ನಡಹಳ್ಳಿ ಜೆಡಿಎಸ್ ತೊರೆದು, ಬಿಜೆಪಿ ಸೇರಿದ್ದು ಏಕೆ ಗೊತ್ತಾ?

First Published 24, Mar 2018, 12:42 PM IST
Why Nadahalli joins BJP from JDS
Highlights

ಜೆಡಿಎಸ್‌ ನಾಯಕರು ಕಾಂಗ್ರೆಸ್‌ ಜತೆ ಒಳ ಒಪ್ಪಂದ ಮಾಡಿಕೊಂಡು ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದ್ದರು ಎಂದು ದೇವರ ಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಆಪಾದಿಸಿದ್ದಾರೆ.

ಮುದ್ದೇಬಿಹಾಳ: ಜೆಡಿಎಸ್‌ ನಾಯಕರು ಕಾಂಗ್ರೆಸ್‌ ಜತೆ ಒಳ ಒಪ್ಪಂದ ಮಾಡಿಕೊಂಡು ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದ್ದರು ಎಂದು ದೇವರ ಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಆಪಾದಿಸಿದ್ದಾರೆ.

ಜೆಡಿಎಸ್‌ ಸಖ್ಯ ತೊರೆದು ಬಿಜೆಪಿ ಸೇರ್ಪಡೆಗೊಂಡ ಮೇಲೆ ಮೊದಲ ಬಾರಿ ಶುಕ್ರವಾರ ರಾತ್ರಿ ಪಟ್ಟಣ ಪ್ರವೇಶಿಸಿದರು. ಈ ವೇಳೆ ಬಿಜೆಪಿ ಮೂಲ ಕಾರ್ಯಕರ್ತರು ನೀಡಿದ ಅದ್ಧೂರಿ ಸ್ವಾಗತ ಸ್ವೀಕರಿಸಿ ಬಸವೇಶ್ವರ ವೃತ್ತದಲ್ಲಿ ಜನರನ್ನುದ್ದೇಶಿಸಿ ಅವರು ಮಾತನಾಡಿದ ಅವರು, ನನ್ನನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್‌ ಜೊತೆ ಜೆಡಿಎಸ್‌ ನಾಯಕರು ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ದೂರಿದರು.

ನಾನು ಗೊಂದಲದಲ್ಲಿದ್ದಾಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಕರೆದು ನೀನು ಉತ್ತರ ಕರ್ನಾಟಕದ ಜನಪ್ರಿಯ ವ್ಯಕ್ತಿ, ಜೆಡಿಎಸ್‌ನಲ್ಲಿರೋದರಿಂದ ಸೂಕ್ತ ಸ್ಥಾನಮಾನ ಸಿಗೋದು ಅನುಮಾನ. ಬಿಜೆಪಿಗೆ ಬಂದು ಮುದ್ದೇಬಿಹಾಳ, ದೇವರ ಹಿಪ್ಪರಗಿ ವಿಧಾನಸಭಾ ಮತಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸೋ ಜವಾಬ್ದಾರಿ ತಗೋಬೇಕು ಎಂದು ಆಹ್ವಾನಿಸಿದರು. ಶರತ್ತು ಇಲ್ಲದೆ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದೇನೆ ಎಂದು ಸ್ಪಷ್ಟಪಡಿಸಿದರು.

2008ರಲ್ಲಿ ಬಿಜೆಪಿಯಿಂದಲೇ ರಾಜಕೀಯ ಜೀವನ ಪ್ರಾರಂಭಿಸಲು ಪ್ರಯತ್ನಿಸಿದ್ದೆ. ಕಾಂಗ್ರೆಸ್‌ನಲ್ಲಿ ಶಾಸಕನಾಗಿ ನೋವನುಭವಿಸಿ ಹೊರಬಂದ ಮೇಲೆ ಮತ್ತೇ ಬಿಜೆಪಿ ಸೇರಲು ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. 2 ವರ್ಷದಿಂದ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದರೂ ಮನಸ್ಸು ಮಾತ್ರ ಬಿಜೆಪಿ ಕಡೆ ಇತ್ತು ಎಂದರು.

loader