ಶಬರಿಮಲೆ[ಜ.02]: ತೀವ್ರ ವಿರೋಧದ ನಡುವೆ ರಾತ್ರೋ ರಾತ್ರಿ ಚಿಕ್ಕ ಸುಳಿವೂ ನೀಡದೆ ಮಹಿಳೆಯರಿಬ್ಬರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಿ ಭಾರೀ ವಿವಾದ ಹುಟ್ಟು ಹಾಕಿದ್ದಾರೆ. ಶತಮಾನಗಳಿಂದ ನಡೆದು ಬಂದ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದ್ದು, ಕೇರಳದಲ್ಲಿ ಈಗಾಗಲೇ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಅಷ್ಟಕ್ಕೂ ಈ ಅಯ್ಯಪ್ಪ ದೇಗುಲಕ್ಕೆ ಪ್ರವೇಶಿಸಿ ಕಿಚ್ಚು ಹೊತ್ತಿಸಿದ ಬಿಂದು ಹಾಗೂ ಕನಕದುರ್ಗ ಯಾರು? ಇವರ ಹಿನ್ನೆಲೆ ಏನು? ಇಲ್ಲಿದೆ ಅಚ್ಚರಿ ಬೀಳಿಸುವ ಮಾಹಿತಿ

ಶಬರಿಮಲೆಗೆ ರಾತ್ರೋ ರಾತ್ರಿ ಇಬ್ಬರು ಮಹಿಳೆಯರು ಪ್ರವೇಶಿಸಿದ್ದು ಹೇಗೆ? ಇಲ್ಲಿದೆ ವಿವರ

ಯಾರು ಈ ಬಿಂದು?

ಬಿಂದು ಓರ್ವ ದಲಿತ ಹಕ್ಕುಗಳಿಗಾಗಿ ಹೋರಾಡುವ ಹೋರಾಟಗಾರ್ತಿಯಾಗಿದ್ದಾರೆ. 42 ವರ್ಷದ ಬಿಂದು, ಥಲಸ್ಸರಿ ಸ್ಕೂಲ್ ಆಫ್ ಲೀಗಲ್ ಸ್ಟಡೀಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಲಿತ ಕುಟುಂಬಕ್ಕೆ ಸೇರಿದ ಬಿಂದು, ಆರಂಭದಲ್ಲಿ ಕಮ್ಯೂನಿಸ್ಟ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇದೇ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದ ಹರಿಹರನ್ ಎಂಬವರನ್ನು ಮದುವೆಯಾಗಿದ್ದರು. ಆದರೆ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿದ ಹಿನ್ನೆಲೆಯಲ್ಲಿ ಹರಿಹರನ್ ಹಾಗೂ ಬಿಂದು ಇಬ್ಬರೂ 2010ರಲ್ಲಿ ರಾಜಕೀಯ ಪಕ್ಷ ತೊರೆದು, ಬೇರೆ ವೃತ್ತಿ ಆರಿಸಿಕೊಂಡಿದ್ದರು. 

ಈ ಮಹಿಳೆಯರಿಗೇಕೆ ಶಬರಿಮಲೆಗೆ ಹೋಗೋ ತವಕ.?

ಹೀಗಿದ್ದರೂ ಇವರ ದಲಿತಪರ ಕಾರ್ಯ ಮುಂದುವರೆದಿತ್ತು. ದಲಿತ ಹೋರಾಟಗಾರ್ತಿಯಾಗಿದ್ದ ಬಿಂದು, ಇದೇ ಗುರಿಯೊಂದಿಗೆ ಶಬರಿಮಲೆಗೆ ತೆರಳಿದ್ದರು. ಆದರೆ ಬಿಂದು ಕುಟುಂಬಸ್ಥರು ಶಬರಿಮಲೆಗೆ ಮಹಿಳಾ ಪ್ರವೇಶವನ್ನು ಆರಂಭದಿಂದಲೂ ವಿರೋಧಿಸಿದ್ದರು. ಹೀಗಿದ್ದರೂ ಬಿಂದು ದಿನಬೆಳಗಾಗುವುದರಲ್ಲಿ, ಯಾರೊಬ್ಬರಿಗೂ ಸುಳಿವು ನೀಡದೆ ಕೇವಲ ತನ್ನ ಗಂಡ ಹರಿಹರನ್ ಗೆ ಶಬರಿಮಲೆಗೆ ತೆರಳುವುದಾಗಿ ತಿಳಿಸಿದ್ದರೆನ್ನಲಾಗಿದೆ.

ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ರೆಹನಾ ಫಾತಿಮಾ ಇನ್ನೊಂದು ರೂಪವಿದು

ಅಯ್ಯಪ್ಪನ ಭಕ್ತೆ ಕನಕದುರ್ಗಾ:

ಬಿಂದು ಓರ್ವ ಹೋರಾಟಗಾರ್ತಿಯಾಗಿದ್ದರೆ, ದೇಗುಲ ಪ್ರವೇಶಿಸಿದ ಮತ್ತೊಬ್ಬ ಮಹಿಳೆ ಕನಕದುರ್ಗಾ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಮಹಿಳೆಯಾಗಿದ್ದಾರೆ. ಅಯ್ಯಪ್ಪನ ಅಪ್ಪಟ ಭಕ್ತೆಯಾಗಿರುವ ಕನಕದುರ್ಗಾ ಮಲಪ್ಪುರಂ ನಿವಾಸಿ. ಯಾವುದೇ ಹೋರಾಟಗಳಲ್ಲಿ ಗುರುತಿಸಿಕೊಳ್ಳದ ಈಕೆ, ಅಯ್ಯಪ್ಪನ ದರ್ಶನ ಪಡೆಯಬೇಕೆಂಬ ಮಹದಾಸೆಯಿಂದ ಶಬರಿಮಲೆಗೆ ಪ್ರವೇಶಿಸಿದ್ದರು. ಸರ್ಕಾರಿ ಕಚೇರಿಯಲ್ಲಿ[ರೇಷನ್ ಸಪ್ಲೈಯರ್] ಕೆಲಸ ಮಾಡುವ ಈಕೆ, ತಾನು ಶಬರಿಮಲೆಗೆ ತೆರಳುತ್ತಿರುವ ವಿಚಾರವನ್ನು ಕುಟಂಬದ ಯಾವೊಬ್ಬ ಸದಸ್ಯನಿಗೂ ತಿಳಿಸಿಲ್ಲ. ಇವರ ಕುಟುಂಬವೂ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ವಿರೋಧಿಸುತ್ತಿತ್ತು.

ಪರಿಚಯವೇ ಇಲ್ಲದ ಬಿಂದು, ಕನಕದುರ್ಗಾ ಗೆಳೆತನದ ಹಿಂದಿನ ರಹಸ್ಯ!

ಇಬ್ಬರ ಹಿನ್ನೆಲೆಯನ್ನು ಗಮನಿಸಿದರೆ, ಓರ್ವ ಬ್ರಾಹ್ಮಣ ಮಹಿಳೆ ಹಾಗೂ ಅಯ್ಯಪ್ಪನ ಅಪ್ಪಟ ಭಕ್ತೆ, ಮತ್ತೊಬ್ಬಾಕೆ ಬಿಂದು ದಲಿತ ಹೋರಾಟಗಾರ್ತಿ. ಆದರೆ ಇಬ್ಬರ ಕುಟುಂಬವೂ ದೇಗುಲ ಪ್ರವೇಶವನ್ನು ವಿರೋಧಿಸಿದ್ದರು. ಹೀಗಿದ್ದರೂ ಇವರು ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದೆ, ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಈ ಹಿಂದೆ ಅಂದರೆ 2018ರ ಡಿಸೆಂಬರ್ 24ರಂದು ಇಬ್ಬರೂ ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದರು. ಆದರೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂತಿರುಗಿದ್ದರು.ಇದಾದ ಬಳಿಕ ಬಿಜೆಪಿ ಪ್ರತಿಭಟನಾಕಾರರು ಅವರ ಮನೆ ಮೇಲೆ ದಾಳಿ ನಡೆಸಿದ್ದರೆನ್ನಲಾಗಿದೆ. ಆದರೂ ಛಲ ಬಿಡದ ಬಿಂದು ಹಾಗೂ ಕನಕದುರ್ಗಾ ಬುಧವಾರ ಮುಂಜಾನೆ ಸುಮಾರು 03.45ಕ್ಕೆ ದೇಗುಲ ಪ್ರವೇಶಿಸಿದ್ದಾರೆ. ಈ ಮೂಲಕ ಶತಮಾನಗಳಿಂದ ನಡೆದು ಬಂದಿದ್ದ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಇತಿಹಾಸ ನಿರ್ಮಿಸಿದ್ದಾರೆ.