ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೆ ಸರ್ಕಾರ ರಚನೆಯ ಅವಕಾಶ?
ರಾಜಕೀಯ ಎಲ್ಲರೂ ಮಾಡ್ತಾರೆ. ಆದರೆ ಅಧಿಕಾರ ಅಂದ್ರೆ ನಂಬರ್ ಗೇಮ್, ಜೊತೆಗೆ ಒಂದಿಷ್ಟು ಕಾನೂನುಗಳು ಅಷ್ಟೇ. ಈ ಆಟದಲ್ಲಿ ಪಳಗಿದವರು ವಿಧಾನಸೌಧದ ಕೋಣೆ ಸಂಖ್ಯೆ 323ರಲ್ಲಿ ವಿರಾಜಮಾನರಾಗ್ತಾರೆ.
ಬೆಂಗಳೂರು (ಜು.26): ಕಳೆದ ವರ್ಷ ರಾಜಕೀಯ ಮಹಾಡ್ರಾಮಾದ ಬಳಿಕ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ, 14 ತಿಂಗಳು ಆಡಳಿತ ನಡೆಸಿ, ಸದನದಲ್ಲಿ ವಿಶ್ವಾಸ ಕಳೆದುಕೊಂಡು ಪತನವಾಗಿದೆ.
ಸದನದಲ್ಲಿ 105 ಸದಸ್ಯ ಬಲವಿರುವ ಬಿಜೆಪಿ, ಸರ್ಕಾರ ರಚನೆಗೆ ಮುಂದಾಗಿದ್ದು ಇನ್ನಿಲ್ಲದ ಕಸರತ್ತು ನಡೆಸಿದೆ. ಈವೆರೆಗೆ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದ ಕಾಂಗ್ರೆಸ್ ನಾಯಕರು, ಈಗ ಹೊಸ ರಣತಂತ್ರವನ್ನು ಹೆಣೆದಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅದ್ಹೇಗೆ ಬಹುಮತ ಸಾಬೀತು ಪಡಿಸ್ತಾರೆ? ನೋಡೇ ಬಿಡೋಣ ಎಂಬ ವರಸೆ ಕಾಂಗ್ರೆಸ್ ನಾಯಕರದ್ದು. ಕಾಂಗ್ರೆಸ್ ನಾಯಕರ ಈ ‘ಆತ್ಮವಿಶ್ವಾಸ’, ಬಿಜೆಪಿಗೆ ಗಂಟಲ ಮುಳ್ಳಾಗಿರುವುದು ಸುಳ್ಳಲ್ಲ.
ಕಳೆದ ವರ್ಷ ತರಾತುರಿಯಲ್ಲಿ ಸಿಎಂ ಪದಗ್ರಹಣ ಮಾಡಿ, ಯಡಿಯೂರಪ್ಪ 55 ಗಂಟೆಗಳಲ್ಲೇ ಮಾಜಿ ಸಿಎಂ ಆಗ್ಬಿಟ್ಟಿದ್ದರು. ಇಂತಹ ಕಹಿ ಅನುಭವ ತಮ್ಮ ಜೋಳಿಗೆಯಲ್ಲಿಟ್ಟುಕೊಂಡು, ಈ ಬಾರಿ ಮತ್ತೆ ಎಡವಿದರೆ ಬಿಜೆಪಿ ಕಥೆ ಅಷ್ಟೇ!
ಇದನ್ನೂ ಓದಿ | 4ನೇ ಬಾರಿ ಮುಖ್ಯಮಂತ್ರಿಯಾಗಿ BSY ಪ್ರಮಾಣ ವಚನ : ಮುಹೂರ್ತ ಫಿಕ್ಸ್
ಹಾಗಾದ್ರೆ ಸಮಸ್ಯೆ ಇರುವುದೆಲ್ಲಿ? ಸದನದ ನಂಬರ್ ಗೇಮನ್ನು ಒಮ್ಮೆ ಅವಲೋಕಿಸಿದರೆ ನಮಗೆ ಉತ್ತರ ಸಿಗುತ್ತದೆ.
ಸದನದ ಒಟ್ಟು ಬಲ:224
ಅನರ್ಹಗೊಂಡ ಶಾಸಕರ ಸಂಖ್ಯೆ: 3
ಸದನದ ಸದ್ಯದ ಒಟ್ಟು ಬಲ: 221
ಬಹುಮತ ಸಾಬೀತು ಪಡಿಸಲು ಬೇಕಾದ ಸಂಖ್ಯೆ: 111
ಬಿಜೆಪಿ ಸದಸ್ಯರ ಸಂಖ್ಯೆ: 105
ಪಕ್ಷೇತರ ಬೆಂಬಲ: 1
ಓಟ್ಟು ಬಲ: 106
ಕಾಂಗ್ರೆಸ್ ಸದಸ್ಯರ ಸಂಖ್ಯೆ (ಮೂವರ ಅನರ್ಹತೆ ಬಳಿಕ) : 76
ಜೆಡಿಎಸ್ ಶಾಸಕರ ಸಂಖ್ಯೆ + BSP : 37+1= 38
ಮೈತ್ರಿಯ ಒಟ್ಟು ಸಂಖ್ಯೆ: 114
ಆಂಗ್ಲೋ ಇಂಡಿಯನ್ ಸದಸ್ಯ: 1
ಹಾಲಿ ಅತೃಪ್ತರ ಸಂಖ್ಯೆ = 14
ಗೈರು ಹಾಜರು (ಬಿ. ನಾಗೇಂದ್ರ)= 1
ಒಟ್ಟು- 100
ರಾಜಕೀಯ ಹೈಡ್ರಾಮಾದ ಕ್ಷಣ-ಕ್ಷಣದ ಅಪ್ಡೇಟ್ಸ್‌ಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಈ ನಡುವೆ, 6-7 ಅತೃಪ್ತ ಶಾಸಕರನ್ನು ಮನವೊಲಿಸುವ ಕಾಂಗ್ರೆಸ್ ನಾಯಕರ ಪ್ರಯತ್ನ ಫಲಕೊಟ್ಟರೆ, ಯಡಿಯೂರಪ್ಪ ಮತ್ತೆ ಬಹುಮತ ಸಾಬೀತು ಪಡಿಸಲಾಗದೇ ಕೆಳಗಿಳಿಯಲೇ ಬೇಕು! ಆ ಸಂದರ್ಭದಲ್ಲಿ, ಎಲ್ಲಾ ಪಕ್ಷಗಳಿಗೆ ಅವಕಾಶ ಕೊಟ್ಟ ಬಳಿಕವೂ ಬಹುಮತ ಸಾಬೀತು ಪಡಿಸಲಾಗದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುವ ಸಾಧ್ಯತೆಗಳೇ ಹೆಚ್ಚಿವೆ.
ಈ ಅವಧಿಯಲ್ಲಿ, ಅತೃಪ್ತರ ಮನವೊಲಿಸುವಿಕೆ ಫಲಕೊಟ್ಟರೆ, ರಾಜಕೀಯ ಕಸರತ್ತುಗಳು ವರ್ಕ್ ಔಟ್ ಆದರೆ ಕಾಂಗ್ರೆಸ್ ಮತ್ತೆ ಸರ್ಕಾರ ರಚಿಸುವ ಹಕ್ಕು ಮಂಡಿಸುವ ಅವಕಾಶವೂ ಇದೆ. ಆದರೆ ಅದು ಸುಲಭನಾ? ಕಾಂಗ್ರೆಸ್ ಆ ರೀತಿ ಮಾಡುತ್ತೋ? ಎಂದು ಕಾಲವೇ ಉತ್ತರಿಸಲಿದೆ.