ಬೆಂಗಳೂರು[ಆ.20]: ಕಾಂಗ್ರೆಸ್‌ ಮತ್ತು ಸಮ್ಮಿಶ್ರ ಸರ್ಕಾರದ ಆಡಳಿತ ಅವಧಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಕೈಗೆತ್ತಿಕೊಳ್ಳಲಾದ ವೈಟ್‌ಟಾಪಿಂಗ್‌ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತನಿಖೆ ನಡೆಸಿ ವರದಿ ನೀಡುವಂತೆ ಮತ್ತು ಮೂರನೇ ಹಂತದ ಕಾಮಗಾರಿಗಳನ್ನು ತಡೆಹಿಡಿಯುವಂತೆ ನಿರ್ದೇಶನ ನೀಡಿದ್ದಾರೆ.

ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಮುಖ್ಯಮಂತ್ರಿಗಳ ಈ ಕ್ರಮದಿಂದಾಗಿ ಕಾಂಗ್ರೆಸ್‌ನ ಇಬ್ಬರು ಮುಖಂಡರಿಗೆ ಸಂಕಷ್ಟಎದುರಾಗಿದ್ದು, ಕೆ.ಜೆ. ಜಾಜ್‌ರ್‍ ಮತ್ತು ಡಾ.ಜಿ. ಪರಮೇಶ್ವರ್‌ ವಿರುದ್ಧ ತನಿಖೆ ನಡೆಯುವ ಸಾಧ್ಯತೆ ಇದೆ.

ಕೆ.ಜೆ. ಜಾರ್ಜ್ ಮತ್ತು ಡಾ.ಜಿ. ಪರಮೇಶ್ವರ್‌ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಅವಧಿಯಲ್ಲಿ ವೈಟ್‌ ಟಾಪಿಂಗ್‌ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಕುರಿತು ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ, ದೂರುಗಳು ಸಹ ದಾಖಲಾಗಿದ್ದವು. ಈ ದೂರಿನ ಮೇರೆಗೆ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

1 ಮತ್ತು 2ನೇ ಹಂತದ ವೈಟ್‌ಟಾಪಿಂಗ್‌ ಯೋಜನೆಯ ಕಾಮಗಾರಿಯಲ್ಲಿ ಅಪಾರ ಪ್ರಮಾಣದ ಅನುದಾನ ದುರುಪಯೋಗವಾಗಿದೆ. ತಕ್ಷಣ ಈ ಬಗ್ಗೆ ಸಮಗ್ರ ತನಿಖೆಗೆ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಮತ್ತು ಮೂರನೇ ಹಂತದ ಕಾಮಗಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಯಬೇಕು ಎಂದು ಆದೇಶಿಸಲಾಗಿದೆ.

2016-17ನೇ ಸಾಲಿನ ನಗರೋತ್ಥಾನ ಯೋಜನೆಯ ಮೊದಲನೇ ಹಂತದಲ್ಲಿ 93.47 ಕಿ.ಮೀ. ಉದ್ದದ 29 ರಸ್ತೆಗಳಲ್ಲಿ 800 ಕೋಟಿ ರು. ಅಂದಾಜು ಮೊತ್ತದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. 2017-18ನೇ ಸಾಲಿನಲ್ಲಿ 2ನೇ ಹಂತದ ಕಾಮಗಾರಿಯನ್ನು 41 ರಸ್ತೆಯಲ್ಲಿ ಕೈಗೊಳ್ಳಲು ತೀರ್ಮಾನಿಸಲಾಯಿತು. 63.26 ಕಿ.ಮೀ. ಉದ್ದದ ರಸ್ತೆಯ ಕಾಮಗಾರಿಗಾಗಿ 690 ಕೋಟಿ ರು. ಅನುದಾನ ಒದಗಿಸಲಾಗಿತ್ತು. ಅಂತೆಯೇ 2018-19ನೇ ಸಾಲಿನ ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ 3ನೇ ಹಂತದಲ್ಲಿ 123 ಕಿ.ಮೀ. ಉದ್ದ 89 ರಸ್ತೆಗಳನ್ನು 1139 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ.

ಪ್ರತಿ ಕಿ.ಮೀ.ಗೆ .11 ಕೋಟಿ:

ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾಜ್‌ರ್‍ ಮತ್ತು ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್‌ ಅವರ ವಿರುದ್ಧ ತನಿಖೆ ನಡೆಯುವ ಸಾಧ್ಯತೆಗಳಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವೈಟ್‌ ಟಾಪಿಂಗ್‌ ನಿರ್ಮಾಣಕ್ಕೆ ತಗಲುವ ವೆಚ್ಚಕ್ಕಿಂತ ಹೆಚ್ಚು ಮೊತ್ತದಲ್ಲಿ ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ವೈಟ್‌ ಟಾಪಿಂಗ್‌ಗೆ ಟೆಂಡರ್‌ ನೀಡಲಾಗಿದೆ. ಗುಣಮಟ್ಟದ ಕೊರತೆ ಸಹ ಇದ್ದು, ನಿಯಮಾವಳಿಗಳನ್ನು ಉಲ್ಲಂಘಿಸಿ ವೈಟ್‌ ಟಾಪಿಂಗ್‌ ಮಾಡಿ ಯೋಜನೆಯಲ್ಲಿ ಅವ್ಯವಹಾರ ನಡೆಸಲಾಗಿದೆ. ​ಪ್ರತಿ ಕಿ.ಮೀ.ಗೆ 11 ಕೋಟಿ ರು. ವೆಚ್ಚದಲ್ಲಿ ವೈಟ್‌ಟಾಪಿಂಗ್‌ ಮಾಡಲಾಗಿದೆ. ಯಾವ ಆಧಾರದ ಮೇಲೆ ಇಷ್ಟುಹಣ ನಿಗದಿ ಮಾಡಲಾಗಿದೆ. ಅಲ್ಲದೇ, ಅಗತ್ಯ ಇಲ್ಲದ ರಸ್ತೆಗಳಿಗೂ ವೈಟ್‌ ಟಾಪಿಂಗ್‌ ಮಾಡಲಾಗಿದೆ ಎಂದು ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿ ವರದಿ ನೀಡುವಂತೆ ಸೂಚಿಸಲಾಗಿದೆ.

ಟೆಂಡರ್‌ ಪ್ರಕ್ರಿಯೆ ಸೇರಿದಂತೆ ಇತರೆ ಕಾರ್ಯಗಳು ಸಚಿವರ ಸೂಚನೆ ಮೇರೆಗೆ ನಡೆಯುವುದರಿಂದ ಅವರ ವಿರುದ್ಧ ತನಿಖೆ ನಡೆಸುವ ನಿರೀಕ್ಷೆ ಇದೆ. ಅಲ್ಲದೇ, ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳೂ ಸಂಕಷ್ಟಕ್ಕೊಳಗಾಗುವ ಸಾಧ್ಯತೆ ಇದೆ.