಳಾಗುತ್ತೇನೆ ಎಂದರು. 8 ನೇ ತರಗತಿ ಓದಿದ್ದ ಹುಡುಗಿಯೊಬ್ಬಳು ಡಾಕ್ಟರ್ ಆಗುವುದು ಸುಲಭವಾಗಿರಲಿಲ್ಲ. ಆ ಕಾಲದಲ್ಲಂತೂ ಯಾವ ಕಾರಣಕ್ಕೂ ಸಾಧ್ಯವೇ
ಇಲ್ಲದ ಮಾತಾಗಿತ್ತು. ಆದರೆ ತಂದೆ ತಾಯಿ ಬೆಂಬಲಕ್ಕೆ ನಿಂತರು. ಕೃಷ್ಣಾಬಾಯಿ ವೈಧವ್ಯದ ಬವಣೆಯನ್ನು ಲೆಕ್ಕಿಸದೇ ಕಷ್ಟ ಪಟ್ಟು ಓದಿ  ಮೆಟ್ರಿಕ್ ಪಾಸ್ ಮಾಡಿದರು.ಛಲದಿಂದ ನಾಲ್ಕು ವರ್ಷಗಳ ಎಲ್ ಎಂಪಿಯನ್ನು ಪಾಸ್ ಮಾಡಿದರು. ನಂತರ ಕಲ್ಕತ್ತದಲ್ಲಿ ಎರಡೂವರೆ  ವರ್ಷಗಳ ಕಾಲ ಕಂಡೆನ್ಸ್‌ಡ್ (ಕ್ರೋಢೀಕೃತ) ಎಂಬಿಬಿಎಸ್ ಡಿಗ್ರಿ  ಓದಿ ಅದನ್ನೂ ಪಾಸ್ ಮಾಡಿ ವೈದ್ಯರಾಗಿಯೇ ಬಿಟ್ಟರು. ಇಡೀ ಸಮಾಜ ಅವರ ಕಡೆ ತಿರುಗಿ ನೋಡಿತು.
ಅಲ್ಲಿಂದ ಕೃಷ್ಣಾಬಾಯಿ ತಿರುಗಿ ನೋಡಲಿಲ್ಲ. ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ, ಹಾಸನದಲ್ಲೆಲ್ಲಾ ಸರ್ಕಾರಿ ವೈದ್ಯರಾಗಿ  ಸೇವೆ ಸಲ್ಲಿಸಿದರು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಂತೂ ಅವರ  ಮುಖ್ಯ ಸೇವಾಕ್ಷೇತ್ರವಾಗಿತ್ತು. ಎಂಬಿಬಿಎಸ್ ಕಲಿತೆ ಅಂತ ಅವರು ಸುಮ್ಮನೆ ಕೂರಲಿಲ್ಲ. 

ಶಸ್ತ್ರಕ್ರಿಯೆಗಳ ಬಗ್ಗೆ ತಿಳಿದುಕೊಳ್ಳುವ ಹಠದಿಂದ ತೀರ್ಥಹಳ್ಳಿಯಲ್ಲಿ  ಶಸ್ತ್ರಚಿಕಿತ್ಸಾ ತಜ್ಞರಾದ ಡಾ॥ಪಾಲ್‌ರವರ ಹತ್ತಿರ ಹೆಚ್ಚಿನ  ಶಸ್ತ್ರಕ್ರಿಯೆಗಳ ಸೂಕ್ಷ್ಮತೆಗಳನ್ನು ಅರಿತುಕೊಂಡರು. ಅವರ ಕಲಿಕೆಯ ಆಸೆ ಎಷ್ಟುತ್ತು ಅಂತ ಅವರ ಸಮಕಾಲೀನರಾದ ಡಾ॥ನಾಗಲಕ್ಷ್ಮಿ  ಹಾಗೂ ಡಾ॥ ಶ್ಯಾಮಲಾಬಾಯಿ ಈಗಲೂ ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಡಾ॥ಕೃಷ್ಣಾಬಾಯಿ ಶಿವಮೊಗ್ಗದಲ್ಲಿ ಸೇವಾನಿರತರಾಗಿದ್ದಾಗಲೇ ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗದಲ್ಲಿ  ಸ್ನಾತಕೋತ್ತರ ಪದವಿ ಪಡೆಯಲು ಮಂಗಳೂರು ಕೆಎಂಸಿ ಪ್ರಥಮ  ಬ್ಯಾಚ್‌ನಲ್ಲಿ ಸೇರಿಕೊಂಡರು. ಅವರು ಆಗಿನ ಕಾಲದಲ್ಲಿ ಯಾವುದೇ ಅನಸ್ತೇಶಿಯಾ(ಅರವಳಿಕೆ) ಸೌಲಭ್ಯ ಮತ್ತು ಈಗಿನ ಹಾಗೆ  ವೈದ್ಯಕೀಯವಾಗಿ ಅತ್ಯಾಧುನಿಕ ಸೌಲಭ್ಯ, ರಕ್ತನಿಧಿಕೇಂದ್ರಗಳು
ಇಲ್ಲದಿದ್ದ ಸಂದರ್ಭದಲ್ಲಿ ಎಲ್ಲಾ ನ್ಯೂನ್ಯತೆಗಳನ್ನು ಪರಸ್ಪರ ಸಹವರ್ತಿಗಳ ಸಹಾಯದಿಂದ ನಿಭಾಯಿಸಿಕೊಂಡು ಶಿವಮೊಗ್ಗ  ಜಿಲ್ಲೆ, ಚಿಕ್ಕಮಗಳೂರು ಹಾಗೂ ಸುತ್ತಮುತ್ತಲಿನ ಊರುಗಳ ಎಲ್ಲಾ ಹೆಣ್ಣು ಮಕ್ಕಳ ನೋವಿಗೆ ಜೊತೆಯಾಗಿ ಪ್ರಪ್ರಥಮ ಸ್ತ್ರೀರೋಗತಜ್ಞೆ  ಎನಿಸಿಕೊಂಡಿದ್ದಷ್ಟೇ ಅಲ್ಲ, ಅಪಾರ ಜನಪ್ರೀತಿ ಗಳಿಸಿಕೊಂಡರು. ಆಗ ಅವರನ್ನು ಜನ ದೊಡ್ಡಮ್ಮ ಅನ್ನುತ್ತಿದ್ದರು. ಅವರ ಕೆಲಸ  ನೋಡಿಯೇ ಅನೇಕರು ವೈದ್ಯ ವೃತ್ತಿ ಕಡೆಗೆ ಆಕರ್ಷಿತರಾಗಿದ್ದರು.

ಅತ್ಯಾಧುನಿಕ ಸೌಲಭ್ಯಗಳಿಲ್ಲದ ಆ ಕಾಲದಲ್ಲೇ ಲೆಕ್ಕವಿಲ್ಲದಷ್ಟು  ಸಿಸೇರಿಯನ್ ಹೆರಿಗೆಗಳನ್ನು ಹಾಗೂ ಗರ್ಭಕೋಶ ತೆಗೆಯುವ  ಚಿಕಿತ್ಸೆಗಳನ್ನು ಅವಶ್ಯವುಳ್ಳ ಮಹಿಳೆಯರಿಗೆ ಮಾಡಿ ಸಾವಿರಾರು  ಮಹಿಳೆಯರ ನೋವು ನಿವಾರಿಸಿ ಪ್ರಾಣ ಉಳಿಸುವ
ಘನಕಾರ್ಯವನ್ನು ಮಾಡಿದ್ದಾರೆ.  ಮಾತನಾಡುವಾಗ ಬಾಯಿ ಸ್ವಲ್ಪ ಜೋರೆನಿಸಿದರೂ ವಜ್ರಾದಪಿ  ಕಠೋರಾಣಿ ಮೃದೂನಿ ಕುಸುಮಾದಪಿ ಎನ್ನುವ ಹಾಗೆ ರೋಗಿಗಳೊಂದಿಗೆ  ಅಷ್ಟೇ ಪ್ರೀತಿಯಿಂದ ವರ್ತಿಸುತ್ತಿದ್ದರು. ಯಾವುದೇ
ಹಣದ ದುರಾಸೆಯಿಲ್ಲದೆ ಅತ್ಯಂತ ಪ್ರಾಮಾಣಿಕರಾಗಿದ್ದರು. ವರ್ಷದ ಎಲ್ಲಾ ದಿನಗಳಲ್ಲೂ ಹೊರರೋಗಿಗಳನ್ನು ನೋಡುತ್ತಾ,  ಶಸ್ತ್ರಚಿಕಿತ್ಸೆ, ಹೆರಿಗೆ, ಎಲ್ಲವನ್ನೂ ನಿರಂತರವಾಗಿ ನಿಭಾಯಿಸುತ್ತಿದ್ದರಂತೆ.

1973  ರಲ್ಲಿ ಅವರ ನೇತೃತ್ವದಲ್ಲಿ ಆದ ಮೆಗಾ ಟ್ಯುಬೆಕ್ಟಮಿ ಕ್ಯಾಂಪ್‌ನಲ್ಲಿ ಒಂದೇ ಬಾರಿಗೆ 403 ಮಹಿಳೆಯರಿಗೆ  ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದು ಇನ್ನೂ ದಾಖಲೆಯಾಗಿ ಉಳಿದಿದೆ ಎಂದು ಹಿರಿಯ ಮಕ್ಕಳ ತಜ್ಞ ಡಾ॥ ಪಿ.ನಾರಾಯಣ್ ನೆನಪಿಸಿಕೊಳ್ಳುತ್ತಾರೆ. ಡಾ॥ ಕೃಷ್ಣಾಬಾಯಿಯವರು ಸ್ತನದ ಕ್ಯಾನ್ಸರಿಂದ ಬಳಲಿದರೂ ಆರಂಭದಲ್ಲೇ ಆ ಕ್ಯಾನ್ಸರ್ ಗುರುತಿಸಲ್ಪಟ್ಟು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ನಂತರ 35  ವರ್ಷಕ್ಕೂ ಹೆಚ್ಚು ಕಾಲ ಬದುಕಿ ಬಾಳಿದರು. ಅಷ್ಟೇ ಅಲ್ಲ ಅವರಿಗೆ ಹೃದ್ರೋಗದ ತೊಂದರೆಯೂ ಉಂಟಾಗಿ ಸಿ.ಎಂ.ಸಿ ವೇಲೂರಿನ ಆಸ್ಪತ್ರೆಯಲ್ಲಿ  ಪೇಸ್‌ಮೇಕರ್ ಅಳವಡಿಸಿಕೊಂಡೇ ಹಲವಾರು ವರ್ಷ ವೃತ್ತಿಜೀವನವನ್ನು ನಡೆಸಿದರು.
 

Follow Us:
Download App:
  • android
  • ios