ಮಡಿಕೇರಿ (ಫೆ.16): ದಿನದಿಂದ ದಿನಕ್ಕೆ ದಿಡ್ಡಳ್ಳಿಯಲ್ಲಿ ಹೋರಾಟಗಳು ಹೆಚ್ಚಾಗುತ್ತಾ ಬರುತ್ತಿದ್ದಂತೆ, ಕೊಡಗು ಜಿಲ್ಲಾಡಳಿತ ತನ್ನದೇ ದಾರಿಯಲ್ಲಿ ಸಾಗುತ್ತಿದೆ.

ಕಳೆದ ಬಾರಿ ದಿಡ್ಡಳ್ಳಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್ ಸೀತಾರಾಮ್, ಅಧಿಕೃತ ದಾಖಲೆ ಹೊಂದಿರುವ 528 ಕುಟುಂಬಗಳಿಗೆ ನಿವೇಶನ ನೀಡುವುದಾಗಿ ಹೇಳಿದ್ದರು. ಅದರಂತೆ ಪ್ರತೀ ಕುಟುಂಬಕ್ಕೆ 30/30 ಅಳತೆಯಲ್ಲಿ ನಿವೇಶನಗಳನ್ನು ನಿಗದಿ ಪಡಿಸಿದ್ದು,  ವಿರಾಜಪೇಟೆ ತಾಲೂಕಿನ ಕೆದಮಳ್ಳೂರಿನಲ್ಲಿ 176 ನಿವೇಶನ, ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿಯಲ್ಲಿ 181 ಮತ್ತು ರಾಂಪುರದಲ್ಲಿ 171 ನಿವೇಶನಗಳನ್ನು ಗುರುತಿಸಿ ಲಾಟರಿ ಮೂಲಕ ಹಕ್ಕು ಪತ್ರ ನೀಡಲು ಮುಂದಾಗಿದೆ.

ಅಷ್ಟೆ ಅಲ್ಲದೇ ನಿಗದಿ ಪಡಿಸಿದ ಸ್ಥಳದಲ್ಲಿ, ಮನೆಯನ್ನೂ ನಿರ್ಮಾಣ ಮಾಡಿಕೊಟ್ಟು, ಗುಡಿಕೈಗಾರಿಕೆಗೂ ಅವಕಾಶ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ ದಿಡ್ಡಳ್ಳಿಯ ನಿವಾಸಿಗಳು ಮಾತ್ರ ಯಾವುದೇ ಕಾರಣಕ್ಕೂ ತಾವು ದಿಡ್ಡಳ್ಳಿ ತೊರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.