ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ನೋಡುಗರೆಲ್ಲರನ್ನೂ ಭಾವುಕರನ್ನಾಗಿಸುತ್ತಿದೆ. 5 ವರ್ಷದಿಂದ ನಡೆದಾಡಲು ಸಾಧ್ಯವಾಗದೆ ವೀಲ್ ಚೇರ್ ನಲ್ಲಿದ್ದ ವರನೊಬ್ಬ, ತನ್ನ ವಧುವನ್ನು ಕಂಡು ಎದ್ದು ನಿಂತು ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸಿದ್ದಾನೆ. ವಧುವಿನ ಮೇಲಿನ ವರನ ಪ್ರೀತಿ ಕಂಡು ಅಲ್ಲಿ ನೆರೆದಿದ್ದವರೂ ಭಾವುಕರಾಗಿದ್ದಾರೆ. ಫೇಸ್ ಬುಕ್ ನಲ್ಲಿ ಈ ವಿಡಿಯೋವನ್ನು 6 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 

ಈ ಘಟನೆ ಬ್ರೆಜಿಲ್ ನಲ್ಲಿ ನಡೆದಿದ್ದು ಎನ್ನಲಾಗಿದೆ. ವಿಡಿಯೋದಲ್ಲಿ ಸ್ಮಿತ್ ರವರ 'Make It To Me' ಎಂಬ ಹಾಡು ಕೇಳಿ ಬರುತ್ತಿದ್ದು, ತನ್ನ ವಧುವನ್ನು ಕಂಡ ವರ ತಂದೆ ಹಾಗೂ ತಮ್ಮನ ಸಹಾಯದಿಂದ ಎದ್ದು ನಿಂತಿದ್ದಲ್ಲದೇ, ಡಾನ್ಸ್ ಕೂಡಾ ಮಾಡುತ್ತಾನೆ. ಅತ್ತ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಇಬ್ಬರ ಪ್ರೀತಿಯನ್ನು ಕಂಡು ಭಾವುಕರಾಗಿದ್ದಲ್ಲದೇ, ಚಪ್ಪಾಳೆ ತಟ್ಟುತ್ತಾ ಮತ್ತಷ್ಟು ಹುರುದುಂಬಿಸಿದ್ದಾರೆ.

 Extra.ie ನಲ್ಲಿ ಪ್ರಕಟಿಸಿರುವ ವರದಿಯನ್ವಯ ವರನ ಹೆಸರು ಹೂಗೋ ರೋಹ್ಲಿಂಗ್ ಎಂದು ತಿಳಿದು ಬಂದಿದೆ. 2014ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರೋಹ್ಲಿಂಗ್ ಬಳಿಕ ವೀಲ್ ಚೇರ್ ನಲ್ಲೇ ಇದ್ದ. ಈ ಸಂದರ್ಭದಲ್ಲಿ ಇವರ ಹಾಗೂ ಸಿಂತಿಯಾ ಎಂಬಾಕೆಯ ಪ್ರೀತಿ ಉಲ್ಲೇಖನೀಯ. ರೋಹ್ಲಿಂಗ್ ಗೆ ಓಡಾಸಲು ಸಾಧ್ಯವಿಲ್ಲವೆಂದು ತಿಳಿದರೂ ಸಿಂತಿಯಾ ಪ್ರೀತಿ ಕಡಿಮೆಯಾಗಲಿಲ್ಲ. ಹೀಗಾಗೇ 5 ವರ್ಷಗಳ ಬಳಿಕ ಇಬ್ಬರೂ ಮದುವೆಯಾಗಿದ್ದಾರೆ.

ತಾನು ಮೆಚ್ಚಿದ ಹುಡುಗಿ ತನ್ನ ವಧುವಾಗಿ, ಬಿಳಿ ಬಣ್ಣದ ಗೌನ್ ಧರಿಸಿ ಅಪ್ಸರೆಯಂತೆ ಬರುತ್ತಿರುವುದನ್ನು ಕಂಡು ತಡೆಯಲಾರದ ರೋಹ್ಲಿಂಗ್ ತನ್ನ ತಂದೆ ಹಾಗೂ ತಮ್ಮನ ಸಹಾಯದಿಂದ ಎದ್ದು ನಿಂತು ಡಾನ್ಸ್ ಮಾಡಿದ್ದಾನೆ. ನೋಡುಗರೆಲ್ಲರೂ 'ಇಂಟರ್ನೆಟ್ ನಲ್ಲಿ ಕಂಡು ಬಂದ ಅತ್ಯಂತ ಸುಂದರ ವಿಡಿಯೋ ಇದು' ಎಂದು ಬಣ್ಣಿಸಿದ್ದಾರೆ.