ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್ ಯು) ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ಭುಗಿಲೆದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದ ಘಟನೆ ಶನಿವಾರ ರಾತ್ರಿ ನಡೆಯಿತು. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಮತ್ತು ಪೊಲೀಸರಿಗೆ ಗಾಯಗಳಾಗಿವೆ. ಹಿಂಸಾಚಾರದ ಹಿನ್ನೆಲೆಯಲ್ಲಿ, ಅ.2ರ ವರೆಗೆ ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸಲಾಗಿದೆ. ಘಟನೆಯು ರಾಜಕೀಯ ಕೆಸರೆರಚಾಟಕ್ಕೂ ನಾಂದಿ ಹಾಡಿದೆ.

ವಾರಾಣಸಿ(ಸೆ.25): ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್ ಯು) ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ಭುಗಿಲೆದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದ ಘಟನೆ ಶನಿವಾರ ರಾತ್ರಿ ನಡೆಯಿತು. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಮತ್ತು ಪೊಲೀಸರಿಗೆ ಗಾಯಗಳಾಗಿವೆ. ಹಿಂಸಾಚಾರದ ಹಿನ್ನೆಲೆಯಲ್ಲಿ, ಅ.2ರ ವರೆಗೆ ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸಲಾಗಿದೆ. ಘಟನೆಯು ರಾಜಕೀಯ ಕೆಸರೆರಚಾಟಕ್ಕೂ ನಾಂದಿ ಹಾಡಿದೆ.

ಹಾಸ್ಟೆಲ್‌'ಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮೂವರು ಬೈಕ್ ಸವಾರರು ಕಿರುಕುಳ ನೀಡಿದ್ದ ಬಗ್ಗೆ ಮಾತನಾಡಲು ಕುಲಪತಿಯವರ ಭೇಟಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಆಗ ಕೆಲವರು ಕುಲಪತಿಗಳ ಮನೆಗೆ ನುಗ್ಗಲೆತ್ನಿಸಿದರು. ಕೂಡಲೇ ಭದ್ರತಾ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ತಡೆದು, ಪೊಲೀಸರನ್ನು ಕರೆಸಿದರು. ಆಗ ಕೆಲವು ಹೊರಗಿನವರು ಕಲ್ಲು ತೂರಾಟವನ್ನೂ ಆರಂಭಿಸಿದರು. ಈ ವೇಳೆ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಘಟನೆಯ ಬಳಿಕ ವಿವಿಯ ಒಳಗೆ ಮತ್ತು ಹೊರಗೆ, ಸುಮಾರು 1500 ಪೊಲೀಸರನ್ನು ನಿಯೋಜಿಸಲಾಗಿದೆ.

ಹಾಸ್ಟೆಲ್‌ಗೆ ನುಗ್ಗಿದರೇ ಪೊಲೀಸರು?:

ಈ ನಡುವೆ, ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ನುಗ್ಗಿ ಪೊಲೀಸರು ಥಳಿಸಿದರು ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ.

ಆರೋಪ-ಪ್ರತ್ಯಾರೋಪ:

‘ಬೇಟಿ ಪಢಾವೋ ಬೇಟಿ ಬಚಾವೋ ಅಂದ್ರೆ ಇದೇನಾ’ ಎಂದು ಉತ್ತರಪ್ರದೇಶ ಹಾಗೂ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಇತರ ಪ್ರತಿಪಕ್ಷಗಳೂ ಸರ್ಕಾರದ ನಡೆಯನ್ನು ಪ್ರಶ್ನಿಸಿವೆ. ಈ ನಡುವೆ, ಘಟನೆಯ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ವಿವರ ಬಯಸಿದ್ದಾರೆ.