ತಿರುವನಂತಪುರಂ[ಜ.02]: ತೀವ್ರ ವಿರೋಧದ ನಡುವೆಯೂ ಅಯ್ಯಪ್ಪ ಸ್ವಾಮಿಯ ಭಕ್ತರು ಎನ್ನಲಾದ ಬಿಂದು ಹಾಗೂ ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ಸದ್ದಿಲ್ಲದೇ ಶಬರಿಮಲೆ ದೇಗುಲ ಪ್ರವೇಶಿಸಿ ಚರ್ಚೆ ಹುಟ್ಟು ಹಾಕಿದ್ದಾರೆ. ಯಾರಿಗೂ ಸಣ್ಣ ಸುಳಿವು ಇಲ್ಲದಂತೆ ಇಬ್ಬರು ಮಹಿಳೆಯರು ತಮ್ಮ ಪ್ಲ್ಯಾನ್ ಅನ್ವಯ ಅಯ್ಯಪ್ಪನ ದರ್ಶನ ಪಡೆದಿದ್ದು ಹೇಗೆ? ಇಲ್ಲಿದೆ ಇಬ್ಬರು ಮಹಿಳೆಯರ ಪ್ಲ್ಯಾನ್

ಮಂಗಳವಾರದಂದು ಸಮಾನತೆ ಹಾಗೂ ಶಬರಿಮಲೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಕೇರಳದಲ್ಲಿ 620 ಕಿ.ಮೀ ಉದ್ದದ ಮಹಿಳಾ ಗೋಡೆ ನಿರ್ಮಿಸಲಾಗಿತ್ತು. ಇದನ್ನು ಕೇರಳದ ಸಿಎಂ ಪಿಣರಾಯಿ ವಿಜಯನ್ ಬೆಂಬಲಿಸಿದ್ದರೆ, ಪ್ರಧಾನಿ ಮೋದಿ ವಿರೋಧಿಸಿದ್ದರು. ಇವೆಲ್ಲದರ ನಡುವೆಯೇ ಅತ್ತ ಬಿಂದು ಹಾಗೂ ಕನಕದುರ್ಗಾ ದೇಗುಲ ಪ್ರವೇಶಿಸಲು ಯೋಜನೆ ರೂಪಿಸಿದ್ದರು. ತಮ್ಮ ಯೋಜನೆ ಅನ್ವಯ ಇಬ್ಬರು ಮಹಿಳೆಯರು ಮೊದಲು ಮಧ್ಯರಾತ್ರಿ ಸುಮಾರಯು 12.30ಕ್ಕೆ ಪಂಪಾ ಪ್ರದೇಶಕ್ಕೆ ಬಂದಿಳಿಯುತ್ತಾರೆ.  

ಇದಾದ ಬಳಿಕ ಪೊಲೀಸರ ಬಳಿ ತೆರಳಿದ ಮಹಿಳೆಯರು 15 ನಿಮಿಷಗಳ ಕಾಲ ಚರ್ಚೆ ನಡೆಸಿ ದೇಗುಲ ಪ್ರವೇಶಿಸುವಾಗ ಭದ್ರತೆ ನೀಡುವಂತೆ ಕೇಳಿಕೊಂಡಿದ್ದಾರೆ. ಯಾರಿಗೂ ಅನುಮಾನ ಬರಬಾರದೆಂಬ ನಿಟ್ಟಿನಲ್ಲಿ ಈ ಮಹಿಳೆಯರು ಮಾಲೆ ಹಾಕಿಕೊಂಡಿದ್ದರಲ್ಲದೇ, ಮುಖ ಕಾಣದ ಹಾಗೆ ಸಂಪೂರ್ಣವಾಗಿ ಬಟ್ಟೆ ಮುಚ್ಚಿಕೊಂಡಿದ್ದರು. ಎಲ್ಲರೂ ಮಾಲೆ ಹಾಕಿದ್ದರಿಂದ ಇವರು ಮಹಿಳೆಯರು ಎನ್ನುವ ಅನುಮಾನ ಬರಲಿಲ್ಲ. ಬೇರೆ ಭಕ್ತರಿಗೆ ಅನುಮಾನ ಬಾರದಂತೆ ತಡೆಯಲು 30ಕ್ಕೂ ಹೆಚ್ಚು ಪೊಲೀಸರು ಸಿವಿಲ್ ಡ್ರೆಸ್ನಲ್ಲಿ ಭದ್ರತೆ ನೀಡಿದ್ದಾರೆ. 

2.45ಕ್ಕೆ ಪಂಪಾ ಬಿಟ್ಟು ಪಾದಯಾತ್ರೆ ಮೂಲಕ 2.45ಕ್ಕೆ ಸನ್ನಿಧಿಗೆ ಎಂಟ್ರಿ ಕೊಟ್ಟ ಮಹಿಳೆಯರು, 2.45ರಿಂದ 3.15ರವರೆಗೆ ಆಡಳಿತ ಮಂಡಳಿ ಕಚೇರಿಯಲ್ಲಿ ಉಳಿದುಕೊಳ್ಳುತ್ತಾರೆ. ಬಳಿಕ ಸುಮಾರು ಬೆಳಗಿನ ಜಾವ 3.30ಕ್ಕೆ ಈ ಮಹಿಳೆಯರು ವಿವಿಐಪಿ ಲೈನ್ ಮೂಲಕ ದೇಗುಲ ಪ್ರವೇಶಿಸಿದ ಮಹಿಳೆಯರು ಕೇವಲ 2 ನಿಮಿಷದ ದರ್ಶನ ಪಡೆಯುತ್ತಾರೆ. 

18 ಮೆಟ್ಟಿಲು ಹತ್ತಿಲ್ಲ ಈ ಮಹಿಳೆಯರು!

ಆದರೆ ಅಯ್ಯಪ್ಪನ ದರ್ಶನ ಪಡೆದ ಈ ಮಹಿಳೆಯರು 18 ಮೆಟ್ಟಿಲು ಹತ್ತಿಲ್ಲ ಎನ್ನಲಾಗಿದೆ. ಭಕ್ತರ ಜೊತೆ ಕ್ಯೂನಲ್ಲಿ ನಿಲ್ಲಿಸದೇ ಪ್ರತ್ಯೇಕವಾಗಿ ವಿಐಪಿ ಸಾಲಿನಲ್ಲಿ ಪ್ರವೇಶಿಸಿದ್ದಾರೆ. ಒಂದು ವೇಳೆ ಪೊಲೀಸರು ಮಂಜಾಗ್ರತೆ ವಹಿಸದಿದ್ರೆ ಒಳಗೆ ಗಲಾಟೆ ಸಾಧ್ಯತೆಗಳಿದ್ದ ಹಿನ್ನೆಲೆಯಲ್ಲಿ ಎರಡು ನಿಮಿಷಗಳ ಕಾಲ 18 ಮೆಟ್ಟಿಲು ಹತ್ತುವ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತೆನ್ನಲಾಗಿದೆ. ಪುರುಷ ಭಕ್ತರು, ಬಿಜೆಪಿ ಭಕ್ತರನ್ನು ಕಣ್ತಪ್ಪಿಸಲು ಪೊಲೀಸರ ತಂತ್ರ ಇದಾಗಿತ್ತು. 

ಆಗ ಫೇಲ್, ಈಗ ಪಾಸ್!

ಬಿಂದು ಮತ್ತು ಕನಕದುರ್ಗ ಅಯ್ಯಪ್ಪನ ದರ್ಶನಕ್ಕೆ ಯತ್ನಿಸಿದ್ದು ಇದೇ ಮೊದಲಲ್ಲ. ಇವರು ಕಳೆದ ನವೆಂಬರ್‌ನಲ್ಲೂ ಈ ಮಹಿಳೆಯರಿಬ್ಬರು ಅಯ್ಯಪ್ಪನ ದರ್ಶನಕ್ಕೆ ಯತ್ನಿಸಿ ವಿಫಲವಾಗಿದ್ದರು. ಆದರೀಗ ಎರಡನೇ ಬಾರಿಯ ಪ್ರಯತ್ನದಲ್ಲಿ ಅಯ್ಯಪ್ಪನ ದರ್ಶನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ವಿರೋಧದ ನಡುವೆಯೂ ಸದ್ದಿಲ್ಲದಂತೆ ದೇಗುಲ ಪ್ರವೇಶಿಸಿದ ಮಹಿಳೆಯರ ವಿರುದ್ಧ ಅಯ್ಯಪ್ಪ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ಈಗಾಗಲೇ ಬಿಗಿ ಭದ್ರತೆ ಕಲ್ಪಿಸಿಕೊಡಲಾಗಿದ್ದು, ಮನೆಗೂ ಪೊಲೀಸ್ ಪ್ರೊಟೆಕ್ಷನ್ ನೀಡಲಾಗಿದೆ.