ಬೆಂಗಳೂರು [ಜು.26]: ಕೇಂದ್ರದ ಗ್ರೀನ್ ಸಿಗ್ನಲ್‌ಗೆ ಕಾಯುತ್ತಿದ್ದ ಕರ್ನಾಟಕ ಬಿಜೆಪಿ ಅಧಿಕಾರಕ್ಕೆ ಏರಲು ಸಜ್ಜಾಗಿದೆ. ಬಿ.ಎಸ್.ಯಡಿಯೂರಪ್ಪ ಇಂದೇ ರಾಜ್ಯದ ಮುಖ್ಯಮಂತ್ರಿಯಾಗಿ 4ನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಅವಕಾಶ ನೀಡಲು ಮನವಿ ಮಾಡಿದರು. ತಮ್ಮದು ಸಿಂಗಲ್ ಲಾರ್ಜೆಸ್ಟ್ ಪಕ್ಷ ಎಂದು ಹಕ್ಕು ಮಂಡಿಸಿದ್ದಾರೆ.

ಕೇಂದ್ರಕ್ಕೆ ತೆರಳಿದ್ದ BJP ನಿಯೋಗಕ್ಕೆ ಬಿಜೆಪಿ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಸಂಜೆ 6.15ರ ಒಳಗೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. 

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ 15 ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸರಕಾರ ಅತಂತ್ರವಾಗಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರು. ಈ ಬೆನ್ನಲ್ಲೇ 2018ರ ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಸರಕಾರ ರಚಿಸಲು ಮುಂದಾಗಿದೆ. 

ಇದು ಕರ್ನಾಟಕದ ರಾಜಕೀಯದಾಟ

ಕಳೆದ ವಿಧಾನಸಭಾ ಚುನಾವಣೆ ಮುಗಿದಾಗಲೂ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸರಕಾರ ರಚಿಸಲು 112 ಮ್ಯಾಜಿಕ್ ನಂಬರ್ ಆಗಿದ್ದು, ಬಿಜೆಪಿ ಕೇವಲ 104 ಸ್ಥಾನಗಳನ್ನು ಪಡೆದಿತ್ತು. ಆದ್ದರಿಂದ ವಿಶ್ವಾಸ ಮತವನ್ನೇ ಯಾಚಿಸದೇ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.  ಮತ್ತೆ ನಡೆದ ರಾಜಕೀಯ ಆಟದಲ್ಲಿ ಜೆಡಿಎಸ್, ಕಾಂಗ್ರೆಸ್ ಜತೆ ಕೈ ಜೋಡಿಸಿ ಸರಕಾರ ರಚಿಸಿದ್ದು, 14 ತಿಂಗಳ ಕಾಲ ಯಾವುದೇ ಅಡೆ ತಡೆ ಇಲ್ಲದೇ ಮೈತ್ರಿ ಮುಂದುವರಿದಿತ್ತು. ಯಾವಾಗ ಕೆಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಂಡಾಯವೆದ್ದರೋ, ರಾಜ್ಯದಲ್ಲಿ ಮತ್ತೆ ರಾಜಕೀಯ ಆಟ ಆರಂಭವಾಯಿತು.

ರಾಜ್ಯಪಾಲರಾದ ವಾಜುಬಾಯಿ ವಾಲಾ ಅವರು ರಾಜ್ಯದ 22ನೇ ಮುಖ್ಯಮಂತ್ರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.